ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಡಿ. 6 ರಂದು ಯಶಸ್ವಿಯಾಗಿ ಪೂರ್ಣಗೊಂಡಿತು.
ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಭಗವಂತನ ಅನುಗ್ರಹವು ಪ್ರಾಪ್ತಿಯಾಯಿತು. ತಾಲೂಕಿನ ಶಾಸಕ ಹರೀಶ್ ಪೂಂಜಾ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಪಾಠದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಸ್ಪೂರ್ತಿದಾಯಕ ಎಂದು ನುಡಿದು ಶುಭ ಹಾರೈಸಿದರು.
ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅತೀ ವಂ ಫಾ ಲಿಯೋ ಲಸ್ರಾದೋರವರ ಹಸ್ತದಿಂದ ವಿನೂತನ ತಂತ್ರಜ್ಞಾನದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಾಲಾ ಸಂಚಾಲಕರಾದ ಅತೀ ವಂ. ಫಾ| ವಾಲ್ಟರ್ ಡಿಮೆಲ್ಲೋ, ವಿಧಾನ ಪರಿಷತ್ತಿನ ಶಾಸಕ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ ಸುಬ್ರಾಯಪಟಗಾರ ಪ್ರಾಥಮಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿವೃತ್ತಗೊಳ್ಳಲಿರುವ ಜಿಲ್ಲಾ ಉಪನಿರ್ದೇಶಕರನ್ನು ಸನ್ಮಾನಿಸಲಾಯಿತು. ವಿವಿಧ ತಾಲೂಕುಗಳ ಒಟ್ಟು 350 ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಒಟ್ಟು ಮೂವತ್ತೊಂಬತ್ತು ಸ್ಪರ್ಧೆಗಳು ವಿವಿಧ ತರಗತಿ ಕೊಠಡಿಗಳಲ್ಲಿ ಮತ್ತು ವೇದಿಕೆಗಳಲ್ಲಿ ಸುಸೂತ್ರವಾಗಿ ನೆರವೇರಿದವು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಮತ್ತು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಎಲ್ಲಾ ತಾಲೂಕುಗಳ ಶಿಕ್ಷಣ ಶಿಕ್ಷಕ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಿಕ್ಷಣ ಸಂಯೋಜಕರು ಸಮೂಹ ಸಂಪನ್ಮೂಲ ಅಧಿಕಾರಿಗಳು, ಬೆಳ್ತಂಗಡಿ ತಾಲೂಕಿನ ಸಮಸ್ತ ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಶಿಕ್ಷಕರಕ್ಷಕ ಸಂಘ ಮತ್ತು ವಿದ್ಯಾರ್ಥಿಗಳು ಅದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಜಯ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ| ಕ್ಲಿಫರ್ಡ್ ಪಿಂಟೋ, ಮತ್ತು ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ರೆನ್ನಿ ವಾಸ್ ವಿಜೇತ ತಾಲೂಕುಗಳಿಗೆ ಸಮಗ್ರ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಿದರು. ಸೆಲ್ಫೀ ಕಾರ್ನರ್, ಚೆಂಡೆಯ ಧ್ವನಿ ಮತ್ತು ಗೊಂಬೆ ಬಳಗದವರ ಹಾಸ್ಯವು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತ್ತು. ಪ್ರತಿಭಾ ಕಾರಂಜಿಯ ನೋಡೆಲ್ ಅಧಿಕಾರಿ ಶ್ರೀ ಲಕ್ಷ್ಮೀನಾರಾಯಣ ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರನ್ನು ವಂದಿಸಿದರು.