ಬೆಳ್ತಂಗಡಿ: ಸಮಾಜವನ್ನು ಗಟ್ಟಿ ಮಾಡುವ ಕೆಲಸದ ಜೊತೆಗೆ ಗ್ರಾಮಿಣ ಪ್ರದೇಶದ ಜನರಿಗೆ ಶಕ್ತಿ ನೀಡುವ ಸತ್ ಚಿಂತನೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಗ್ರಾಮಾಭಿವೃದ್ದಿ ಯೋಜನೆ ಎಂಬ ಪರಿಕಲ್ಪನೆ ಜಗತ್ತಿಗೆ ಮಾದರಿಯಾಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರುಪಂಥ ವಲಯದ ಕಲ್ಲಕಟ್ಟನಿ ಹಾಗೂ ತಣ್ಣೀರು ಪಂಥ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗು ಲಾಭಾಂಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಕಾಲದ ನಮ್ಮ ಜೀವನ ಹೇಗಿತ್ತು ಮತ್ತು ನಮ್ಮ ಅರ್ಥಿಕ ಸ್ಥಿತಿ ಗತಿಗಳ ಬಗ್ಗೆ ಸಿಂಹಾವಲೋಕನ ಮಾಡಿಕೊಳ್ಳಬೇಕು. ನಮ್ಮ ಬಡತನ ಎಂದೂ ಶಾಶ್ವತವಲ್ಲ. ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಮೂಲಕ ಬಡತನ ನಿರ್ಮೂಲನೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಪೂಜ್ಯರು ಮಾಡುತ್ತಿದ್ದಾರೆ ಎಂದು ಶ್ಲಾಗನೆ ವ್ಯಕ್ತ ಪಡಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ 45ಸಾವಿರ ಕ್ಕಿಂತಲ್ಲೂ ಮೇಲ್ಪಟ್ಟು ಮಂದಿಗೆ ಉದ್ಯೋಗದ ಅವಕಾಶವೂ ಆಗಿದೆ. ಆ ಮೂಲಕ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ ಪ್ರೇರೇಪಿಸುವ ಭಾಗವಾಗಿ ಪ್ರಧಾನಿ ಮೋದಿಯವರು ಜನ ದನ್ ಖಾತೆಯನ್ನು ತೆರೆಯುವ ಆಶಯವನ್ನು ಹೊಂದಿ ಅನುಷ್ಟಾನ ಮಾಡಿದ್ದಾರೆ. ಆದರೆ 40 ವರ್ಷಗಳ ಹಿಂದೆಯೇ ನಮ್ಮ ಭಾಗದ ಬಡ ಜನರಿಗೆ ಯೋಜನೆಯ ಮೂಲಕ ಹೆಗ್ಗಡೆ ಯವರು ಬ್ಯಾಂಕಿನ ವ್ಯವಹಾರವನ್ನು ಸರಳ ರೀತಿಯಲ್ಲಿ ಪರಿಚಯಿಸಿದ ಕೀರ್ತಿ ಹೊತ್ತಿದ್ದಾರೆ. ಪ್ರತಿಯೊಂದೂ ಹೆಣ್ಣು ಮನೆಯನ್ನು ನಡೆಸುವುದರ ಜೊತೆಗೆ ಸಮಾಜವನ್ನ ನಡೆಸಲು ಶಕ್ತರಾಗಿರುವುದು ಸ್ವ ಸಹಾಯ ಸಂಘಗಳಿಂದ, ನಾವೆಲ್ಲರೂ ಒಂದೇ ಭಾವನೆಯಿಂದ ಬದುಕುವುದೇ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಪರಿಕಲ್ಪನೆ ಆಗಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೇ ಗೌಡ, ಶಾಶ್ವತ ಕೃಷಿಗೆ ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ಕೃಷಿಕರ ಬದುಕನ್ನು ಕಟ್ಟಿಕೊಳ್ಳಲು ಹಾಕಿದ ಯೋಜನೆಯೇ ಶ್ರೀ ಕ್ಷೇ.ಧ.ಗ್ರಾ.ಯೋ., ಕುಟುಂಬಗಳು ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರೆ ಎಲ್ಲಾ ಜಾತಿ ಮತ ಧರ್ಮವನ್ನು ಮೀರಿ ಸರ್ವ ಧರ್ಮವನ್ನು ಸಮಾನವಾಗಿ ಕೊಂಡು ಹೋಗುವ ಕೆಲಸವನ್ನು ಯೋಜನೆಯು ಮಾಡಿದೆ. ಗುಂಪುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಪ್ರಗತಿ ನಿಧಿ ಸೌಲಭ್ಯವನ್ನು ಒದಗಿಸುತ್ತಿದೆ. ಗುಂಪಿನ ಸದಸ್ಯರಿಗೆ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ನೀಡಬೇಕು. ಅವುಗಳನ್ನು ಸಮರ್ಪಕವಾಗಿ ಬೆಳೆಸಬೇಕು ಯೋಜನೆಯು ಮಾರ್ಗದರ್ಶನ ಮಾತ್ರ ಮಾಡುತ್ತದೆ. ಪ್ರತಿಯೊಬ್ಬರೂ ಭವಿಷ್ಯದ ದೃಷ್ಟಿಯಿಂದ ಆದಾಯವನ್ನು ಕ್ರೋಢೀಕರಣ ಮಾಡಬೇಕು ಎಂದು ಕರೆ ನೀಡಿದರು.
ಎಸ್.ಎಸ್.ಎಫ್. ಸಂಘಟನೆಯ ದ.ಕ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಸಿರಾಜುದ್ದೀನ್ ಸಕಾಫಿ ಕನ್ಯಾನ ರವರು ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿರುವ ಜನರು ಎಂದರೆ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು. ಈಗ ಕಾಲ ಬದಲಾಗಿದೆ. ಗುಂಪುಗಳ ಮೂಲಕ ಗ್ರಾಮೀಣ ಭಾಗದಲ್ಲಿರುವ ಜನರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರುವ ಮುಖೇನ ಗೌರವವನ್ನು ಪಡೆಯುತ್ತಿದ್ದಾರೆ. ಬಡವರು ಅನುಭವಿಸುತ್ತಿರುವ ಯಾತನೆಯನ್ನು ನಾವು ನೋಡಿದ್ದೇವೆ. ತನ್ನ ಮನೆ ತನ್ನ ಕುಟುಂಬವನ್ನು ಪ್ರತಿಯೊಬ್ಬರೂ ಬೆಳೆಸುತ್ತಾರೆ. ಆದರೆ ಹೆಗ್ಗಡೆಯವರು ಬಡವರ ಮನೆ ಬೆಳಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ನವ ಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಸ್ಥಾಪಕ ಅಧ್ಯಕ್ಷ ದುಗ್ಗಪ್ಪ ಗೌಡ ಪೊಸಂದೋಡಿ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಅಗರಿ, ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ಗ್ರಾ.ಪಂ. ಸದಸ್ಯ ಮಹಮ್ಮದ್ ನಿಝಾರ್ ಕುದ್ರಡ್ಕ, ಸಾಮ್ರಾಟ್ ಕರ್ಕೇರ, ಸದಾನಂದ ಶೆಟ್ಟಿ ಮಡಪ್ಪಾಡಿ, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಶೆಟ್ಟಿ ಮಡಪ್ಪಾಡಿ, ಶ್ರೀ ಮಹಮ್ಮಾಯಿ ದೇವಸ್ಥಾನ ದೇವಿನಗರ ತಣ್ಣೀರುಪಂಥ ಅಧ್ಯಕ್ಷ ಗಂಗಯ್ಯ ನಾಯ್ಕ, ಕರ್ಪಡಿ ವಲಯ ಅಧ್ಯಕ್ಷ ರಾಜ ಶೇಕರ್ ರೈ, ತಣ್ಣೀರುಪಂತ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಶರೀಫ್, ತಣ್ಣೀರುಪಂಥ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ದನವತಿ, ನೂತನ ಅಧ್ಯಕ್ಷ ಹರೀಶ್ ಪೂಜಾರಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನು ರುದ್ರಗಿರಿ ಶ್ರೀ ಮೃತ್ಯಂಜಯ ದೇವಸ್ಥಾನದ ಕಾರ್ಯದರ್ಶಿ ದೇಜಪ್ಪ ಪೂಜಾರಿ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ವಿಶ್ವನಾಥ್ ನಿರೂಪಿಸಿದರು. ಕಲ್ಲಕಟ್ಟನಿ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಪೊಸೊOದೊಡಿ ಧನ್ಯವಾದವಿತ್ತರು.
ತಣ್ಣೀರುಪಂಥ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೋಲಾಕ್ಷಿ ವರದಿ ಮಂಡಿಸಿದರು. ಕಲ್ಲಕಟ್ಟಣಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಕಲಾವತಿ ಸಹಕರಿಸಿದರು.