ನಡ : “ಪ್ರತೀ ಸರ್ಕಾರೀ ಕಾಲೇಜು ಕೇವಲ ಅಂಕಗಳ ಹಿಂದೆ, ಫಲಿತಾಂಶದ ಹಿಂದೆ ಹೋಗುವುದಿಲ್ಲ.ಬದಲಾಗಿ ಮಕ್ಕಳ ಬದುಕಿನ ಸಮಗ್ರ ವಿಕಾಸಕ್ಕೆ ಒತ್ತು ನೀಡುತ್ತದೆ.” ಎಂದು ಸರಕಾರೀ ಪದವಿ ಪೂರ್ವ ಕಾಲೇಜು ಕೊಕ್ರಾಡಿ ಇಲ್ಲಿನ ಪ್ರಾಂಶುಪಾಲರಾದ ನೋರ್ಬರ್ಟ್ ಮಾರ್ಟಿಸ್ ನುಡಿದರು.
ಅವರು ನಡ ಸ. ಪ. ಪೂ. ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿಯ ಖ್ಯಾತ ನೋಟರಿ ವಕೀಲರಾದ ಮುರಳೀಧರ ಬಲಿಪ ಇವರು ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಹಿತಾಕಾಂಕ್ಷಿಗಳಾದ ಮುನಿರಾಜ ಅಜ್ರಿ, ಪ್ರವೀಣ್ ವಿ.ಜಿ., ಶ್ಯಾಮ್ ಸುಂದರ್, ಮೋಹನ್ ಬಾಬು, ಅಜಿತ್ ಆರಿಗ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಆರು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಿಶನ್ ಕುಮಾರ್ ಹಾಗೂ ಶ್ವೇತಾ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ತರಬೇತುದಾರರಾದ ಅಜಿತ್ ರನ್ನು ಕೃತಜ್ಞತೆಯೊಂದಿಗೆ ಅಭಿನಂದಿಸಲಾಯಿತು. ಕ್ರೀಡಾ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ವಸಂತಿ ಪಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಪವಿತ್ರ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕರಾದ ಲಿಲ್ಲಿ ಪಿ.ವಿ. ವರದಿ ವಾಚನಗೈದರು. ಪ್ರಾಂಶುಪಾಲರಾದ ಚಂದ್ರಶೇಖರ್ ಪ್ರಸ್ತಾವನೆಯ ನುಡಿಗಳೊಂದಿಗೆ ಸ್ವಾಗತಿಸಿದರು.