
ಉಜಿರೆ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮ ಸಾಧನೆಗಳು ಅದ್ಭುತ ಹಾಗೂ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಸತ್ಯ ಮತ್ತು ಧರ್ಮದ ಜೊತೆಗೆ ನಾವು ನಡೆದರೆ ಅವೇ ನಮ್ಮನ್ನು ಕಾಪಾಡುತ್ತವೆ. ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯದೊಂದಿಗೆ ಕಠಿಣ ಪರಿಶ್ರಮ ಹಾಗೂ ಭರವಸೆಗಳು ಸಹ ಬೇಕು. ಎಂದಿಗೂ ವಿದ್ಯೆಯನ್ನು ಅವಗಣಿಸಬೇಡಿ. ವಿದ್ಯೆಗೆ ಮೊದಲ ಆದ್ಯತೆ ಕೊಡಿ. ಶಿಕ್ಷಣವು ಭವಿಷ್ಯದ ಅಸ್ತಿತ್ವ ಎಂದು ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ ಅನ್ವಿತಾ ಸಾಗರ್ ಹೇಳಿದರು.
ಇವರು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಆರೋಹಣಮ್ ‘ ನಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ನಟಿ ಅನ್ವಿತಾ ಸಾಗರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ. ಎಸ್ ಅವರು ಮಾತನಾಡಿ ‘ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆ ಇರುತ್ತದೆ. ಅದನ್ನು ಪ್ರಕಾಶಕ್ಕೆ ಬರುವಂತೆ ಮಾಡುವುದು ಮುಖ್ಯ. ವಿದ್ಯಾರ್ಥಿಯಾದವನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ಎಷ್ಟು ತೊಡಗಿಸಿಕೊಳ್ಳುತ್ತಾನೆಂಬುದು ಕೂಡ ಪ್ರಮುಖವಾಗುತ್ತದೆ. ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅಂತಹ ಅಭಿರುಚಿಯುಳ್ಳ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ ‘ ಎಂದು ನುಡಿದರು.
ಮಂಗಳೂರಿನ ಶಿಕ್ಷಣತಜ್ಞ ದಿ.ಶ್ಯಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಪನ್ಯಾಸಕಿಯರ ತಂಡವನ್ನು ಗೌರವಿಸಲಾಯಿತು.
ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣಮ್ಯಾ ಜಿ ಅವರ ಕವನ ಸಂಕಲನ ‘ ಪುಟ್ಟ ಹೆಜ್ಜೆ ‘ ಯನ್ನು ಅಭ್ಯಾಗತರು ಬಿಡುಗಡೆಗೊಳಿಸಿದರು.
ದತ್ತಿನಿಧಿ ಬಹುಮಾನ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿನ ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿಂದಿನ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕ್ರೀಡಾರಂಗದಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ , ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾ ಪಟುಗಳನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಸುರೇಂದ್ರ ಜೈನ್ ಅವರು ಶುಭಾಶಯ ಪತ್ರಗಳನ್ನು ವಾಚಿಸಿದರು. ಉಪನ್ಯಾಸಕಿ ಚೇತನಾ ಕುಮಾರಿ ಪರಿಚಯಿಸಿದರು. ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಸ್ವಾಗತಿಸಿ , ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಕುಮಾರಿ ವಂದಿಸಿದರು. ವಿದ್ಯಾರ್ಥಿಗಳಾದ ಸಹನಾ ಹಾಗೂ ನಿಜ ಕುಲಾಲ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.