ಅಳದಂಗಡಿ : ಸರ್ಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕಲು ಕಲಿಯುತ್ತಾರೆ. ಜೀವನದ ಕಷ್ಟಗಳನ್ನು ಎದುರಿಸಲು ಶಕ್ತರಾಗುತ್ತಾರೆ. ಸಾಧಕರ ಜೀವನ ಚರಿತ್ರೆಯನ್ನು ಓದಿ ತಾವು ಕೂಡ ಸಮಾಜಮುಖಿ ಕಾರ್ಯಗಳನ್ನು ಮೈಗೂಡಿಸಿಕೊಂಡು ಸಾಧಕರಾಗಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು , ಕೊಕ್ರಾಡಿ ಪ್ರಾಂಶುಪಾಲರಾದ ನೋರ್ಬರ್ಟ್ ಮಾರ್ಟೀಸ್ ರವರು ಅಳದಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸಮಾರಂಭವನ್ನು ಅಳದಂಗಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ಸರಸ್ವತಿಯವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಿಬಿಸಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಇವರು ವಹಿಸಿ ಸಂಸ್ಥೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಹರೀಶ್ ಆಚಾರ್ಯ ಮತ್ತು ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿ ನಾಯಕರಾದ ರೋಹಿತ್ ಮತ್ತು ಸುಶಾಂತ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರದ ಎಲ್ಲಾ ಬಹುಮಾನಗಳ ಪ್ರಾಯೋಜಕತ್ವವನ್ನು ಗುರುವಾಯನಕೆರೆ ಶಕ್ತಿನಗರದ ಉದ್ಯಮಿಗಳಾದ ರಾಜೇಶ್ ಶೆಟ್ಟಿ ನವಶಕ್ತಿ ವಹಿಸಿದ್ದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದ 12 ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಅತಿಥಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಪ್ರಾಂಶುಪಾಲರಾದ ಸನ್ನಿ ಕೆ ಎಂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗೈದರು. ಇತಿಹಾಸ ಉಪನ್ಯಾಸಕರಾದ ಭಾರತಿಯವರು ವರದಿ ವಾಚಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಜೀವಶಾಸ್ತ್ರ ಉಪನ್ಯಾಸಕರಾದ ಪ್ರಶಾಂತ್ ಕುಮಾರ್ ಮತ್ತು ರಸಾಯನಶಾಸ್ತ್ರ ಉಪನ್ಯಾಸಕ ರಾಮಚಂದ್ರ ಎ ಜಿ ವಾಚಿಸಿದರು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಭೌತಶಾಸ್ತ್ರ ಉಪನ್ಯಾಸಕರಾದ ಪಲ್ಲವಿ ಮತ್ತು ಕ್ರೀಡೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ರೈ ವಾಚಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಯ ಪೂಜಾರಿ ನಿರೂಪಿಸಿ ಗಣಿತಶಾಸ್ತ್ರ ಉಪನ್ಯಾಸಕರಾದ ಸದಾನಂದ ಕುಲಾಲ್ ಧನ್ಯವಾದ ನೀಡಿದರು.