ಬೆಳ್ತಂಗಡಿ: “ನಿತ್ಯವೂ ಅಂಬೇಡ್ಕರ್ ಅವರ ಹೆಸರನ್ನು ಜಪಿಸುವುದು ವ್ಯಸನ” ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳುವ ಮೂಲಕ ಬಾಬಾ ಸಾಹೇಬರ ಬಗ್ಗೆ ಗೃಹ ಸಚಿವರಿಗಿರುವ ದ್ವೇಷವನ್ನು ಹೊರಹಾಕಿದ್ದಾರೆ. ಸಂವಿಧಾನ ರಚನೆಯೂ ಸೇರಿದಂತೆ ಇಡೀ ಭಾರತ ದೇಶದ ಶೋಷಿತರ ಧ್ವನಿಯಾಗಿರುವ ಬಾಬಾ ಸಾಹೇಬರನ್ನ ಅವಮಾನಿಸಿವುದು ಈ ನೆಲಕ್ಕೆ ಬಗೆದ ದ್ರೋಹ.
ಬಹು ಸಂಖ್ಯಾತ ದಲಿತ, ಆದಿವಾಸಿ, ಹಿಂದುಳಿದ ವರ್ಗದ ಜನರು ಸ್ವಾಭಿಮಾನ, ಘನತೆ ಹಾಗೂ ಗರ್ವದಿಂದ ಬದುಕಲು ಬಾಬಾ ಸಾಹೇಬರು ನೀಡಿದ ಹಕ್ಕುಗಳ ಕಾರಣಕ್ಕಾಗಿ ನಿತ್ಯವೂ ಅವರ ಜಪ ಮಾಡುವುದರಲ್ಲಿ ತಪ್ಪೇನಿದೆ? ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿದ ಜನರು ಸ್ವಾಭಿಮಾನದಿಂದ ಬಾಬಾ ಸಾಹೇಬರ ಹೆಸರು ಜಪಿಸುವುದು ತಪ್ಪೇ? ಗೃಹ ಸಚಿವ ಅಮಿತಾ ಶಾ ಅವರಲ್ಲಿ ಯಾಕಿಷ್ಟು ಬಾಬಾ ಸಾಹೇಬರ ಬಗ್ಗೆ ತಾತ್ಸಾರ ಎಂದು ದೇಶದ ಜನರೆದುರು ಸತ್ಯ ಹೇಳಲಿ.
ಬಿಜೆಪಿ ಪಕ್ಷ ನಿತ್ಯವೂ ಬಾಬಾ ಸಾಹೇಬರನ್ನು ಹಾಗೂ ಅವರ ಚಿಂತನೆಯನ್ನು ಅವಮಾನಿಸುತ್ತಾ, ಅಪಮಾನಿಸುತ್ತಾ ಅವರು ನೀಡಿದ ಸಂವಿಧಾನದ ಬಗ್ಗೆ ದ್ವೇಷ ಕಾರುತ್ತಲೇ ಬರುತ್ತಿರುವದಕ್ಕೆ ಇತಿಹಾಸವೇ ಸಾಕ್ಷಿ.
ತಮ್ಮ ಹುದ್ದೆಯ ಘನತೆಗೆ ಅಗೌರವವಾಗಿ ನಡೆದುಕೊಳ್ಳುವುದು ಸಾರ್ವಜನಿಕ ರಾಜಕೀಯ ಜೀವನದಲ್ಲಿ ಮುಂದುವರೆಯಲು ಅರ್ಹರಲ್ಲ. ಕೂಡಲೇ ಗೃಹ ಸಚಿವ ಈ ದೇಶದ ಎದುರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ.