20.4 C
ಪುತ್ತೂರು, ಬೆಳ್ತಂಗಡಿ
January 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮೂರು ತಿಂಗಳ ಹಿಂದೆ ಗೇರುಕಟ್ಟೆ ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ: ಮೃತಪಟ್ಟವರು ಗೇರುಕಟ್ಟೆಯ ಉಮರ್ ಫಾರೂಕ್ ಡಿಎನ್‌ಎ ವರದಿಯಲ್ಲಿ ದೃಢ

ಬೆಳ್ತಂಗಡಿ:2024 ಅ.22ರಂದು ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ತೋಟದ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ನಡೆದಿದ್ದು, ಇದೀಗ ಮೂರು ತಿಂಗಳ ಬಳಿಕ ಡಿಎನ್‌ಎ ಮೂಲಕ ಮೃತನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮೃತಪಟ್ಟ ವ್ಯಕ್ತಿ ಸುಮಾರು ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ, ಕಳಿಯ ಗ್ರಾಮದ ಗೇರುಕಟ್ಟೆ ಕಜೆ ನಿವಾಸಿ ಕೆ.ಎ. ಅಬ್ದುಲ್ಲ ಮತ್ತು ಜೋಹರಾಬಿ ದಂಪತಿಗಳ ಆರನೇ ಪುತ್ರ ಉಮರ್ ಫಾರೂಕ್ ಕೆ.ಎ. (41ವ) ಎಂದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಮೃತದೇಹದ ಗುರುತನ್ನು ಪತ್ತೆ ಹಚ್ಚುವಲ್ಲಿ ಬೆಳ್ತಂಗಡಿ ಇನ್ಸ್ ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದ
ಪೊಲೀಸರು ಯಶಸ್ವಿಯಾಗಿದ್ದಾರೆ.


ಪ್ರಕರಣದ ಹಿನ್ನಲೆ: 2024 ಅ.22ರಂದು ಕಳಿಯ ಗ್ರಾಮದ ಗೇರುಕಟ್ಟೆ ಜನತಾ ಕಾಲನಿ ನಿವಾಸಿ ಪ್ರಭಾಕರ ಆಚಾರ್ಯ ಎಂಬವರು ಕೂಲಿ ಕೆಲಸಕ್ಕೆ ಹೋಗಿದ್ದವರು, ಹತ್ತಿರದ ಚಂದ್ರಶೇಖರ್ ನಾಯ್ಕ್ ಎಂಬವರ ತೋಟದ ಕರೆಯ ಬದಿಗೆ ಹೋದವರು ಕೆರೆಗೆ ಇಣುಕಿ ನೋಡಿದಾಗ, ಕೆರೆಯಲ್ಲಿ ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಕವಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ತೇಲಾಡುತ್ತಿರುವುದನ್ನು ಪತ್ತೆಯಾಗಿತ್ತು.

ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಸ್ಥಳ ತನಿಖೆ ನಡೆಸಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಸ್ಥಳದಲ್ಲೇ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು. ಬಳಿಕ ಅ.23 ರಂದು ಕಳಿಯ ಗ್ರಾಮ ಪಂಚಾಯತ್ ಸಾರ್ವಜನಿಕ ಸ್ಮಶಾನದಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಶವವನ್ನು ದಫನ ಮಾಡಲಾಗಿತ್ತು.


ನಾಪತ್ತೆಯಾಗಿದ್ದ ಉಮರ್ ಫಾರೂಕ್: ಈ ಘಟನೆ ನಡೆಯುವ ಎರಡು ತಿಂಗಳ ಹಿಂದೆಯೇ ಗೇರುಕಟ್ಟೆ ನಿವಾಸಿ ಉಮರ್ ಫಾರೂಕ್ ಎಂಬಾತ ನಾಪತ್ತೆಯಾಗಿದ್ದರು. ಬೇರೆ ಕಡೆಗಳಿಗೆ ಹೋದಾಗ ತನ್ನ ಮಕ್ಕಳಿಗೆ ಅವರು ಫೋನ್ ಕರೆ ಮಾಡುತ್ತಿದ್ದರು. ಆದರೆ ಈ ಬಾರಿ ಮನೆಗೆ ಬಾರದೆ, ಮಕ್ಕಳಿಗೂ ಫೋನ್ ಮಾಡದೆ ಎರಡು ತಿಂಗಳಿಂದ ಉಮರ್ ಫಾರೂಕ್ ನಾಪತ್ತೆಯಾಗಿದ್ದರಿಂದ ಮನೆಯವರಿಗೆ ಅನುಮಾನ ಬಂದು ಕೆರೆಯಲ್ಲಿ ದೊರೆತ ಅಪರಿಚಿತ ಶವದ ಪರಿಶೀಲನೆ ಮಾಡಿದ್ದರು. ಮೃತದೇಹದ ಬಟ್ಟೆ ನೋಡಿದಾಗ ಉಮರ್ ಫಾರೂಕ್ ಇರಬಹುದು ಎಂಬ ಸಂಶಯವನ್ನು ಪೊಲೀಸರ ಜೊತೆ ವ್ಯಕ್ತಪಡಿಸಿದ್ದರು.


ಡಿಎನ್‌ಎ ಪರೀಕ್ಷೆ: ಉಮರ್ ಫಾರೂಕ್ ಅವರ ತಾಯಿ ಜೋಹರಾಬಿ ಅವರ ಮನವಿ ಮೇರೆಗೆ ಬೆಳ್ತಂಗಡಿ ಪೊಲೀಸರು ಡಿಎನ್‌ಎ ಪರೀಕ್ಷೆಗಾಗಿ ಬೆಳ್ತಂಗಡಿ ಕೋರ್ಟ್ ಅನುಮತಿ ಪಡೆದು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 2024 ನ.11ರಂದು ರಕ್ತವನ್ನು ಸಂಗ್ರಹಿಸಿ ಬೆಂಗಳೂರು ಮಡಿವಾಳದಲ್ಲಿರುವ ಎಫ್.ಎಸ್.ಎಲ್ ಕಚೇರಿಯ ಡಿಎನ್‌ಎ ಸೆಂಟರ್‌ಗೆ ಮೃತದೇಹದ ಸ್ಯಾಂಪಲ್ ಜೊತೆ ಕಳುಹಿಸಿದ್ದರು. ಇದೀಗ ಡಿಎನ್‌ಎ ವರದಿ ಬೆಳ್ತಂಗಡಿ ಪೊಲೀಸರ ಕೈ ಸೇರಿದೆ.


ಮೃತದೇಹ ಉಮರ್ ಫಾರೂಕ್ ಧೃಡ: ಡಿಎನ್‌ಎ ವರದಿಯಲ್ಲಿ ಜೋಹಾರಬಿ ಅವರ ಡಿಎನ್‌ಎ ಮತ್ತು ಮೃತದೇಹದ ಸ್ಯಾಂಪಲ್‌ನ ಡಿಎನ್‌ಎ ಮಾಡಿದ ಎಫ್.ಎಸ್.ಎಲ್ ವಿಭಾಗದ ಡಿಎನ್‌ಎ ಸೆಂಟರ್ ಅಧಿಕಾರಿಗಳು ಮೃತಪಟ್ಟ ವ್ಯಕ್ತಿಯ ಮತ್ತು ಜೋರಾಬಿಯ ಡಿಎನ್‌ಎ ಹೊಂದಾಣಿಕೆಯಾಗುತ್ತಿದೆ ಎಂದು ವರದಿ ನೀಡಿದ್ದಾರೆ. ಇದರಿಂದಾಗಿ ಮೃತಪಟ್ಟವರು ಜೋಹರಬಿ ಅವರ ಮಗ ಉಮರ್ ಫಾರೂಕ್ ಅವರೇ ಆಗಿದ್ದಾರೆ ಎಂಬುದು ಈಗ ದೃಢಪಟ್ಟಿದೆ.


ಉಮರ್ ಮೇಲಿತ್ತು 12 ಪ್ರಕರಣ: ಉಮರ್ ಫಾರೂಕ್ ಉತ್ತಮ ವಿದ್ಯಾಭ್ಯಾಸವನ್ನು ಮಾಡಿದ್ದು, ಮದುವೆಯಾದ ಬಳಿಕ ಮಂಗಳೂರು ನಗರದಲ್ಲಿ ಉದ್ಯೋಗ ಮಾಡಿಕೊಂಡಿರುವ ಸಮಯದಲ್ಲಿ ಪುಂಡರ ಸಹವಾಸ ಮಾಡಿ, ಗಾಂಜಾ ವ್ಯಸನಿಯಾಗಿ, ಗಾಂಜಾ ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 12 ಕೇಸುಗಳು ದಾಖಲಾಗಿತ್ತು ಎನ್ನಲಾಗುತ್ತಿದೆ. 2020ರಲ್ಲಿ ಗೇರುಕಟ್ಟೆ ಮನೆಯಲ್ಲಿ ಮೂರನೇ ಪತ್ನಿ ತಸ್ಮೀಯಾ ಸಾವನ್ನಪ್ಪಿದ ಪ್ರಕರಣದಲ್ಲಿ, ಕೊಲೆ ಆರೋಪ ಉಮರ್ ಮೇಲೆ ಬಂದು, ನಂತರ ಸಾಕ್ಷ್ಯಧಾರ ಕೊರತೆಯಿಂದ ಖುಲಾಸೆಗೊಂಡಿತ್ತು.


ಮೂವರು ಪತ್ನಿಯರು: ಉಮರ್ ಫಾರೂಕ್ ಒಟ್ಟು ಮೂರು ಮದುವೆಯಾಗಿದ್ದಾರೆ ಎನ್ನಲಾಗಿದೆ. ಮೊದಲ ಪತ್ನಿ ಪಡಂಗಡಿಯ ಕನ್ನಡಿಕಟ್ಟೆಯವರು ಇವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಬಳಿಕ ಆಕೆಯನ್ನು ಬಿಟ್ಟು ಎರಡನೇ ಪತ್ನಿ ಫರಂಗಿಪೇಟೆಯವರು ಇವರಿಗೆ ಒಂದು ಗಂಡು ಮಗು ಇದೆ. ಆಕೆಯನ್ನು ಕೂಡಾ ಬಿಟ್ಟು ಮೂರನೇ ಪತ್ನಿ ಪುತ್ತೂರಿನವರು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಮೂರನೇ ಪತ್ನಿ ಮನೆಯಲ್ಲಿ ಸಾವನ್ನಪ್ಪಿದ್ದರು.

ಮುಸ್ಲಿಂ ಸಂಪ್ರದಾಯದAತೆ ಅಂತ್ಯಸಂಸ್ಕಾರ: ಡಿಎನ್‌ಎ ವರದಿ ಆಧಾರದಲ್ಲಿ ಮೃತಪಟ್ಟವರು ಉಮರ್ ಫಾರೂಕ್ ಎಂದು ದೃಢಪಟ್ಟಿರುವುದರಿಂದ ಇದೀಗ ಮೃತರ ಸಹೋದರ ಅಬ್ದುಲ್ ಖಾದರ್ ಅವರು ಪುತ್ತೂರು ಎಸಿ ಕಚೇರಿಗೆ ದಫನ ಮಾಡಿದ ಶವ ಮೇಲಕ್ಕೆತ್ತಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮಸೀದಿಗೆ ತೆಗೆದುಕೊಂಡು ಹೋಗಿ ದಫನ ಮಾಡಲು ಅವಕಾಶ ನೀಡಬೇಕಾಗಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿ ಪೊಲೀಸರ ಉಪಸ್ಥಿತಿಯಲ್ಲಿ ಧಪನ ಮಾಡಿದ ಶವವನ್ನು ಮೇಲೆತ್ತಿ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ನಂತರ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

Related posts

ಬಜಿರೆ: ನಾಟಿ ವೈದ್ಯ ದುಗ್ಗಪ್ಪ ಗೌಡ ನಿಧನ

Suddi Udaya

ಹಿಂದೂ ಸಂರಕ್ಷಣಾ ಯಾತ್ರೆ ಬಗ್ಗೆ ಹಾಕಿದ ಎರಡು ಬ್ಯಾನರ್ ಹರಿದ ಕಿಡಿಗೇಡಿಗಳು

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪುತ್ತಿಲ‌ ಗ್ರಾಮದ ಪಲ್ಕೆ ಎಂಬಲ್ಲಿ ಕಾಯಾ೯ಚರಿಸುತ್ತಿದ್ದ ಆಕ್ರಮ‌ ಕಾಸಾಯಿಖಾನೆಗೆ ಪೊಲೀಸರು ದಾಳಿ: ಆರೋಪಿಗಳು ಪರಾರಿ, ಜಾನುವಾರು ಹಾಗೂ ಸೋತ್ತುಗಳ ವಶ

Suddi Udaya

ಲಾಯಿಲ ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

Suddi Udaya

ಡಿ.18: ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

Suddi Udaya
error: Content is protected !!