ಬೆಳ್ತಂಗಡಿ: ಹಿರಿಯ ತಲೆಮಾರಿನ ಯಕ್ಷಗಾನದ ಅರ್ಥದಾರಿಗಳಲ್ಲಿ ಅಗ್ರಮಾನ್ಯರೆನಿಸಿದ ಕಲಾವಿದ ಅರ್ಥಧಾರಿ ನಿವೃತ್ತ ಶಿಕ್ಷಕ ಕಿವಿ ಗಣಪಯ್ಯ(92 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಅವರು ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳ ಅನೇಕ ಸರಕಾರಿ ಶಾಲೆಗಳಲ್ಲಿ ಹಿಂದಿ ಪಂಡಿತರಾಗಿ, ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ದೇರಾಜೆ, ಶೇಣಿ, ಪೆರ್ಲ, ಸಾಮಗ ಮುಂತಾದ ಹಿರಿಯ ಅರ್ಥದಾರಿಗಳ ಜೊತೆಗೆ ಸರಿಸಾಟಿ ಎನಿಸಿ ಅರ್ಥಗಾರಿಕೆಯಲ್ಲಿ ಮೆರೆದ ಕೆ.ವಿ.ಗಣಪಯ್ಯನವರು ತೀಕ್ಷ್ಣವಾದ ಹರಿತವಾದ ಮಾತಿನ ವೈಖರಿಯಿಂದ ತಾಳಮದ್ದಳೆಗಳಲ್ಲಿ ಬಿಸಿಯೇರಿಸಿ ಅವರು ಪ್ರಸಿದ್ಧರಾಗಿದ್ದರು.
ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ , ಇಂತಹ ನೂರಾರು ಪಾತ್ರಗಳನ್ನು ಅವರು ವಿಶಿಷ್ಟವಾಗಿ ಚಿತ್ರಿಸುತ್ತಿದ್ದರು. ಪುರಾಣ ಪ್ರವಚನಗಳಲ್ಲಿಯೂ ಅವರು ಪ್ರಸಿದ್ಧರಾಗಿದ್ದರಿಂದ ಅವರ ಮಾತಿನ ಮಾರುಮಾಲೆಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ, ಅರ್ಥಧಾರಿಗಳಿಗೆ ಮಾರ್ಗದರ್ಶಿಯಾಗಿದ್ದರು. ಪುತ್ತೂರಿನ ಯಕ್ಷ ಆಂಜನೇಯ ಪ್ರಶಸ್ತಿ, ಉಡುಪಿಯ ಯಕ್ಷ ಕಲಾ ರಂಗ ಹಾಗೂ ದೇವಾನಂದ ಭಟ್ಟರ ಯಕ್ಷಕಲಾ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ವಿವಿಧ ಶಾಲೆಗಳ ಅಭಿವೃದ್ಧಿ ಹಾಗೂ ಊರಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿಯೂ ಅವರು ಪ್ರವೃತ್ತರಾಗಿ ಮುನ್ನಡೆಸಿದ್ದರು. ಕಾಣಿಯೂರು ನಿಂತಿಕಲ್ಲು ಬಳಿಯ ಆಲಾಜೆ ಎಂಬಲ್ಲಿ ಕೃಷಿಕರಾಗಿ ಅವರು ತಮ್ಮ ನಿವೃತ್ತ ಜೀವನವನ್ನು ನಡೆಸುತ್ತಿದ್ದರು.