ಬೆಳ್ತಂಗಡಿ: ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಯ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ. ಸಾಂಸ್ಕೃತಿಕ ಚಿಂತಕ ಸಂಪತ್ ಬಿ. ಸುವರ್ಣ ಅವರ ಸಾರಥ್ಯದ ಈ ಪ್ರತಿಷ್ಠಾನವು 15 ವರ್ಷಗಳಿಂದ ನಿರಂತರವಾಗಿ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮಾನಸದಲ್ಲಿ ಸ್ಥಾನ ಪಡೆದಿದೆ.

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ರಥೋತ್ಸವದ ಪ್ರಯುಕ್ತ ಪ್ರತಿಷ್ಠಾನದ 15ನೇ ವರ್ಷದ ಸಾಂಸ್ಕೃತಿಕ ವೈಭವವು ಫೆ.19 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನ ಮುಂಭಾಗ ತೆರೆದ ರಂಗಮಂದಿರದಲ್ಲಿ ನಡೆಯಲಿದೆ. ಚೈತನ್ಯ ಕಲಾವಿದರು ಬೈಲೂರು ಅಭಿನಯಿಸುವ ‘ಅಷ್ಟೆಮಿ’ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಶಿಲಾ ಶಿಲ್ಪಿ ಜಯಚಂದ್ರ ಆಚಾರ್ಯ ನಾಳ, ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ, ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಇವರಿಗೆ ಸುವರ್ಣ ರಂಗ ಸಮ್ಮಾನ್-2025 ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಬಳಿಕ ಯಕ್ಷ- ಗಾನ- ವೈಭವ ನಡೆಯಲಿದೆ.
ಕಲಾವಿದರನ್ನು ಕಿರುತೆರೆಗೆ, ಬೆಳ್ಳಿತೆರೆಗೆ ಪರಿಚಯಿಸಿದ ಶ್ರೇಯಸ್ಸು 2011ರಲ್ಲಿ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ಉದ್ಘಾಟನೆಗೊಂಡ ಈ ಪ್ರತಿಷ್ಠಾನ ನಿರಂತರವಾಗಿ ಕಲಾರಾಧನೆಯಲ್ಲಿ ತೊಡಗಿಸಿಕೊಂಡಿದೆ. ಸಾಂಸ್ಕೃತಿಕ ಚಟುವಟಿಕೆ ವಿರಳ ಇರುವ ಬೆಳ್ತಂಗಡಿ ಪರಿಸರದಲ್ಲಿ ಕಲಾಪ್ರೇಮಿಗಳ ಮನ ತಣಿಸುತ್ತಾ ಬರುತ್ತಿದೆ. ವಿಭಿನ್ನ ಮತ್ತು ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿರುವ ಸಂಪತ್ ಬಿ ಸುವರ್ಣರವರು ಈ ತನಕ ನೂರಾರು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹಲವು ಕಲಾವಿದರನ್ನು ಕಿರುತೆರೆಗೆ, ಬೆಳ್ಳಿತೆರೆಗೆ ಪರಿಚಯಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ.