ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಶ್ರುತಾ ಅಕಾಡೆಮಿ ಮಂಗಳೂರು ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವುಗಳ ಸಹ ಭಾಗೀತ್ವದಲ್ಲಿ ಉಜಿರೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ಫೆ.22 ರಂದು ಕೆ -ಸಿ. ಇ.ಟಿ. 2025 ರ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರವನ್ನು ಉಜಿರೆಯ ಎಸ್ ಡಿ.ಎಂ.ಶಿಕ್ಷಣಸಂಸ್ಥೆಗಳ ವಸತಿ ನಿಲಯ ಮತ್ತು ಆಡಳಿತಾತ್ಮಕ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪೂರನ್ ವರ್ಮಾ ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ, ಹೇಗೆ ಒಂದು ಕತ್ತಿಯನ್ನು ದಿನ ನಿತ್ಯವೂ ಉಪಯೋಗಿಸುತ್ತಿದ್ದರೆ ಅದು ಹರಿತ ವಾಗಿರುತ್ತದೋ ಅಂತೆಯೇ ದಿನ ನಿತ್ಯದ ಅಭ್ಯಾಸದಿಂದ ಉತ್ತಮ ಜ್ಞಾನ, ಅಂಕ ಪಡೆಯಲು ಹಾಗೂ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ನುಡಿದರು. ಸಾಧನೆಯ ಹಾದಿಯಲ್ಲಿ ಅನೇಕ ಅಡೆ -ತಡೆ ಗಳು, ಮನೋ ಆಕರ್ಷಣೆಗಳು ಸಹಜ, ಆದರೆ ನಾವು ನಮ್ಮ ಸಾಧನೆಯನ್ನು ಹೇಗೆ ಸಾಧಿಸಿಕೊಳ್ಳಬೇಕು, ಬರುವ ಅಡೆ ತಡೆಗಳನ್ನು ಹೇಗೆ ಮೆಟ್ಟಿ ನಿಂತು ಮುನ್ನಡೆಯಬೇಕು ಎಂದು ಹಲವು ದೃಸ್ಟಾಂತ, ಉದಾಹರಣೆಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.
ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ, ಸೀಟು ಹಂಚಿಕಾ ವಿಭಾಗದ ಮುಖ್ಯಸ್ಥರಾದ ಉಮೇಶ್ ಗೌಡ ಇವರು ಭಾಗವಹಿಸಿದ್ದರು. ಇವರು ಕೆ-ಸಿ. ಇ. ಟಿ. 2025ರ ಕುರಿತಾದ ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಹೇಗೆ ಅಪ್ಲೈ ಮಾಡಬೇಕು, ಬೇಕಾದ ಪೂರಕ ದಾಖಲೆಗಳು, ಪ್ರಮಾಣ ಪತ್ರಗಳ ವೆರಿಫಿಕೇಷನ್ ವಿಧಾನ, ಮತ್ತು ಯಾವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ರಾಂಕ್ ಮತ್ತು ಸೀಟು ಹಂಚಿಕೆಯಾಗುತ್ತದೆ ಎಂಬುದರ ಕುರಿತಾಗಿ ಸವಿವರವಾಗಿ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿನ ಗೊಂದಲ, ಸಂದೇಹಗಳಿಗೆ ಉತ್ತರಿಸಿದರು.
ಈ ಕಾರ್ಯಾಗಾರದಲ್ಲಿ ಬೆಳ್ತಂಗಡಿ ತಾಲೂಕಿನ ವಾಣಿ ಪದವಿ ಪೂರ್ವ ಕಾಲೇಜು, ಉಜಿರೆಯ ಎಸ್. ಡಿ. ಎಂ. ಸನಿವಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 700 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳು ಉಪಸ್ಥಿತರಿದ್ದು ಪ್ರಯೋಜನ ಪಡೆದರು.
ವೇದಿಕೆಯ ಮೇಲೆ ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ, ಉಪ ಪ್ರಾಚಾರ್ಯರಾದ ಡಾ. ರಾಜೇಶ್ ಬಿ, ಎಸ್. ಡಿ. ಎಂ. ಸನಿವಾಸ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್, ವಾಣಿ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಮುಖ್ಯಸ್ಥರಾದ ಹರ್ಷಿತ್ ಶೆಟ್ಟಿ, ಶ್ರುತ ಅಕಾಡೆಮಿ ಮಂಗಳೂರು ಇದರ ಮುಖ್ಯಸ್ಥರಾದ ಡಾ. ಶೃತಕೀರ್ತಿ ರಾಜ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್ ಗೌಡ ಇವರನ್ನು ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜು ಮತ್ತು ಶ್ರುತ ಅಕಾಡೆಮಿ ಮಂಗಳೂರಿನ ಪರವಾಗಿ ಗೌರವಿಸಲಾಯಿತು.
ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನ ಗಣಿತ ಶಾಸ್ತ್ರ ಮುಖ್ಯಸ್ಥೆ ಅನಿತಾ ಕೆ ಪಿ ಸರ್ವರನ್ನೂ ವಂದಿಸಿದರೆ, ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.