
ಧರ್ಮಸ್ಥಳ: ಶಿವರಾತ್ರಿಯ ಪರಮ ಪವಿತ್ರವಾದ ದಿನದಂದು ಶಿವನ ಜಾಗರಣೆ ಮಾಡುವುದು ವಿಶೇಷ. ಸಮುದ್ರಮಥನವಾದಾಗ ಒಳ್ಳೆಯ ವಸ್ತುಗಳು ಬಂದಾಗ ಎಲ್ಲರೂ ಸ್ವೀಕರಿಸಲು ಮುಂದಿದ್ದರು. ಆದರೆ ವಿಷ ಬಂದಾಗ ಶಿವ ವಿಷವನ್ನು ಪಾನ ಮಾಡಿ ಲೋಕವನ್ನು ಕಾಪಾಡುತ್ತಾನೆ. ಇದಕ್ಕಾಗಿ ಶಿವನನ್ನು ಬಹಳ ‘ಭಕ್ತಿಯಿಂದ ಆರಾಧಿಸುತ್ತಾರೆ ಎಂದು ‘ಧರ್ಮಸ್ಥಳ ‘ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಬೆಂಗಳೂರಿನ ಸದಾಶಿವನಗರದ ಉದ್ಯಮಿ ದಿನೇಶ್ ಹಾಗೂ ಸುನಿತಾ ದಂಪತಿಯು ಕೊಡಮಾಡಿದ ಬೃಹದಾಕಾರದ ಘಂಟೆಯನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಮುಂಭಾಗ ಸ್ಥಾಪಿಸಿರುವುದನ್ನು ಫೆ.26 ರಂದು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಸುಖವಿದ್ದಾಗ ಎಲ್ಲರೂ ತಾಮುಂದು ನಾಮುಂದು ಎಂದು ನಮ್ಮೊಂದಿಗಿರುತ್ತಾರೆ. ಆದರೆ ಕಷ್ಟ ಬಂದಾಗ ಯಾರೂ ಇರುವುದಿಲ್ಲ. ಶಿವ ಜನರ ದುಃಖ, ಕಷ್ಟಗಳನ್ನು ಸ್ವೀಕರಿಸಿ ಕಾಪಾಡಿದಾತ. ಹಾಗಾಗಿ ಶಿವರಾತ್ರಿಯಂದು ನಮ್ಮ ಕಷ್ಟಗಳನ್ನೆಲ್ಲ ನೀನು ಸ್ವೀಕರಿಸಿ ಸುಖವನ್ನು ಕೊಡು ಎಂದು ಪಾದಯಾತ್ರೆಯಲ್ಲಿ ಬರುತ್ತಾರೆ. ಅವರಿಗೆಲ್ಲ ಶಿವ ಆಶೀರ್ವದಿಸುತ್ತಾನೆ ಎಂದ ಅವರು ಬೆಂಗಳೂರಿನ ಉದ್ಯಮಿ ದಿನೇಶ್ ಅವರ ಇಚ್ಛೆಯಂತೆ ಕ್ಷೇತ್ರಕ್ಕೆ ಶಿವರಾತ್ರಿಯಂದು ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ದೇವರು ಹರಸಲಿ ಎಂದು ಆಶೀರ್ವದಿಸಿದರು.

ಘಂಟೆ ಕೊಡುಗೆ ನೀಡಿದ ಬೆಂಗಳೂರು ಸದಾಶಿವನಗರದ ಉದ್ಯಮಿ ದಿನೇಶ್ ಮಾತನಾಡಿ, ಸಣ್ಣ ವಯಸ್ಸಿನಿಂದ ನಾನು ಧರ್ಮಸ್ಥಳಕ್ಕೆ ಬರುತ್ತಿದ್ದೆ. ಧರ್ಮಸ್ಥಳಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಘಂಟೆ ಕೊಡುಗೆ ನೀಡಿದ್ದೇನೆ. ಎಲ್ಲ ಜನತೆಗೆ ಒಳ್ಳೆದಾಗಲಿ ಎಂಬ ನೆಲೆಯಲ್ಲಿ ಕೊಡುಗೆ ನೀಡಿದ್ದೇನೆ. ಶಿವರಾತ್ರಿಯಂದು ಉದ್ಘಾಟನೆಯಾಗಿರುವುದು ಬಹಳ ಸಂತೋಷ ನೀಡಿದೆ ಎಂದರು.
ಉದ್ಯಮಿ ಆಪ್ತರಾದ ಪ್ರಸಾದ್, ರವೀಂದ್ರ, ವಿಜಯ್ ಕುಮಾರ್, ಪತ್ನಿ ಸುನಿತಾ, ‘ಧರ್ಮಸ್ಥಳದ ಎ.ವೀರು ಶೆಟ್ಟಿ ಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.