ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ ಬಜೆಟ್ ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಅಭಿನಂದನೀಯವಾದುದು. ಆದರೆ ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದ್ದು ವಿಷಾದನೀಯ.
ಸ್ವಾತಂತ್ರ್ಯ ಲಭಿಸಿ 77 ವರ್ಷ ಕಳೆದರೂ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಆದಿವಾಸಿಗಳ ಪ್ರದೇಶಗಳು ಇನ್ನೂ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಆದಿವಾಸಿಗಳ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ಅನುದಾನ ಮೀಸಲಿಟ್ಟಿರುವುದು ಅಭಿನಂದನೀಯ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕನಿಷ್ಠ 100 ಕೋಟಿ ಹೆಚ್ಚುವರಿಯಾಗಿ ಬಿಡುಗಡೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯ ನಮ್ಮದು. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಬಿಜೆಪಿ ನಾಯಕರು ಮಾತ್ರ ನಕ್ಸಲ್ ಶರಣಾಗತಿಗಾಗಿ 10 ಕೋಟಿ ಮೀಸಲಿಟ್ಟಿದೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ. ಇದು ಆದಷ್ಟು ಬೇಗ ಅನುಷ್ಠಾನಗೊಳಿಸಲು ಮುಂದಾಗಬೇಕು. ಇದರಿಂದ ಜಿಲ್ಲೆಯ ದಲಿತ , ಆದಿವಾಸಿ ಸೇರಿದಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಬಜೆಟ್ ಘೋಷಣೆ ಕೇವಲ ಕಾಗದದ ಹುಲಿಯಾಗಬಾರದು. ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಅಧ್ಯಕ್ಷ ವಸಂತ ನಡ, ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ ಲಾಯಿಲ ತಿಳಿಸಿದ್ದಾರೆ.