ಪುಂಜಾಲಕಟ್ಟೆ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾ.16ರಂದು ನಡೆಯಲಿರುವ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ವಿವಾಹದ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಪಿಲಾತಬೆಟ್ಟು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಾ.9 ರಂದು ನಡೆಯಿತು.

ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ನಾಗೇಶ್ ಪ್ರಭು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಬಂಟ್ವಾಳ ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಪತಿ, ಪತ್ನಿ ಪರಸ್ಪರ ಅರ್ಥೈಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ ಎಂದರು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ, ಹಿಂದುಳಿದ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಗುತ್ತಿಗೆದಾರ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ , ಕುತ್ತಿಲ ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಸುಶಾಂತ್ ಕರ್ಕೇರಾ, ಕೊರಂಟಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಸದಾನಂದ ಪೂಜಾರಿ ಅವರು ಮಂಗಳ ವಸ್ತ್ರ ವಿತರಿಸಿದರು.
ಮೂರ್ಜೆ ನಾರಾಯಣ ಗುರು ವಸತಿ ಶಾಲೆ ಪ್ರಾಂಶುಪಾಲ ಸಂತೋಷ್ ಸನಿಲ್, ಪಿಲಾತಬೆಟ್ಟು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯಮುನಪ್ಪ ಕೊರವರ, ಗ್ರಾ.ಪಂ. ಸದಸ್ಯ ಕಾಂತಪ್ಪ ಕರ್ಕೇರ, ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ., ಉದ್ಯಮಿ ನಿತಿನ್ ಶೆಟ್ಟಿ ಮೂರ್ಜೆ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಾಜಿ ಅಧ್ಯಕ್ಷರಾದ ಮಾಧವ ಬಂಗೇರ, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ರವಿಶಂಕರ ಹೊಳ್ಳ, ಗ್ರಂಥಪಾಲಕಿ ಅಮೃತಾ ಎಸ್., ಹರೀಶ್ ನಾಯಕ್, ರಫೀಕ್ ಆರ್‌ಡಿಎಸ್, ಹೇಮಂತ, ಧನ್ಯರಾಜ್ ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು ಮತ್ತು ಹರೀಶ್ ಪೂಜಾರಿ ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಪರಸ್ಪರ ಬದಲಾಯಿಸಿಕೊಂಡರು. 8 ಜೋಡಿ ವಧು, ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ವಧು-ವರರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿ.ಸಿ.ರೋಡ್ ಅಮರ್ ಪ್ರಿಂಟರ‍್ಸ್ ಮುದ್ರಣ ಸಂಸ್ಥೆಯ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಸಲಾಯಿತು.

ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು. ರಂಗ ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.