ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷ ದಿವಾಕರ ಎಮ್ ಅಧ್ಯಕ್ಷತೆಯಲ್ಲಿ ಮಾ.12 ರಂದು ನಡೆಯಿತು.
ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್ ಸರಕಾರದ ಸುತ್ತೋಲೆಗಳನ್ನು ಸಭೆಗೆ ತಿಳಿಸಿದರು. ಕಾರ್ಯದರ್ಶಿ ಕುಂಙ ಕೆ ಗ್ರಾಮಸ್ಥರ ವಿವಿಧ ಅರ್ಜಿಗಳನ್ನು ಓದಿ ಹೇಳಿದರು.
ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ಬಾಡಿಗೆ ನೀಡುವ ಪ್ಲ್ಯಾಟ್ ಗಳಿಂದ ಕೊಳಚೆ ನೀರನ್ನು ರಸ್ತೆ ಬದಿಗೆ ಬಿಡುವ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಹಾಗೂ ವಾರ್ಡ್ ಗಳಲ್ಲಿ ಪಂಪ್
ಅಪರೇಟರ್ ಗಳು ನಳ್ಳಿ ನೀರಿನ ಅಸಮರ್ಪಕ ನಿರ್ವಹಣೆ ಬಗ್ಗೆ, ಗೇರುಕಟ್ಟೆ ಪೇಟೆಯಲ್ಲಿನ ಜನ ವಸತಿ ಪ್ರದೇಶದ ರಸ್ತೆ ಬದಿಯಲ್ಲಿಯೇ ಸ್ಥಳೀಯರೊಬ್ಬರು ಅನಧಿಕೃತವಾಗಿ ಹಂದಿ ಸಾಕಣೆ ನಡೆಸಿ ಮತ್ತು ಮಾಂಸ ಮಾಡಿ ಕೆಟರಿಂಗ್ ನಡೆಸುವುದರಿಂದ ಸುತ್ತಮುತ್ತ ಇದರ ತ್ಯಾಜ್ಯದಿಂದ ಅತೀವ ವಾಸನೆ ನಿರಂತರವಾಗಿ ಬಂದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಮುಂದಿನ ಒಂದು ವಾರದೊಳಗೆ ಸಾಕಾಣಿಕಾ ಕೇಂದ್ರವನ್ನು ಮುಚ್ಚುವಂತೆ ನೋಟಿಸು ನೀಡಲು ತೀರ್ಮಾನಿಸಲಾಯಿತು.
ಪಂಪ್ ಅಪರೇಟರ್ ಗಳನ್ನು ಸಭೆಗೆ ಕರೆಸಿ ತರಾಟೆಗೆ ತೆಗೆದುಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಲಾಯಿತು.
ಪಂಚಾಯತ್ ಗೆ ಬರುವ ಯಾವುದೇ ಅರ್ಜಿ ವಾರ್ಡ್ ಸದಸ್ಯರ ಗಮನಕ್ಕೆ ತರುವಂತೆ ಸದಸ್ಯರು ತಾಕೀತು ಮಾಡಿದರು.
2025-26 ನೇ ಸಾಲಿನ ಪಂಚಾಯತ್ ಬಜೆಟ್ ಮಂಡಿಸಲಾಯಿತು. ಬಿಸಿಲಿನ ತಾಪಮಾನವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದರಿಂದ ಮಧ್ಯಾಹ್ನದ ಹೊತ್ತಿಗೆ ಗ್ರಾಮಸ್ಥರು ಹೊರಗಡೆ ಬರದಿರುವಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಪಂಚಾಯತ್ ವ್ಯಾಪ್ತಿಯ ವಿವಿಧ ಧಾರ್ಮಿಕ ಕೇಂದ್ರಗಳ ತೆರಿಗೆಯಲ್ಲಿ ವಿನಾಯಿತಿ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಲಾಯಿತು.
ಸಭೆಯ ನಂತರ ಕೊಳಚೆ ನೀರು ಬಿಡುವ ವಿವಿಧ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಯಿತು.
ಸಭೆಯಲ್ಲಿ ಉಪಾದ್ಯಕ್ಷೆ ಶ್ರೀಮತಿ ಇಂದಿರಾ,ಸದಸ್ಯರಾದ ಸುದಾಕರ ಮಜಲು, ಅಬ್ದುಲ್ ಕರೀಮ್, ಶ್ರೀಮತಿ ಮೋಹಿನಿ, ಶ್ರೀಮತಿ ಸುಭಾಷಿಣಿ.ಕೆ, ಹರೀಶ್ ಕುಮಾರ್, ವಿಜಯ ಗೌಡ,ಲತೀಫ್ ಪರಿಮ,ಯಶೋದರ ಶೆಟ್ಟಿ, ಶ್ರೀಮತಿ ಮರೀಟಾ ಪಿಂಟೋ,ಶ್ರೀಮತಿ ಕುಸುಮ ಎನ್ ಬಂಗೇರ, ಶ್ರೀಮತಿ ಪುಷ್ಪಾ ,ಶ್ರೀಮತಿ ಶಕುಂತಲಾ, ಶ್ರೀಮತಿ ಶ್ವೇತಾ ಕೆ ಹಾಜರಿದ್ದರು. ಕಾರ್ಯದರ್ಶಿ ಕುಂಙ ಕೆ ಸ್ವಾಗತಿಸಿ ಧನ್ಯವಾದವಿತ್ತರು.ಪಂಚಾ ಯತ್ ಸಿಬ್ಬಂದಿ ಸುಚಿತ್ರಾ, ಪ್ರವೀಳಾ,ಶಶಿಕಲಾ, ನಂದಿನಿ ರೈ,ರವಿ ಎಚ್,ಸುರೇಶ್ ಗೌಡ ಹಾಜರಿದ್ದರು.