
ಬೆಳ್ತಂಗಡಿ: ಕೆರೆಗಳು ಊರಿನ ಜಲಪಾತ್ರೆಗಳು. ಮಳೆಗಾಲ ಬಂತೆಂದರೆ ಹಿಂದೆ ಕೆರೆ ಕೋಡಿ ಹರಿಯವುದೇ ಆ ಊರಿನ ಮಳೆ ಪ್ರಮಾಣದ ಲೆಕ್ಕಾಚಾರವಾಗಿತ್ತಲ್ಲದೇ, ಇದೇ ಮುಂದಿನ ವರ್ಷದ ಊರಿನ ಸಮೃದ್ಧಿಯ ಸಂಕೇತವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಊರಿಗೆ ನೀರುಣಿಸುತ್ತಿದ್ದ ಕೆರೆಗಳು ಕಣ್ಮರೆಯಾಗತೊಡಗಿದವು. ಒಂದು ಕಾಲದಲ್ಲಿ ನೀರು ತುಂಬಿ ಊರನ್ನು ತಂಪಾಗಿಡುತ್ತಿದ್ದ ಕೆರೆಗಳು ಇಂದು ಆಟದ ಮೈದಾನಗಳಾಗಿ ಪರಿವರ್ತನೆಯಾಗಿವೆ. ಇಂತಹ ಸಂದರ್ಭದಲ್ಲಿ 2016ರಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ|| ಹೇಮಾವತಿ ವೀ.ಹೆಗ್ಗಡೆಯವರು “ನಮ್ಮೂರು ನಮ್ಮ ಕೆರೆ” ಎನ್ನುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಜಾರಿಗೆ ತಂದರು.

ಒಂದೇ ವರ್ಷದಲ್ಲಿ 160 ಕೆರೆಗಳಿಗೆ ಪುನಶ್ಚೇತನ ಭಾಗ್ಯ: 2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ 160 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ. ಪ್ರಸ್ತುತ ವರ್ಷ ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಗಳ ಪುನಶ್ಚೇತನ ಕಾರ್ಯ ತುಸು ವಿಳಂಭವಾಗಿ ಪ್ರಾರಂಭಿಸಲಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ ಸುಮಾರು 1760 ರೈತರು, ಮಹಿಳೆಯರನ್ನೊಳಗೊಂಡ 160 ಕೆರೆ ಸಮಿತಿಗಳನ್ನು ರಚಿಸಲಾಯಿತು. ಜನಸಹಭಾಗಿತ್ವದೊಂದಿಗೆ ಕೈಗೊಂಡ ಬೃಹತ್ ಕಾರ್ಯದಲ್ಲಿ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು,7 ಜನ ನುರಿತ ಇಂಜಿನಿಯರ್‌ಗಳ ತಂಡ ಅವಿರತವಾಗಿ ಶ್ರಮಿಸಿದೆಯಲ್ಲದೇ ಕೆರೆ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಸುಮಾರು 242 ಜೆ.ಸಿ.ಬಿ. ಹಾಗೂ ಇಟಾಚಿ ಯಂತ್ರಗಳು, 4304 ಕ್ಕೂ ಅಧಿಕ ಟ್ಯಾಕ್ಟರ್ ಹಾಗೂ ಟಿಪ್ಪರ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು 12.50 ಲಕ್ಷ ಲೋಡ್ ಕೆರೆಯ ಹೂಳನ್ನು ತಮ್ಮ ಕೃಷಿ ತೋಟಗಳಿಗೆ ಉತ್ಸಾಹದಿಂದ ಸಾಗಾಟ ಮಾಡಿದರು. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ, ಕಲ್ಲು ಕಟ್ಟುವುದು ಮೊದಲಾದ ಕಾಮಗಾರಿಗಳ ಮೂಲಕ ಕೆರೆಗಳು ವೈಜ್ಞಾನಿಕವಾಗಿ ಹಾಗೂ ಸುಂದರವಾಗಿ ಮರುನಿರ್ಮಾಣಗೊಂಡಿವೆ.
ವನ್ಯ ಜೀವಿಗಳಿಗಾಗಿಯೂ ಕೆರೆಗಳ ನಿರ್ಮಾಣ: ಕೆರೆಗಳು ಮಾನವರಂತೆ ಜಾನುವಾರುಗಳಿಗೂ ಕುಡಿಯುವ ನೀರಿನ ಬಹುಮುಖ್ಯ ಮೂಲವಾಗಿದೆ. ಇದಕ್ಕಾಗಿಯೆ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ|| ಹೇಮಾವತಿ ವೀ.ಹೆಗ್ಗಡೆಯವರ ಆಶಯದಂತೆ ಶಿವಮೊಗ್ಗದ ತಾವರಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ ೧೦ ಕೆರೆಗಳನ್ನು ಈ ವರ್ಷ ಪುನಶ್ಚೇತನಗೊಳಿಸಲಾಗಿದೆ. ಇಲ್ಲಿಯ ಸುಮಾರು ೪೦೦ ವನ್ಯಜೀವಿಗಳಿಗೆ ಈ ಕೆರೆಗಳ ಮೂಲಕ ಜೀವಜಲ ಒದಗಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ವನ್ಯಜೀವಿಗಳಿಗಾಗಿ ಒಂದು ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.
ಕೆರೆ ಕಾಯಕಕ್ಕೆ ಅದ್ಭುತ ಜನಬೆಂಬಲ: ರಾಜ್ಯಾದ್ಯಂತ ನಡೆದ ಈ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸಚಿವರು, ಶಾಸಕರು, ಮತ್ತಿತರ ಜನಪ್ರತಿನಿಧಿಗಳು ಭೇಟಿ ನೀಡಿ ಬೆಂಬಲ ಪ್ರೋತ್ಸಾಹ ನೀಡಿರುತ್ತಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೂ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿರುತ್ತಾರೆ. ವಿವಿಧ ಸ್ವಾಮೀಜಿಗಳು, ರೈತ ಮುಖಂಡರು ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುತ್ತಾರೆ. ಸ್ಥಳೀಯ ಗ್ರಾಮ ಪಂಚಾಯತ್‌ನ ಸಹಕಾರ ನಿರಂತರವಾಗಿತ್ತು. ತಿಂಗಳುಗಳ ಕಾಲ ತಮ್ಮ ಊರಲ್ಲಿ ನಡೆದ ಈ ಕೆರೆ ಪುನಶ್ಚೇತನ ಕಾರ್ಯವನ್ನು ಕಂಡು ಊರ ಜನ ಸಂಭ್ರಮಿಸಿದರು.
ಪುನಶ್ಚೇತನಗೊಂಡ ಕೆರೆಗಳ ಹಸ್ತಾಂತರ: ಸುಂದರವಾಗಿ ಪುನರ್ ನಿರ್ಮಾಣಗೊಂಡ ಕೆರೆಗಳನ್ನು ಮತ್ತೆ ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಸಮಿತಿಗೆ ಹಸ್ತಾಂತರಿಸಲಾಗುತ್ತಿದೆ. ಈ ಕೆರೆಗಳನ್ನು ಮುಂದೆ ಸಂರಕ್ಷಿಸುವ, ಅಭಿವೃದ್ಧಿಪಡಿಸುವ, ಅತಿಕ್ರಮಣವಾಗದಂತೆ ತಡೆಗಟ್ಟುವ, ಸ್ವಚ್ಛತೆ ಕಾಪಾಡುವ ಜವಾಬ್ದಾರಿಯೂ ಅವರಿಗೆ ವಹಿಸಲಾಗುತ್ತದೆ. ಇದಕ್ಕಾಗಿ ಕಾಲಕಾಲಕ್ಕೆ ಕೆರೆ ಸಮಿತಿ ಪದಾಧಿಕಾರಿಗಳ ಕಾರ್ಯಾಗಾರ ನಡೆಸಿ ಪ್ರೇರಣೆ ನೀಡಲಾಗುತ್ತಿದೆ.
ಕೆರೆಯಂಗಳದಲ್ಲಿ ಗಿಡನಾಟಿ: ಮುಂದಿನ ಮಳೆಗಾಲ ಆರಂಭವಾಗುತ್ತಿದ್ದಂತೆ ಪುನಶ್ಚೇತನಗೊಂಡ ಕೆರೆಗಳ ಸುತ್ತಲೂ ಗಿಡನಾಟಿ ಕಾರ್ಯ ನಡೆಯಲಿದೆ. ಗ್ರಾಮ ಪಂಚಾಯತ್ ಹಾಗೂ ಸಮಿತಿಯ ಸಹಭಾಗಿತ್ವದೊಂದಿಗೆ ಹೂವು, ಹಣ್ಣು ಹಾಗೂ ನೆರಳು ಕೊಡುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತದೆ. ಇದರಂತೆ ಸಮೃದ್ಧ ಕೆರೆಯ ಸುತ್ತ ಹಸಿರು ಬೆಳೆದು ಪ್ರಾಣಿ ಪಕ್ಷಿಗಳಿಗೆ ಹಣ್ಣು, ನೆರಳು, ನೀರು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.
2024-25ನೇ ಸಾಲಿನಲ್ಲಿ 160 ಕೆರೆಗಳು ಸುಂದರವಾಗಿ ಪುನರ್ ನಿರ್ಮಾಣಗೊಂಡು ತನ್ನೊಡಲಲ್ಲಿ ನೀರು ತುಂಬಿಸಿಕೊಳ್ಳಲು ಅಣಿಯಾಗಿ ನಿಂತಿವೆ. ಸಂಸ್ಥೆಯ ವತಿಯಿಂದ ಇದುವರೆಗೆ ಪುನಶ್ಚೇತನಗೊಂಡ ಒಟ್ಟು ೮೮೯ ಕೆರೆಗಳು ತುಂಬಿ ಸಮೃದ್ಧಗೊಂಡು ಜನ, ಜಾನುವಾರುಗಳಿಗೆ ನೀರ ಬವಣೆ ನೀಗಿಸಿವೆ. ಮುಂದಿನ ಒಂದೆರಡು ತಿಂಗಳಲ್ಲಿ ಪುನಶ್ಚೇತನಗೊಳ್ಳಲಿರುವ ಕೆರೆಗಳ ಸಂಖ್ಯೆ 1000 ಗಡಿ ದಾಟಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್. ರವರು ತಿಳಿಸಿದರು.
ಜನಸಹಭಾಗಿತ್ವದೊಂದಿಗೆ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಇಂತಹ ಕಾರ್ಯಗಳಿಗೆ ಜನ ಕೈ ಜೋಡಿಸುತ್ತಿದ್ದಾರೆ. ಕ್ರಿಕೆಟ್ ಮೈದಾನದಂತಹ ಕೆರೆಗಳು ಪುನಶ್ಚೇತನಗೊಂಡು ಜಲ ಸಮೃದ್ಧಿಗೊಂಡಿವೆ. ಮತ್ತೆ ಹೂಳು ತುಂಬಿ ಕೆರೆಗಳು ಹಾಳಾಗದಂತೆ ರಕ್ಷಿಸಿಕೊಳ್ಳಬೇಕಿದೆ ಎಂದು ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಇದುವರೆಗಿನ ಸಾಧನೆ:
ಪುನಶ್ಚೇತನಗೊಂಡ ಒಟ್ಟು ಕೆರೆಗಳು : ೮೮೯
ತೆಗೆದ ಹೂಳಿನ ಪ್ರಮಾಣ : ೨೪೦.೧೩ ಲಕ್ಷ ಕ್ಯು.ಮೀ.
ಹೆಚ್ಚಳಗೊಂಡಿರುವ ನೀರಿನ ಸಂಗ್ರಹಣ ಸಾಮರ್ಥ್ಯ : ೫೩೦ ಕೋಟಿ ಗ್ಯಾಲನ್
ಪ್ರಯೋಜನವಾಗಲಿರುವ ಕೃಷಿ ಭೂಮಿ : ೨,೫೮,೦೯೫ ಎಕ್ರೆ
ಪ್ರಯೋಜನ ಪಡೆದ ಕುಟುಂಬಗಳು : ೪,೦೫,೮೩೦
ಒತ್ತುವರಿ ತೆರವುಗೊಳಿಸಲಾದ ಪ್ರದೇಶ : ೩೬೬ ಎಕ್ರೆ
ಬಳಸಿದ ಯೋಜನೆಯ ಅನುದಾನ : ರೂ. ೬೯.೦೫ ಕೋಟಿ