ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರಾಗಿಸಿದ ಘಟನೆ ವರದಿಯಾಗಿದೆ.
ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿ ಬರುತ್ತಾ ಇದ್ದು, ಸರಕಾರಿ ಶಾಲೆಯು ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆದು ಬರುತ್ತಿರುವ ಕಡೆ, ಈ ಶೈಕ್ಷಣಿಕ ವರ್ಷದಲ್ಲಿ ಪದ್ಮುಂಜದ ಸರಕಾರಿ ಶಾಲೆಯ ಶಿಕ್ಷಕ ವೃಂದ ಕೂಡ 100% ಎನ್ನುವ ಗೀಳಿಗೆ ಬಿದ್ದು ಎರಡು ಹೆಣ್ಣು ಮಕ್ಕಳನ್ನು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ಪರೀಕ್ಷೆಗೆ ಅವಕಾಶ ಕೊಡದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ.
ಇದರ ಬಗ್ಗೆ ಖುದ್ದು ಅವಕಾಶ ವಂಚಿತಳಾಗಿರುವ ಹೆಣ್ಣು ಮಗಳು ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು,ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯ ಸಂಚಾಲಕರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಬಿ ಓ ಭೇಟಿ: ಇಂದು ಶಾಲೆಗೆ ಭೇಟಿ ನೀಡಿದ್ದೇನೆ. ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ, ಮುಂದಿನ ಮೂರು ಪರೀಕ್ಷೆಗಳಿಗೆ ಹಾಜರಾಗುವಂತೆ ತಿಳಿ ಹೇಳಿ ಹಾಲ್ ಟಿಕೆಟ್ ಹಂಚಿಕೆ ಮಾಡಲಾಗಿದೆ. ಆದರೆ ಓರ್ವ ವಿದ್ಯಾರ್ಥಿನಿ ಹಾಲ್ ಟಿಕೆಟ್ ಪಡೆದು ಕೊಂಡರು ಬಳಿಕ ಮತ್ತೆ ಹಿಂತಿರುಗಿಸಿದ್ದಾರೆ. ಇನ್ನೊಂದು ಹುಡುಗಿಯ ಹಾಲ್ ಟಿಕೆಟ್ ಪಡೆಯಲು ಮುಂದೆ ಬಂದಿದ್ದು ಬಳಿಕ ಹಿಂದೆ ಸರಿದಿದ್ದಾರೆ. ಶಾಲೆಗೆ ಸಂಬಂಧಿಸದ ವ್ಯಕ್ತಿಗಳು ಹಾಲ್ ಟಿಕೆಟ್ ಸ್ವೀಕರಿಸಿದ್ದಂತೆ ಮಾಡಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡುವ ಉದ್ದೇಶವಿತ್ತು ಆದರೆ ಅದನ್ನು ಮಾಡಲು ಬಿಡಲಿಲ್ಲ . ಘಟನೆ ಕುರಿತು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಬಿಓ ತಾರಕೇಸರಿ ಸುದ್ದಿ ಉದಯ ಪತ್ರಿಕೆ ತಿಳಿಸಿದ್ದಾರೆ.