ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್.ಇಡಿ)ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಮೃತಿಪಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಸಹ ಪ್ರಾಧ್ಯಾಪಕ ಮಂಜು ಆರ್ ಪ್ರಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸುತ್ತಾ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅಗಾದವಾದದ್ದು. ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಿದ್ದಂತೆ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಕಳಕಳಿಯ ಕಾಳಜಿ ಹೊಂದಿರುತ್ತಾರೆ. ಅವರು ಶಿಕ್ಷಣ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಂಘಗಳು ಅನುಕೂಲಕರವಾಗಿದೆ ಸಂಘದ ಕಾರ್ಯಗಳು ಮತ್ತು ಜವಾಬ್ದಾರಿಯ ಮೂಲಕ ನಾಯಕತ್ವದ ಗುಣ ಬೆಳೆಯುವುದರೊಂದಿಗೆ ವಿದ್ಯಾರ್ಥಿಗಳ ಮೌಲ್ಯವನ್ನು ಪ್ರದರ್ಶಿಸಲು ಸಹಾಯಕವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ದ .ಕ. ಜಿ ಪಂ.ಹಿ.ಪ್ರಾ ಶಾಲೆ ಗೋಳಿತೊಟ್ಟು ಇಲ್ಲಿನ ಪದವೀಧರ ಶಿಕ್ಷಕ ಅಬ್ದುಲ್ ಲತೀಫ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡುತ್ತಾ ತಮ್ಮ ಊರಿನ ಸಂಸ್ಥೆಯನ್ನು ಬೆಳೆಸುವಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅಗತ್ಯ. ಬೇರೆ ಬೇರೆ ಕಡೆಗಳಲ್ಲಿ ಹಲವಾರು ವೃತ್ತಿಗಳನ್ನು ಮಾಡುತ್ತಿರುವ ಹಿರಿಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದೇ ಈ ಸಂಘದ ಉದ್ದೇಶವಾಗಿದೆ ಅಲ್ಲದೆ ಸಂಘದ ಮೂಲಕ ಸಂಸ್ಥೆಗೆ ಬೇಕಾದ ಅಗತ್ಯ ವಸ್ತುಗಳ ಕೊಡುಗೆ, ನಮ್ಮ ಹಳೆಯ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡುವುದರೊಂದಿಗೆ ಅವರ ಭವಿಷ್ಯವನ್ನು ಉಜ್ವಲ ಗೊಳಿಸುವುದು ಹಾಗೂ ತಾವುಗಳೆಲ್ಲರೂ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರಧಾರೆಗಳನ್ನು ಹಂಚಿಕೊಳ್ಳಬೇಕು ಮತ್ತು ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಬೇಕೆಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅಲ್ಬರ್ಟ್ ಸಲ್ದಾನ ಮಾತನಾಡುತ್ತಾ ಹಳೆಯ ವಿದ್ಯಾರ್ಥಿಗಳ ನಾಯಕತ್ವ
ಸ್ವಯಂಪ್ರೇರಿತ ಬದ್ಧತೆ ಜೊತೆಗೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡಬೇಕು. ಜೀವನ ಪರ್ಯಂತವಾಗಿ ಬೌದ್ಧಿಕ ಮತ್ತು ಭಾವನಾತ್ಮಕ ಸಂಪರ್ಕವನ್ನು ಉತ್ತಮಪಡಿಸಲು ಹಳೆಯ ವಿದ್ಯಾರ್ಥಿ ಸಂಘಗಳಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ವಹಿಸಿ ಕಾಲೇಜಿನ ಪ್ರತಿಷ್ಠೆಯನ್ನು ಹೆಚ್ಚಿಸಲು ಸಹಾಯ ಮಾಡುವ ಹಿಂದಿನ ವಿದ್ಯಾರ್ಥಿಗಳ ಜಾಲವನ್ನು ಬೆಂಬಲಿಸುವುದು. ಹಳೆಯ ವಿದ್ಯಾರ್ಥಿ ಸಂಘಗಳು ಸಮಾನ ಮನಸ್ಸಿನ ವ್ಯಕ್ತಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರ ಜೊತೆಗೂಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು . ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾವತಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ನಳಿನಿ, ಕಾರ್ಯದರ್ಶಿಯಾಗಿ ಸರ್ವೋತ್ತಮ ಗೌಡ, ಉಪ ಕಾರ್ಯದರ್ಶಿಯಾಗಿ ಶ್ರೀಮತಿ ಕಾವ್ಯ, ಖಜಾಂಚಿಯಾಗಿ ಶ್ರೀಮತಿ ವಿಶಾಲಾಕ್ಷಿ , ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚೇತನ್ ಆಯ್ಕೆಗೊಂಡರು.
ಪ್ರಶಿಕ್ಷಣಾರ್ಥಿ ದೀಪಾ ಮತ್ತು ತಂಡದವರು ಪ್ರಾರ್ಥಿಸಿ , ಮುಝೈನಾ ಸ್ವಾಗತಿಸಿ, ಅನುಷಾ ವಂದಿಸಿ, ಅಂಬಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.