April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ದಲಿತ ಚಳುವಳಿಗೆ 50ರ ಸಂಭ್ರಮ: ಎ.28 ಬೆಳ್ತಂಗಡಿಯಲ್ಲಿ 50 ರ ಸಂಭ್ರಮ ಸಮಾವೇಶ- ದಲಿತ ಸಾಂಸ್ಕೃತಿಕ ವೈವಿಧ್ಯ


ಬೆಳ್ತಂಗಡಿ:70ರ ದಶಕದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಾಗಿ ಉದಯಿಸಿದ ಹೆಮ್ಮೆಯ ಸಾಮಾಜಿಕ ಸಂಘಟನೆಯು
ಸ್ವಾಭಿಮಾನ ಚಳುವಳಿಯಾಗಿ ಪರಿವರ್ತನೆಗೊಳ್ಳುತ್ತಾ ಸಾಗಿದ ಕರ್ನಾಟಕ ದಲಿತ ಚಳುವಳಿ 2025ನೇ ವರ್ಷದಲ್ಲಿ 50ರ ಸಂಭ್ರಮದಲ್ಲಿದ್ದು, ಕರ್ನಾಟಕ ದಲಿತ ಚಳುವಳಿಗೆ ಅರ್ಧ ಶತಮಾನ ತುಂಬುತ್ತಿರುವ ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ಎ.28 ರಂದು ‘ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮ ಸಮಾವೇಶ -2025’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಭ್ರಮ ಆಚರಣಾ ಸಮಿತಿ ಅಧ್ಯಕ್ಷ ಬಿ.ಕೆ ವಸಂತ್ ಬೆಳ್ತಂಗಡಿ ತಿಳಿಸಿದರು.


ಅವರು ಎ.21ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾವೇಶವನ್ನು ವಿಶ್ವಮೈತ್ರಿ ಬೌದ್ಧವಿಹಾರ ಮೈಸೂರಿನ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ದ.ಸಂ.ಸ ರಾಜ್ಯ ಸಮಿತಿ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಮತ್ತು ಗುರುಮೂರ್ತಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರುಗಳಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಸೇರಿದಂತೆ ಪ್ರಮುಖ ಗಣ್ಯರು, ಜನಪ್ರತಿನಿಧಿಗಳು, ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ದಲಿತ ಸಂಘರ್ಷ ಸಮಿತಿ ಸ್ಥಾಪನೆ ಗೆ ಕಾರಣವಾದ ‘ಬೂಸಾ’ ಚಳುವಳಿ:
50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು ಹೋರಾಟಗಾರರು ನಡೆಸಿದ ಚಿಂತನೆ, ಹೋರಾಟಗಳ ಫಲವೆಂಬಂತೆ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಬೂಸಾ’ ಚಳುವಳಿ ಹೊತ್ತಿಸಿದ ಕಿಡಿ ಪ್ರೊ.ಬಿ.ಕೃಷ್ಣಪ್ಪನವರ ನಾಯಕತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣವಾಯಿತೆಂಬುದು ಇತಿಹಾಸ. ಚಂದ್ರಗುತ್ತಿಯ ಅನಿಷ್ಟ ಬೆತ್ತಲೆ ಸೇವೆ , ಬೆಂಡಿಗೇರಿ ದೌರ್ಜನ್ಯ, ಚುಂಚಿ ಕಾಲೋನಿ ಭೂಹೋರಾಟ, ಅನುಸೂಯಾ ಅತ್ಯಾಚಾರ ಪ್ರಕರಣ ಕಂಬಾಲಪಳ್ಳಿ ದಲಿತರ ಸಾಮೂಹಿಕ ಸಜೀವ ದಹನ ಪ್ರಕರಣ ಮುಂತಾದ ನೂರಾರು ಘೋರ ದೌರ್ಜನ್ಯ ಪ್ರಕರಣಗಳ ವಿರುದ್ಧದ ಐತಿಹಾಸಿಕ ಹೋರಾಟಗಳ ಮೂಲಕ ಸಂಘಟನೆಯು ಶೋಷಿತ ಸಮುದಾಯಗಳನ್ನು ಸಂಘಟಿಸುತ್ತಾ ಹೋರಾಟಗಳ ಮೂಲಕ ರಾಜ್ಯಾದ್ಯಂತ ವ್ಯಾಪಿಸಿತು ಎಂದು ತಿಳಿಸಿದರು.


ದ.ಕ ಜಿಲ್ಲೆಯಲ್ಲಿ ಬಿಲ್ಲವ ವಿದ್ಯಾರ್ಥಿಯಿಂದ ಹೋರಾಟ ಆರಂಭ:
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ವಾಭಿಮಾನಿ ಹೋರಾಟದ ಬೀಜವನ್ನು ದಕ್ಷಿಣ ಕನ್ನಡದ ನೆಲದಲ್ಲಿ ಬಿತ್ತಿದವರು ಜಿ.ಸೋಮಶೇಖರ್ ಎಂಬ ಒಬ್ಬ ಬಿಲ್ಲವ ಸಮುದಾಯದ ವಿದ್ಯಾರ್ಥಿ. ಕರ್ನಾಟಕದ ಮಹಾತ್ಮಾರೆಂದೇ ದಲಿತರಿಂದ ಕೊಂಡಾಡಲ್ಪಡುವ ಪ್ರೊ.ಬಿ.ಕೃಷ್ಣಪ್ಪರವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಕೆಚ್ಚೆದೆಯ ಸ್ವಾಭಿಮಾನಿ ಸಂಘಟನೆಯ ಮೂಲಕ ನಾಡಿನ ದಲಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆಯನ್ನು ಹಚ್ಚಿ ಎಂದೂ ಆರದಂತೆ ನೋಡಿಕೊಳ್ಳಿ ಎಂಬ ಸಂದೇಶ ನೀಡಿದರು ಎಂದು ಬಿ.ಕೆ ವಸಂತ್ ಹೇಳಿದರು.


1980ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಡಿಎಸ್‌ಎಸ್ ಆರಂಭ:
1980ರಲ್ಲಿ ಜಿಲ್ಲಾ ಮಟ್ಟದಿಂದ ಬೆಳ್ತಂಗಡಿ ತಾಲೂಕಿಗೆ ಪ್ರವೇಶಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಬೆರಳೆಣಿಕೆಯ ಸ್ಥಳೀಯ ಮುಖಂಡರ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಪಸರಿಸುವಂತಾಯಿತು. ದಿ. ಡೀಕಯ್ಯ ಅವರು ಈ ಹೋರಾಟದ ಮುಂಚೂಣಿಯಲ್ಲಿದ್ದರು. 1981ರಲ್ಲಿ ಚೆನ್ನಕೇಶವರವರ ಸಂಚಾಲಕತ್ವದಲ್ಲಿ ಡಿ.ಎಸ್.ಎಸ್ ಬೆಳ್ತಂಗಡಿ ತಾಲೂಕಿನಲ್ಲಿ ಅಧಿಕೃತವಾಗಿ ಆರಂಭಗೊಂಡಿತು. ಅಂದು ಬಡತನ, ನಿರುದ್ಯೋಗ, ಮೂಢನಂಬಿಕೆಗಳೆ ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಶೋಷಣೆಗೊಳಗಾಗುತ್ತಾ ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ಭೂದೌರ್ಜನ್ಯಗಳಿಂದ ನೊಂದಿದ್ದ ಅಸಂಘಟಿತ ಶೋಷಿತ, ದಲಿತರ ಪಾಲಿಗೆ ಆಪತ್ಬಾಂಧವನಂತೆ ಮೂಡಿ ಬಂದ ದ.ಸಂ.ಸ. ದಲಿತ ಸಮುದಾಯದಲ್ಲಿ ಧೈರ್ಯ ತುಂಬಿ ಸಂಘಟನಾತ್ಮಕ ಜಾಗೃತಿ ಮೂಡಿಸಿ ಒಗ್ಗೂಟಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತದ ಶೋಷಿತರ ವಿಮೋಚಕ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ವಿಚಾರಧಾರೆಯೊಂದಿಗೆ ಪ್ರೊ.ಕೃಷ್ಣಪ್ಪರವರ ಹೋರಾಟದ ಪಾಠದಿಂದ ಅವರು ಕೈಗೆ ಕೊಟ್ಟ ಸ್ವಾಭಿಮಾನದ ನೀಲಿ ಬಾವುಟದ ಸ್ಫೂರ್ತಿಯಿಂದ ನಾಡಿನ ಮೂಲೆ ಮೂಲೆಯಲ್ಲಿ ಶೋಷಕ ವರ್ಗ ಮತ್ತು ಒಡೆದು ಆಳುವವರ ದರ್ಪ, ದಮನ ದಬ್ಬಾಳಿಕೆಗಳಿಗೆ ಸಡ್ಡು ಹೊಡೆದು ಸಿಡಿದೆದ್ದ ದಲಿತ ಸಂಘರ್ಷ ಸಮಿತಿಯು ಹಂತ ಹಂತವಾಗಿ ಚಳುವಳಿಯಾಗಿ ಬೆಳೆದು ದಲಿತ ಸಮುದಾಯದ ಏಳಿಗೆಯನ್ನು ನಿರಾಕರಿಸುತ್ತಿದ್ದ ಸಾಮಾಜಿಕ ಸಂಕೋಲೆಗಳನ್ನು ಕಡಿದುಕೊಂಡು ಮುಂದೆ ಸಾಗಿತು ಎಂದು ವಿವರಿಸಿದರು.


ಸರಕಾರಕ್ಕೆ ಹಕ್ಕೋತ್ತಾಯ ಮಂಡನೆ:
ಕರ್ನಾಟಕ ದಲಿತ ಚಳುವಳಿಗೆ ಅರ್ಧ ಶತಮಾನ ತುಂಬುತ್ತಿರುವ ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿರುವ ‘ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮ ಸಮಾವೇಶ -2025 ಕಾರ್ಯಕ್ರಮದಲ್ಲಿ ದಲಿತ ಚಳುವಳಿ ನಡೆದು ಬಂದ ಸವಾಲುಗಳ ಹಾದಿ, ಹೋರಾಟದ ಸ್ಫೂರ್ತಿ ಸೈದ್ಧಾಂತಿಕ ಜಾಗೃತಿ ಇತ್ಯಾದಿಗಳ ಅವಲೋಕನ ನಡೆಯಲಿದೆ. ಸಮಾವೇಶದಲ್ಲಿ ಸರಕಾರಕ್ಕೆ ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಲಾಗುವುದು. ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ತಾಲೂಕಿನ ದಲಿತ ಸಂಘಟನೆಗಳ ಕಾರ್ಯಕರ್ತರು, ಚಳುವಳಿಯ ಹಿರಿಯ ಕಿರಿಯ ಕಾರ್ಯಕರ್ತರು, ಚಳುವಳಿಯ ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿ.ಕೆ ವಸಂತ್ ಮಾಹಿತಿ ನೀಡಿದರು.


ಸಮಿತಿಯ ಗೌರವಾಧ್ಯಕ್ಷ ಚೆನ್ನಕೇಶವ, ಕಾರ್ಯಾಧ್ಯಕ್ಷರುಗಳಾದ ಶೇಖರ್ ಕುಕ್ಕೇಡಿ, ಸಂಜೀವ ಆರ್. ಬೆಳ್ತಂಗಡಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಪೂರಕ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಸಮಿತಿ ಕೋಶಾಧಿಕಾರಿ ಶ್ರೀಧರ್ ಎಸ್. ಕಳೆಂಜ, ಕಾರ್ಯಾಧ್ಯಕ್ಷರಾದ ಕೆ. ನೇಮಿರಾಜ್ ಕಿಲ್ಲೂರು, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷರಾದ ಪಿ.ಕೆ ರಾಜು ಪಡಂಗಡಿ, ಗೌರವ ಸಲಹೆಗಾರರಾದ ಸುಂದರ್ ನಾಲ್ಕೂರು, ಸವಿತಾ ಅಟ್ರಿಂಜೆ, ಕಾರ್ಯದರ್ಶಿ ಸುರೇಶ್ ಓಡಿಲ್ನಾಳ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಮುಗೇರ ಹಿತಚಿಂತನ ವೇದಿಕೆಯ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ನಾರಾವಿ: ಈದು ಪರಸ್ಪರ ಸೇವಾ ಬ್ರಿಗೇಡ್ ವತಿಯಿಂದ ಚಿಕಿತ್ಸಾ ನೆರವು ಹಸ್ತಾಂತರ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಕಾರಿನಲ್ಲಿ ಮಲಗಿದ್ದವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದ ಘಟನೆ: ಗಾಯಗೊಂಡ ಮಿತ್ತಬಾಗಿಲು ಸಂಶುದ್ದೀನ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲು

Suddi Udaya

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರಿಗೆ ಲಯನ್ಸ್ ಕ್ಲಬ್ ನಿಂದ ಹುಟ್ಟುಹಬ್ಬದ ಶುಭಾಶಯ

Suddi Udaya

ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಗುರುವಾಯನಕೆರೆ ಅರೆಮಲೆಬೆಟ್ಟಕ್ಕೆ ಭೇಟಿ

Suddi Udaya
error: Content is protected !!