ಮಾಲಾಡಿ : ಇಲ್ಲಿಯ ಕೊಲ್ಪೆದಬೈಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಾಗಲೇ ಕಳ್ಳರು ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ರೂ 30,000/- ವನ್ನು ಕಳವು ಗೈದಿರುವ ಘಟನೆ ಎ.20 ರಂದು ನಡೆದಿದೆ.
ಘಟನೆ ವಿವರ: ಮಾಲಾಡಿ ಕೊಲ್ಪೆದಬೈಲು ನಿವಾಸಿ ಶ್ರೀಮತಿ ವಸಂತಿ ಹೆಗ್ಡೆ ಎಂಬವರ ದೂರಿನಂತೆ ವಸಂತಿ ಹೆಗ್ಡೆ, ಅವರ ಮಗ ಹಾಗೂ ಸೊಸೆ ಎ.20 ರಂದು ಬೆಳ್ತಂಗಡಿಗೆ ತೆರಳಿದ್ದು ಸಂಜೆ ವಾಪಾಸು ಮನೆಗೆ ಬಂದು ನೋಡಿದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ವಸಂತಿ ಹೆಗ್ಡೆರವರ ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗದ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ವಸಂತಿ ಹೆಗ್ಡೆ ರವರ ಕೋಣೆಯ ಕಪಾಟುಗಳಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ನಗದು ರೂ 30,000/- ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ತೂಕ 160.5 ಗ್ರಾಂ ಆಗಿದ್ದು ಇದರ ಮೌಲ್ಯ ರೂ 13,72,000/- ಆಗಿರುತ್ತದೆ. ನಗದು ಸೇರಿ ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 14,02,000/- ಆಗಿರುತ್ತದೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 25/2025 ಕಲಂ: 331(3), 305 BNS- 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.