
ಬೆಳ್ತಂಗಡಿ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನರಸಿಂಹಗಡ ನಡ ಗ್ರಾಮ ಇದರ ವತಿಯಿಂದ ನಡ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ವಠಾರದಲ್ಲಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಮೇ 3 ಮತ್ತು ಮೇ 4ರಂದು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜ ಹೇಳಿದರು.
ಅವರು ಎ.30 ರಂದು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಗಡಾಯಿಕಲ್ಲು, ನರಸಿಂಹಗಡ ಎಂಬ ಹೆಸರು ಕೇಳದವರಿಲ್ಲ, ಇದು ಚಾರಣಿಗರ ಪ್ರವಾಸಿ ತಾಣ, ಮುಸ್ಲಿಂರ ದಾಳಿಯ ಬಳಿಕ ಇದರ ಹೆಸರನ್ನು ಬದಲಾಯಿಸಿರುವುದು ವಿಪರ್ಯಾಸ, ಮೂಲ ಹೆಸರು ನರಸಿಂಹಗಡ, ಗ್ರಾಮದ ಹೆಸರು ನಡ, ನರಸಿಂಹಗಡದ ಪ್ರಥಮ ಹಾಗೂ ಕೊನೆಯ ಹೆಸರು ಗ್ರಾಮಕ್ಕೆ ಇದೆ. ವಿಜಯನಗರ ಸಾಮಾಜ್ರದ ಆಡಳಿತದ ಕಾಲದಲ್ಲಿ ಇದೊಂದು ಪೇಟೆಯಾಗಿತ್ತು. ಸುತ್ತಮುತ್ತ ಪಟ್ಟಣದ ಆನೇಕ ಕುರುಹುಗಳು ಇದೆ. ಬ್ರಿಟಿಷ್ ಆಡಳಿತಕ್ಕಿಂತ ಪೂರ್ವದಲ್ಲಿ ಬಾರ್ಟರ್ ಸಿಸ್ಟಿಂ ಈ ಕಡೆಯಿಂದ ಉಪ್ಪು, ಆ ಕಡೆಯಿಂದ ಮೆಣಸು ಈ ರೀತಿಯ ವಸ್ತುಗಳನ್ನು ತಂದು ಮಾರಾಟ ಮಾಡಲಾಗುತ್ತಿತ್ತು. ಜಿಲ್ಲಾ ಕೇಂದ್ರದಂತೆ, ವಿಜಯನಗರ ಸಾಮ್ರಾಜ್ಯಕ್ಕೆ ಕಪ್ಪಗಳನ್ನು ಸಂಗ್ರಹ ಮಾಡುವ ಪ್ರಸಿದ್ದ ಕೇಂದ್ರ ಇದಾಗಿತ್ತು ಎಂದು ಕ್ಷೇತ್ರದ ಹಿನ್ನಲೆಯನ್ನು ತಿಳಿಸಿದರು.

ಇದು ನರಸಿಂಹ ದೇವರ ಸಾನಿಧ್ಯ ಇರುವ ಕ್ಷೇತ್ರ. ಹಿಂದಿನ ಕಾಲದಲ್ಲಿ ಇಲ್ಲಿ ಆರಾಧನೆ ನಡೆಯುತ್ತಿತ್ತು ಎಂಬುದಕ್ಕೆ ದೇವಸ್ಥಾನದ ಕುರುಹುಗಳು ಇಲ್ಲಿವೆ. ಇದನ್ನು ಜೀರ್ಣೋದ್ಧಾರ ಮಾಡಿ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪವನ್ನು ಊರ ಭಕ್ತರು ಮಾಡಿದ್ದಾರೆ. ತಂತ್ರಿಗಳಾದ ಕೊಯ್ಯೂರು ನಂದಕುಮಾರ ತಂತ್ರಿಗಳು, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದವರು ಇದಕ್ಕೆ ಹೆಚ್ಚಿನ ಒತ್ತು ಕೊಟ್ಟು ದೇವಸ್ಥಾನ ನಿರ್ಮಾಣಕ್ಕೆ ಶಕ್ತಿ ತುಂಬಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಊರಿನವರ ಸಲಹೆ-ಸೂಚನೆಯಂತೆ ಶ್ರೀ ವಿಷ್ಟು ಸಾನಿಧ್ಯ ಇರುವ ಕ್ಷೇತ್ರವಾದ್ದರಿಮದ ತಿರುಪತಿಯಿಂದ ಶ್ರೀನಿವಾಸನ ಮೂರ್ತಿ ತಂದು ಶ್ರೀನಿವಾಸ ಕಲ್ಯಾಣೋತ್ಸವ ಮಾಡಲು ನಿರ್ಧರಿಸಲಾಗಿದೆ. ತಿರುಪತಿ ತಿಮ್ಮಪ್ಪ 7 ಬೆಟ್ಟಗಳ ನಡುವೆ ಇರುವಂತೆ ಗಡಾಯಿಕಲ್ಲಿನ ಪ್ರಶಾಂತ ಪರಿಸರದ ತಪ್ಪಲಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ತಾಲೂಕಿನ ೮೧ ಗ್ರಾಮಗಳ ಭಕ್ತರು ಇದರಲ್ಲಿ ಭಾಗವಹಿಸಬೇಕು. ಮೇ.೪ರಂದು ಸಂಜೆ ೪ಕ್ಕೆ ಮಂಜೊಟ್ಟಿಯಿಂದ ಶ್ರೀನಿವಾಸ ಕಲ್ಯಾಣೋತ್ಸವದ ದಿಬ್ಬಣ ಹೊರಡಲಿದೆ. ದೇವಸ್ಥಾನ ನಿರ್ಮಾಣಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಶಕ್ತಿ ನೀಡಲಿದೆ ಎಂದು ಹರೀಶ್ ಪೂಂಜ ತಿಳಿಸಿದರು.
ಸನಾತನ ಧರ್ಮದ ಪ್ರವರ್ತಕರಾದ ಪ್ರಾಚೀನ ಋಷಿ ಮುನಿಗಳು ವೈದಿಕ ಆಧಾರದ ಚೌಕಟ್ಟಿನಲ್ಲಿ ಅನೇಕ ಜಪ, ಹೊ ವೃತಾಚರಣೆ, ದೇವರ ಕಲ್ಯಾಣೋತ್ಸವ, ಪೂಜೆ ಇತ್ಯಾದಿಗಳನ್ನು ತಿಳಿಸಿಕೊಟ್ಟಿರುತ್ತಾರೆ. ಇವುಗಳ ಪೈಕಿ ಕಲಿಯುಗದಲ್ಲಿ ಮಹತ್ವ ಪಡೆದ ‘ಲೋಕಕಲ್ಯಾಣಾರ್ಥ’ ಎಂಬ ಕೃತಕೃತ್ಯ ಭಾವನೆಯೊಂದಿಗೆ ಕಾಣಿಸಲ್ಪಡುವುದು “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಶ್ರೀಮನ್ನಾರಾಯಣನು ಬೇರೆ ಬೇರೆ ಯುಗಗಳಲ್ಲಿ ಶ್ರೀನಿವಾಸ, ಶ್ರೀ ರಾಮ, ಶ್ರೀ ಕೃಷ್ಣ ಮೊದಲಾದ ರೂಪಗಳಲ್ಲಿ ಅವತರಿಸಿ ದುಷ್ಟ ಸಂಹಾರವನ್ನು ಮಾಡಿ ಸುಭಿಕ್ಷೆ ಒದಗಿಸಿದ್ದರೂ, ವೆಂಕಟರಮಣ-ಪದ್ಮಾವತಿ ಅಮ್ಮನವರ ಕಲ್ಯಾಣವು ಲೋಕ ಕಲ್ಯಾಣಕರವಾಗಿತ್ತದೆ. ಆದುದರಿಂದಲೇ “ಕಲ್ಯಾಣದ್ಭುತ ಗಾತ್ರಾಯ” ಎಂದು ವಿಶೇಷವಾಗಿ ಸ್ತುತಿಸುತ್ತಾರೆ.
ಐತಿಹಾಸಿಕ ಕಾರ್ಯಕ್ರಮ: ಡಾ. ಪ್ರದೀಪ್:
ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಎ.೪ರಂದು ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಿಂದ ಹೊರಡುವ ವೈ?ಭವೋಪೇತ ಮೆರವಣಿಗೆಗೆ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಗಳು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮರೆವಣಿಗೆಯಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ. ಸಂಜೆ ನಡೆಯುವ ಧಾರ್ಮಿಕ ಸಭೆಯನ್ನು ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಉಜಿರೆಯ ಮೋಹನ್ ಕುಮಾರ್ ಉದ್ಘಾಟಿಸಲಿದ್ದು, ಹಿರಿಯ ವಕೀಲ ಧನಂಜಯ ರಾವ್ ಪ್ರಧಾನ ಭಾಷಣ ಮಾಡಲಿದ್ದಾರೆ, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿದ್ದಾರೆ ಎಂದು ಸಮಿತಿ ಅಧ್ಯಕ್ಷ ಡಾ| ಪ್ರದೀಪ್ ನಾವೂರು ತಿಳಿಸಿದರು.
ಎ.4 ರಂದು ಪ್ರಾತಃಕಾಲ ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿ ಇರಲಿದೆ. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಸಂಸದ ಬ್ರಿಜೇಶ್ ಚೌಟ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಶರತ್‌ಕೃಷ್ಣ ಪಡ್ವೆಟ್ನಾಯ, ಶಶಿಧರ ಶೆಟ್ಟಿ ಬರೋಡ, ಜಯವರ್ಮರಾಜ ಬಲ್ಲಾಳ್, ಹರೀಶ್ ಕುಮಾರ್, ಗಂಗಾಧರ ಗೌಡ, ಪ್ರಭಾಕರ ಬಂಗೇರ, ಶರಣ್ ಪಂಪ್‌ವೇಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಈ ಭಾಗದ ಯುವಕರು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಜಿತ್ ಆರಿಗಾ, ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ ಬೋಜಾರ, ಕೋಶಾಧಿಕಾರಿಗಳಾದ ಪುರುಷೋತ್ತಮ್ ಶೆಣೈ, ಚೆನ್ಕಕೇಶವ ಗೌಡ ಬೋಜಾರ, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ಕುಮಾರ್ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಸಂಚಾಲಕ ನವೀನ್ ನೆರಿಯ ಸ್ವಾಗತಿಸಿ, ಧನ್ಯವಾದವಿತ್ತರು.