ಬೆಳ್ತಂಗಡಿ: ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಹಾಗೂ ಟ್ರೈಯೇಜ್ ಕೇರ್ ಮೇ 7 ರಂದು ಲೋಕಾರ್ಪಣೆಗೊಂಡಿತು.
ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ವಂ. ಲಾರೆನ್ಸ್ ಮುಕ್ಕುಯಿ ತುರ್ತು ಚಿಕಿತ್ಸಾ ಘಟಕವನ್ನು ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿ ಈ ಭಾಗದ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆಯನ್ನು ಜ್ಯೋತಿ ಆಸ್ಪತ್ರೆ ನೀಡುತ್ತಾ ಬರುತ್ತಿದೆ. ವಿಶೇಷವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಒಳ್ಳೆಯ ಆರೋಗ್ಯ ಸೇವೆ ಸಿಗುತ್ತಿದೆ. ರಸ್ತೆಗಳು ಅಭಿವೃದ್ದಿ ಆಗುತ್ತಿದೆ, ಆಕ್ಸಿಡೆಂಟ್ ಹೆಚ್ಚುತ್ತಿದೆ, ಹೃದಯಾಘಾತ ಹೆಚ್ಚುತ್ತಿದ್ದು ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಘಟಕ ಅಗತ್ಯವಾಗಿ ಬೇಕಾಗಿತ್ತು ಎಂದು ಹೇಳಿದರು. ಟಿಹೆಚ್‌ಒ ಡಾ| ಸಂಜತ್ ಅವರು ದೀಪ ಬೆಳಗಿಸಿ ಮಾತನಾಡಿ ಬೆಳ್ತಂಗಡಿಯಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗುತ್ತಿದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ, ಸಿಡಿಪಿಒ ಪ್ರಿಯಾ ಆಗ್ನೇಸ್, ಲಾಯಿಲ ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ರಿಜೀನಲ್ ಸಿಓಓ ಸಘೀರ್ ಸಿದ್ದಿಕಿ, ಕೆ.ಎಂ.ಸಿ. ಆಸ್ಪತ್ರೆಯ ಜೀದು ರಾಧಾಕೃಷ್ಣನ್, ಆಸ್ಪತ್ರೆಯ ಮೆಡಿಕಲ್ ಸೂಪರ್‌ಡೆಂಟ್ ಆನ್ ಮೇರಿಟ್ ಎಸ್.ಡಿ. ಉಪಸ್ಥಿತರಿದ್ದರು.
ಮೆಡಿಕಲ್ ಸೂಪರಿಂಟೆಂಟ್ ಡಾ. ಸಿಸ್ಟರ್ ಆನ್ ಗ್ರೇಸ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಜ್ಯೋತಿ ಆಸ್ಪತ್ರೆ, ಕೆಎಂಸಿ ಆಸ್ಪತ್ರೆಯ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪರಿಣತಿಯುಳ್ಳ ವೈದ್ಯರಿಂದ ಸೇವೆ:
ತುರ್ತು ಚಿಕಿತ್ಸಾ ವಿಭಾಗದಲ್ಲಿ ಪರಿಣತಿಯುಳ್ಳ ವೈದ್ಯರು ಇಲ್ಲಿ ಸೇವೆ ಸಲ್ಲಿಸಲಿದ್ದು, ಐದು ಹಾಸಿಗೆಗಳೊಂದಿಗೆ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಜೊತೆಗೆ, ವೈದ್ಯಕೀಯ ತಂಡದೊಂದಿಗಿನ ICU ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿರುತ್ತದೆ.
“ರೋಗಿಯ ಜೀವ ಉಳಿವು ಹಲವು ಬಾರಿ ‘ಗೋಲ್ಡನ್ ಅವರ್’ ಎಂದು ಕರೆಯಲಾಗುವ ಪ್ರಥಮ ಗಂಟೆಯಲ್ಲಿನ ಚಿಕಿತ್ಸೆಯ ಮೇಲೆ ಆಧಾರಿತವಾಗಿರುತ್ತದೆ. ಬೆಳ್ತಂಗಡಿ ಪ್ರದೇಶದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅನೇಕ ಜೀವಹಾನಿ ಸಂಭವಿಸುತ್ತಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಜನರ ಅಗತ್ಯತೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ಈ ಘಟಕವನ್ನು ಪ್ರಾರಂಭಿಸಲಾಗುತ್ತಿದೆ.