ಬೆಳ್ತಂಗಡಿ: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮೈ ಕ್ರಿಯೇಶನ್ಸ್‌ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ‘ಲೈಟ್ ಹೌಸ್’ ಕನ್ನಡ ಮಕ್ಕಳ ಚಲನಚಿತ್ರ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ನಾಯಕನಾಗಿ ಬೆಳ್ತಂಗಡಿ ತಾಲೂಕಿನ ನಾವೂರಿನ ಅಚಲ್ ಜಿ. ಬಂಗೇರ ಹಾಗೂ ನಾಯಕಿಯಾಗಿ ಕಾರ್ಕಳ ತಾಲೂಕಿನ ಮಾಳದ ಕು| ಅಪೂರ್ವ ನಟಿಸಿದ್ದಾರೆ.



ನಾಯಕ ನಟನಾಗಿರುವ ಅಚಲ್ ಜಿ. ಬಂಗೇರ ಮೂಲತಃ ಬೆಳ್ತಂಗಡಿ ತಾಲೂಕಿನ ನಾವೂರಿನ ಇಂಚರ ನಿವಾಸಿ ಗಣೇಶ್ ಪಿ. ಮತ್ತು ವನಿತಾ ದಂಪತಿಗಳ ಪುತ್ರ. ಅಚಲ್ ಅವರು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಗುರುಶ್ರೀ ವಿದ್ಯಾಕೇಂದ್ರ ಬೆಂಗಳೂರಿನಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿರುವ ಅಚಲ್ ಅವರು, ಈ ಹಿಂದೆ ಬಾಲ ನಟನಾಗಿ ‘ಮರೀಚಿ’ ಚಲನಚಿತ್ರದಲ್ಲಿ ಪ್ರಥಮ ಬಾರಿಗೆ ಖಳ ನಾಯಕನಾಗಿ ಬಣ್ಣ ಹಚ್ಚಿದ್ದರು. ದಾಸ ಪುರಂದರ, ಗೌರಿಪುರದ ಗಯ್ಯಾಳಿಗಳು, ಭೂಮಿಗೆ ಬಂದ ಭಗವಂತ, ಶಾಂತಂ ಪಾಪಂ ಸಹಿತ ಇನ್ನಿತರ ಕಿರುತೆರೆಯಲ್ಲಿ ಅಭಿನಯ ಮಾಡಿದ್ದಾರೆ. ನೃತ್ಯಕಲೆಯಲ್ಲಿ ಪರಿಣತಿ ಹೊಂದಿರುವ ಇವರು, ಯಕ್ಷಗಾನ ಕಲೆ ಮೇಲೆ ಅಪಾರ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಇವರ ತಂದೆ, ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


ನಾಯಕಿ ನಟಿಯಾಗಿರುವ ಅಪೂರ್ವ ಕಾರ್ಕಳ ತಾಲೂಕಿನ ಮಾಳ ಹರಿಣಾಕ್ಷಿ ಹಾಗೂ ಅಶೋಕ್ ದಂಪತಿಗಳ ಪುತ್ರಿ. ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿರುವ ಅಪೂರ್ವ ಅವರು ಡ್ರಾಮಾ ಜೂನಿಯಾರ್ ಫೈನಲಿಸ್ಟ್ ಸಾಧನೆ ಮಾಡಿದವಳು. ಪ್ರಸ್ತುತ ಕಿಡ್ ಮಾಡೆಲ್ ಆಗಿದ್ದು, ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ಮುಂಬರುವ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಲಿದ್ದಾಳೆ.
ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಅವರ ನಿರ್ಮಾಣದಲ್ಲಿ ಸಂದೀಪ್ ಕಾಮತ್ ಅಜೆಕಾರು ಅವರ ನಿರ್ದೇಶನದಲ್ಲಿ ಸಿನೆಮಾ ಮೂಡಿಬಂದಿರುವ ಈ ಚಲನಚಿತ್ರದಲ್ಲಿ ಹೆಸರಾಂತ ಕಲಾವಿದರಾದ ಶೋಭರಾಜ್ ಪಾವೂರು, ಮಾವಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ ಶೀತಲ್ ನಾಯಕ್, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದವರು ನಟಿಸಿದ್ದಾರೆ.

ಇದು ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಇಡೀ ಸಂಸಾರ ಮಕ್ಕಳ ಜೊತೆ ಕೂತು ನೋಡುವ ಸಿನೆಮಾ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಚಿತ್ರದಲ್ಲಿ ನಡೆದಿದೆ, ತೆಲಂಗಾಣದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರ ಫೆಸ್ಟಿವಲ್‌ನಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ.
ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಅವರ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್, ದಿಯಾ ಹೆಗ್ಡೆ ಧ್ವನಿ ನೀಡಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ವಹಿಸಿಕೊಂಡಿದ್ದು, ಸಂಗೀತವನ್ನು ಕಾರ್ತಿಕ್ ಮುಲ್ಕಿ ನೀಡಿದ್ದಾರೆ. ಉಡುಪಿ ನಮ್ಮ ಊರು ಹಾಡಿಗೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ.