
ಉಜಿರೆ: ಯಾವಾಗಲೂ ಪ್ರಬಲ ಇಚ್ಛಾಶಕ್ತಿಯೊಂದಿಗೆ ಧನಾತ್ಮಕ ಚಿಂತನೆಯೊಂದಿಗೆ ಎಲ್ಲರೊಂದಿಗೆ ಮುಕ್ತವಾಗಿ ಪ್ರೀತಿ-ವಿಶ್ವಾಸದಿಂದ ಬೆರೆಯಬೇಕು. ನಮ್ಮ ಆಚಾರ-ವಿಚಾರ, ಮತ್ತು ಆಹಾರ-ವಿಹಾರ ಪರಿಶುದ್ಧವಾಗಿದ್ದಲ್ಲಿ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆೆ ಹೇಳಿದರು.
ಅವರು ಮೇ 17 ರಂದು ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ 75 ವರ್ಷ ದಾಟಿದ ಹಿರಿಯ ನಾಗರಿಕರನ್ನು ಗೌರವಿಸಿ ಮಾತನಾಡಿದರು.
ಯಾರೂ ಸಾವಿಗೆ ಹೆದರಬೇಕಾಗಿಲ್ಲ ಏಕೆಂದರೆ ಸಾವು ಬರುವಾಗ ನಾವು ಇರುವುದಿಲ್ಲ. ನಾವು ಇರುವಷ್ಟು ದಿನ ಸಾವು ಬರುವುದಿಲ್ಲ. ಯಾವಾಗಲೂ ಪರಿಶುದ್ಧ ಮನದಿಂದ ಉತ್ತಮ ಸೇವಾ ಕಾರ್ಯಗಳನ್ನು ಮಾಡಬೇಕು. ಇದರಿಂದ ಅಪರಿಮಿತ ಸಂತೋಷ ಮತ್ತು ತೃಪ್ತಿ ಸಿಗುತ್ತದೆ ಎಂದು ಅವರು ಹೇಳಿದರು.
ಕೂಸಪ್ಪ ಗೌಡ, ದೇಜಪ್ಪ, ಚಾಕೊಚನ್, ಯಶೋದಾ, ಮಹಮ್ಮದ್, ಪುಷ್ಪಾ, ವೇಣೂರು, ನಮಿರಾಜ, ಆನಂದ ಶೆಟ್ಟಿ, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ ಮತ್ತು ಕುಂಞಪ್ಪ ಗೌಡ ಅವರನ್ನು ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಪೀತಾಂಬರ ಹೇರಾಜೆ ಮತ್ತು ಕುಂಞಪ್ಪ ಗೌಡ ಕೃತಜ್ಞತೆ ವ್ಯಕ್ತಪಡಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ವಿಶ್ವಾಸ ರಾವ್ ಧನ್ಯವಾದವಿತ್ತರು.