ಬೆಳ್ತಂಗಡಿ : ಕಳೆದ ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯ ಯುವಕನೊಬ್ಬನನ್ನು ಕೊಲೆ ಮಾಡಿ ಆತನನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಹಾಸನ ಜಿಲ್ಲೆಯಲ್ಲಿ ಬಿಸಾಕಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬನನ್ನು ಕೊಡಗು ಪೊಲೀಸರು ಗುರುವಾಯನಕೆರೆಯ ಶಕ್ತಿನಗರದ ಪಿಜಿಯಿಂದ ಬಂಧಿಸಿರುವುದಾಗಿ ವರದಿಯಾಗಿದೆ.



ಪ್ರಕರಣದ ಹಿನ್ನಲೆ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಮೇ.೧೦ ರಂದು ಅಪರಿಚಿತ ವ್ಯಕ್ತಿಗಳು ರಕ್ತಸಿಕ್ತವಾದ ಕಾರು ನಿಲ್ಲಿಸಿ ಹೋಗಿದ್ದ ಬಗ್ಗೆ ಸ್ಥಳೀಯರು ಯಸಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಳಿಕ ಮೇ.೧೪ ರಂದು ಹತ್ತಿರದ ಕಲ್ಲಹಳ್ಳಿ ಪ್ರಪಾತದಲ್ಲಿ ಸಂಪತ್@ ಶಂಭು ಶವ ಕೂಡ ಬರ್ಬರವಾಗಿ ಕೊಚ್ಚಿ ಕೊಲೆಗೈದ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.ಬೇರೆಡೆ ಕೊಲೆಗೈದು ಆತನ ಕಾರಿನಲ್ಲಿ ತೆಗೆದುಕೊಂಡು ಬಂದು ಬಿಸಾಕಿರುವುದು ಗೊತ್ತಾಗಿದೆ. ಕಾರು ಮಾಲೀಕ ಕೊಡಗಿನ ಕುಶಾಲನಗರದ ಉದ್ಯಮಿ ಜಾನ್ ಎಂಬರಿಗೆ ಸೇರಿದ್ದು ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಸ್ನೇಹಿತ ಸೋಮವಾರಪೇಟೆ ಕಕ್ಕೆಹೊಳೆ ಜಂಗ್ಸನ್ ನಿವಾಸಿ ಸಂಪತ್@ ಶಂಭು ಮೇ.೯ ರಂದು ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದರು. ಕೊಡಗಿನ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿರುವುದು ಕುಶಾಲನಗರದಲ್ಲಿ ಆಗಿರುವುದರಿಂದ ಕುಶಾಲನಗರ ಪೊಲೀಸರು ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡು ಮಾಡಿ ತನಿಖೆ ಮುಂದುವರಿಸಿದ್ದಾರೆ.

ಗುರುವಾಯನಕೆರೆಯ ಶಕ್ತಿನಗರದಲ್ಲಿ ಕಾರ್ಯಾಚರಣೆ:
ಕೊಡಗು ಜಿಲ್ಲೆಯಲ್ಲಿ ಸಂಪತ್ ಎಂಬವನನ್ನು ಕೊಲೆ ಮಾಡಿ ಸಕಲೇಶಪುರದ ಬಳಿ ಮೃತದೇಹ ಬಿಸಾಕಿದ ಪ್ರಕರಣ ಸಂಬಂಧ ಆರೋಪಿ ಕಿರಣ್ ಎಂಬಾತನನ್ನು ಮೊದಲು ಪೊಲೀಸರು ಬಂಧಿಸಿದ್ದರು ಬಳಿಕ ವಿಚಾರಣೆಯಲ್ಲಿ ಯುವತಿಯ ವಿಚಾರದಲ್ಲಿ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಮತ್ತೊಬ್ಬ ಆರೋಪಿ ಕೊಡಗಿನ ಗಣಪತಿ @ ಗಣಪ ಎಂಬತನ ಕೈವಾಡ ಇರುವ ಬಗ್ಗೆ ಕಿರಣ್ ಬಾಯಿಬಿಟ್ಟಿದ. ಈತ ಹತ್ಯೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ, ಈತನ ಬಂಧನಕ್ಕಾಗಿ ಕುಶಾಲನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮೇ.೧೬ ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದ ಪಿಜಿಯಲ್ಲಿ ಕಳೆದ ಎರಡು ದಿನದಿಂದ ವಾಸವಾಗಿದ್ದ ಆರೋಪಿ ಗಣಪತಿ@ ಗಣಪನನ್ನು ಬೆಳ್ತಂಗಡಿ ಪೊಲೀಸರ ಸಹಾಯದಿಂದ ಪಿಜಿಯನ್ನು ಶಸ್ತ್ರಾಸ್ತ್ರ ಸಹಿತ ಸುತ್ತುವರಿದು ವಶಕ್ಕೆ ಪಡೆದು ಬಳಿಕ ಬಂಧಿಸಿ ಕರೆದೊಯ್ಯುದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೊಡಗು ಭೇಟಿ ವೇಳೆ ಸಿಎಂ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಕೊಲೆಯಾದ ಸಂಪತ್ ಆರೋಪಿಯಾಗಿದ್ದ ಎನ್ನಲಾಗಿದೆ.