ಬೆಳ್ತಂಗಡಿ: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಬ್ರಾಸ್ ಲೈಟ್ ನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಬಳಂಜದ ಯುವಕ, ಅಳದಂಗಡಿ ಸತ್ಯದೇವತೆ ಎಂಟರ್ ಪ್ರೈಸಸ್ ಮಾಲಕ, ಗುರಿಕಾರ ಜಗದೀಶ್ ಪೂಜಾರಿ ಪೆರಾಜೆ ಇವರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದೊಂದು ದಿನದ ಹಿಂದೆ ಮೇ 19 ರಂದು ಕಾಪಿನಡ್ಕದ ಯುವಕ ರಾಕೇಶ್ ಎಂಬವರ ಸುಮಾರು ಎರಡು ಲಕ್ಷ ಮೊತ್ತದ ಚಿನ್ನದ ಬ್ರಾಸ್ ಲೈಟ್ ಬೆಳಿಗ್ಗೆ ಕಾರ್ಯಕ್ರಮಕ್ಕೆ ತೆರಳುವಾಗ ಕಳೆದು ಹೋಗಿತ್ತು.ಅವರು ಬಳಂಜ, ಗುರುವಾಯನಕೆರೆ, ಪಡಂಗಡಿ, ಮಡಂತ್ಯಾರು ಕಡೆ ಹುಡುಕಿದರು ಸಿಗಲಿಲ್ಲ.ಬ್ರಾಸ್ ಲೈಟ್ ಕಳೆದು ಹೋದ ಬಗ್ಗೆ ಸೋಶಿಯಲ್ ಮಿಡೀಯಾದಲ್ಲಿ ಹಾಕಿದ್ದರು. ಬಳಂಜದ ಯುವಕ ಜಗದೀಶ್ ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ತನ್ನ ತಾಯಿ ಜೊತೆ ಹೋಗಿ ರಾತ್ರಿ 8 ಗಂಟೆ ಸಮಯಕ್ಕೆ ಹಿಂತಿರುಗಿ ಬರುವಾಗ ಕಾಪಿನಡ್ಕ ರಸ್ತೆಯಲ್ಲಿ ಚಿನ್ನದ ಬ್ರಾಸ್ ಲೈಟ್ ಸಿಕ್ಕಿದೆ. ಕೂಡಲೇ ಕಾರಿಂದಿಳಿದು ಬ್ರಾಸ್ ಲೈಟ್ ತೆಗೆದುಕೊಂಡು ಮನೆಗೆ ಬಂದು ವಿಚಾರಿಸಿದಾಗ ಅದು ರಾಕೇಶ್ ಕಾಪಿನಡ್ಕದವರದೆಂದು ಗೊತ್ತಾಯಿತು. ಕೂಡಲೇ ಜಗದೀಶ್ ಅವರು ಅವರ ಮನೆಗೆ ತೆರಳಿ ಬ್ರಾಸ್ ಲೈಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು.
ಮನೆಯವರು ಅತ್ಯಂತ ಸಂತೋಷದಿಂದ ಜಗದೀಶ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಇಂದಿನ ಕಾಲದಲ್ಲಿಯೂ ಇಂತಹ ವ್ಯಕ್ತಿಗಳು ಇರುವಂತದ್ದು ಭಾರಿ ವಿರಳ. ದೈವ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸಿದ್ದಾರೆ.