ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಜೋಡಣೆಗೊಳಿಸಿದ್ದ ಹಲಗೆಗಳನ್ನು ತೆರವುಗೊಳಿಸುವ ಕಾರ್ಯ ಸಣ್ಣ ನೀರಾವರಿ ಇಲಾಖೆಯಿಂದ ನಡೆಯುತ್ತಿದೆ. ಕಲ್ಮಂಜ ಗ್ರಾಮದ ನಿಡಿಗಲ್ ಕಿಂಡಿ ಅಣೆಕಟ್ಟಿಗೆ ಜೋಡಿಸಿದ್ದ ಹಲಗೆಯನ್ನು ಈಗಾಗಲೇ ತೆರವು ಮಾಡಲಾಗುತ್ತಿದ್ದು ತಾಲೂಕಿನಲ್ಲಿ 73 ಕಿಂಡಿ ಅಣೆಕಟ್ಟುಗಳಿದ್ದು ಮಳೆಗಾಲಕ್ಕಿಂತ ಮುಂಚಿತವಾಗಿ ಹಲಗೆ ಇರುವ ಅಣೆಕಟ್ಟುಗಳಿಂದ ತೆರವು ಕಾರ್ಯ ಮಾಡಲಾಗುತ್ತಿದೆ. ಕಳೆದ 3-4ದಿನಗಳಿಂದ ತೆರವು ಕಾರ್ಯ ಆರಂಭವಾಗಿದ್ದು ಮುಂಡಾಜೆ, ವೇಣೂರು ನಡ್ತಿಕಲ್ಲು, ಚಂದ್ಕೂರು, ಲಾಯಿಲ-ಪುತ್ರಬೈಲು, ಸುಲ್ಕೇರಿಮೊಗ್ರು, ಲಾಯಿಲ ರಾಘವೇಂದ್ರ ಮಠ ಸಹಿತ ವಿವಿಧ ಜೋಡಿಸಿದ್ದ ಹಲಗೆಗಳನ್ನು ತೆಗೆಯುತ್ತಿದ್ದು ಜೂನ್ ತಿಂಗಳ ಮೊದಲ ವಾರದಲ್ಲಿ ತೆರವು ಕಾರ್ಯ ಪೂರ್ಣಗೊಳ್ಳಲಿದೆ.
ಈ ಬಾರಿ ಬೇಸಿಗೆ ಮಳೆಯಿಂದಾಗಿ ಕಿಂಡಿ ಅಣೆಕಟ್ಟುಗಳಲ್ಲಿ ಭರಪೂರ ನೀರು ತುಂಬಿ ಜಲಧಾರೆ ಉಂಟಾಗಿತ್ತು. ಫೆಬ್ರವರಿ ಮತ್ತು ಮಾರ್ಚ ತಿಂಗಳಿನಲ್ಲಿ ಬಿಸಿಲ ತಾಪಕ್ಕೆ ಹೊಳೆ, ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು ಆದರೆ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸುರಿದ ಬೇಸಿಗೆ ಮಳೆಗೆ ಸಮೃದ್ಧವಾಗಿ ಜೀವ ಜಲ ತುಂಬಿತ್ತು. ಅಣೆಕಟ್ಟಿನಲ್ಲಿ ನೀರು ಶೇಖರಣೆಯಾಗಿ ಕೃಷಿ ಭೂಮಿಗೆ ಸಹಕಾರಿಯಾಗಿದ್ದು, ಬಾವಿ, ಕೊಳವೆ ಬಾವಿ, ಕೆರೆಗಳಲ್ಲಿ ಅಂರ್ತಜಲ ವೃದ್ಧಿಗೆ ಸಹಕಾರಿಯಾಗಿದೆ. ಬೇಸಿಗೆ ಮಳೆ ನೀರಿನ ತತ್ವಾರವನ್ನು ನಿಗಿಸಿದೆ. ಕೆಲ ತಿಂಗಳ ಹಿಂದೆ ಮಾಧ್ಯಮಗಳ ನಿರಂತರ ವರದಿಗಳ ಬಳಿಕ ತಾಲೂಕಿನ ವಿವಿಧ ಅಣೆಕಟ್ಟುಗಳಲ್ಲಿ ಹಲಗೆ ಜೋಡಣೆ ಕಾರ್ಯ ಚುರುಕು ಪಡೆದಿತ್ತು.
-ವರದಿ ಮನೀಶ್ ವಿ.ಅಂಚನ್ ಕುಕ್ಕಿನಡ್ಡ