ಮುಂಡಾಜೆ: ದಿಡುಪೆ- ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಮುಂಡಾಜೆಯ ಕೆದಿಹಿತ್ಲು ಎಂಬಲ್ಲಿರುವ ಕಿರು ಸೇತುವೆ ಬಳಿ ಮೇ 22 ರಂದು ಸಂಜೆ ರಿಕ್ಷಾ ಮತ್ತು ಪಿಕಪ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ರಿಕ್ಷಾ ಚಾಲಕ ಮುಂಡಾಜೆ ಮೂಲಾರು ನಿವಾಸಿ ಕುಶಾಲಪ್ಪ ದೇವಾಂಗ( 42) ಅವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಪಿಕಪ್ ನಲ್ಲಿದ್ದ ಕೊಕ್ಕಡದ ಡೀಕಯ್ಯ (43) ಎಂಬವರಿಗೆ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇಬ್ಬರಿಗೂ ಶಸ್ತ್ರಚಿಕಿತ್ಸೆ ನಡೆಸಬೇಕಾಗಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ 7 ಕಿಮೀ ವ್ಯಾಪ್ತಿಯ ರಸ್ತೆಯ ಸುಮಾರು 6 ಕಡೆಗಳಲ್ಲಿ ಕಿರು ಸೇತುವೆಗಳಿದ್ದು ಅವು ಅಗಲ ಕಿರಿದಾದ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಕಳೆದ 7 ವರ್ಷಗಳ ಹಿಂದೆ ಈ ರಸೆ ವಿಸ್ತರಣೆಯಾಗಿದ್ದು ಈ ಸಮಯ ಈ ಕಿರುಸೇತುವೆಗಳ ಅಭಿವೃದ್ಧಿ ಕಾಮಗಾರಿ ನಡೆದಿರಲಿಲ್ಲ. ಇದರ ಬಳಿಕ ಜನಪ್ರತಿನಿಧಿ, ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಶಿಥಿಲ ಕಿರು ಸೇತುವೆಗಳಿರುವ ಈ ರಸ್ತೆಯಲ್ಲಿ ಕಳೆದ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಸಂಚಾರ ನಿಷೇಧವನ್ನು ಹೇಳಿದ್ದರು. ಆದರೂ ಈ ಅಪಾಯದ ಮಧ್ಯೆ ಇಲ್ಲಿ ವಾಹನ ಸಂಚಾರ ಯಾವುದೇ ಎಗ್ಗಿಲ್ಲದೆ ನಡೆಯುತ್ತಿತ್ತು.
ಇಲ್ಲಿನ ಕೆಲವು ಕಿರು ಸೇತುವೆಗಳು ಸಂಪೂರ್ಣ ಶಿಥಿಲವಾಸ್ಥೆ ತಲುಪಿದ್ದು ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ವಿಷ್ಣು ಭಟ್ ತಿಳಿಸಿದ್ದಾರೆ.