ಡಾ. ಪ್ರಭಾಚಂದ್ರ- ಮೂಡುಬಿದಿರೆಯ ವೈದ್ಯಲೋಕ ಕಂಡ ಅನರ್ಥ್ಯ ರತ್ನ. ಇದು ಬರಿಯ ಅಂಕಿತವಲ್ಲ ನಾಲ್ಕಕ್ಷರದ ದೇವಸೂತ್ರ. ಈ ಸೂತ್ರ ಪರಿಗ್ರಹಿಸದ ತರಂಗಗಳಿಲ್ಲ, ಸೂಜಿಗಲ್ಲಿನ ಆಕರ್ಷಣೆ. ಮೃದು ಮಧುರ ಮಾತು. ಜಾತಿ-ಮತ-ಬಣ್ಣ ಭಾಷೆ ಯಾವುದೂ ನೋಡದೆ ಮನುಷ್ಯ ಜಾತಿ ಎಂದಷ್ಟೇ ನೋಡಿ ಎಲ್ಲರನ್ನೂ ತನ್ನವರು ಎಂಬ ಭಾವದಿಂದ ಚಿಕಿತ್ಸೆ ನೀಡಿ ‘ಸೇವಾಹಿ ಪರಮೋಧರ್ಮ’ ಎಂಬ ಉಪನಿಷತ್ತಿನ ವಾಕ್ಯಕ್ಕೆ ಧ್ವನಿಯಾದವರು.
ಸಿದ್ಧಕಟ್ಟೆ ಸಂಗಬೆಟ್ಟುವನ್ನು ಕರ್‍ಮ ಸ್ಥಳವಾಗಿಸಿಕೊಂಡು 47 ವರುಷಗಳ ಸುದೀರ್ಘ ಸೇವೆಯಲ್ಲಿ ತೊಡಗಿಸಿಕೊಂಡ ಡಾ. ಪ್ರಭಾಚಂದ್ರರು ವೈದ್ಯವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಕಿರಿಯರಿಗೆ ರೋಲ್ ಮಾಡೆಲ್. ತನ್ನ ಸುದೀರ್ಘ ಸೇವಾವಧಿಯಲ್ಲಿ ಒಮ್ಮೆಯೂ ಬೇಸರಿಸಿದವರಲ್ಲ. ತಾಳ್ಮೆ ಕಳಕೊಂಡವರಲ್ಲ, ಧ್ವನಿ ಏರಿಸಿದವರಲ್ಲ, ಇಳಿ ಹಗಲಾಗಲೀ, ಏರು ಮಧ್ಯಾಹ್ನವಾಗಲೀ, ಮುಂಜಾನೆಯಾಗಲೀ, ತಡರಾತ್ರಿಯಾಗಲಿ ಹಳ್ಳಿಯ ತೋಡು, ಕಟ್ಟೆ, ಬಾವಿ, ಬದು, ಓಣಿ, ತೋಟ ಸಂದುಗಳಲೆಲ್ಲಾ ಕಿರುಟಾರ್ಚ್‌ಗೆ ತನ್ನ ಕಿರುನಗೆಯ ಬೆಳಕನ್ನು ಪೋಣಿಸಿಕೊಂಡು ಹಳ್ಳಿಗರ ಮನೆ ಮನೆಗೆ ಹೋಗಿ ಅವರ ಮನದಲ್ಲಿ ಧೈರ್ಯವನ್ನು ತುಂಬುತ್ತಾ ಕ್ಲಿಷ್ಟಕರವಾದ ಹೆರಿಗೆಯನ್ನು ಮಾಡಿಸಿ ಮನೆ-ಮನಗಳ ನೆಮ್ಮದಿಗೆ ಕಾರಣರಾದವರು.
ಅವರ ರೋಗವನ್ನು ಗುಣಪಡಿಸುವಲ್ಲಿ ವೈದ್ಯನಾಗಿ, ಕುಶಲೋಪರಿ ಮಾತಾಡುತ್ತಾ ಬಂಧುವಾಗಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಗೆಳೆಯನಾಗಿ, ಕಿರಿಯರಿಗೆ ಬುದ್ದಿ ಹೇಳುವ ಗುರುವಿನಂತೆ, ಹಿರಿಯರಿಗೆ ಬಲವಾಗಿ, ಬೆಂಬಲವಾಗಿ, ಹಳ್ಳಿಗರ ಕುಟುಂಬದಲ್ಲಿ ಓರ್ವ ಸದಸ್ಯನೆನ್ನುವಂತೆ ಎಲ್ಲರ ಹೃದಯ ಬಡಿತದಲ್ಲಿ ಒಂದಾದವರು. ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಮೈಯಾಗಿದ್ದವರು. ಡಾ. ಪ್ರಭಾಚಂದ್ರರದ್ದು ಮಗುಮನಸ್ಸು. ಹಳ್ಳಿಗರ ಅಂತರಂಗ ಬಿಂಬಿಸುವ ಭಾವ ತರಂಗಗಳಿಗೆ ಕನ್ನಡಿ ಹಿಡಿದವರು. ಹಳ್ಳಿಗರ ಬಡತನ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಅಶೌಚ ಇವುಗಳ ನಡುವೆ ತಲೆದೋರುವ ಆರೋಗ್ಯ ಸಮಸ್ಯೆ ಇವೆಲ್ಲವನ್ನೂ ಅರ್ಥಮಾಡಿಕೊಂಡು ಅದಕ್ಕೆ ಬೇಕಾದಂತೆ ಚಿಕಿತ್ಸೆ ನೀಡಿ ಪರಿಹಾರವನ್ನೂ ಹೇಳಿ ಒಲವಿನ ಒಡಲಾದವರು. “ಚಿಕಿತ್ಸೆ ಮೊದಲು-ಹಣ ನಂತರ” ಎಂಬ ಸಿದ್ಧಾಂತದೊಂದಿಗೆ ಹಣವಿಲ್ಲದವರಿಗೂ ಚಿಕಿತ್ಸೆ ನೀಡಿ ಕರುಣೆಯ ಕಡಲಾದವರು. ಮೃದು ಮಾತುಗಳಿಂದಲೇ ಸಾಂತ್ವನ ಹೇಳಿ ಮಮತೆಯ ಮಡಿಲಾದವರು. ಹಳ್ಳಿಗರಿಗೂ ಪಟ್ಟಣಗಳಲ್ಲಿ ಸಿಗುವ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಶ್ರೀ ಪದ್ಮ ಕ್ಲಿನಿಕ್ ಕಟ್ಟಿಸಿ ಶ್ರೇಷ್ಠ ಮಟ್ಟದ ಚಿಕಿತ್ಸೆ ಕೊಡುವಲ್ಲಿ ಪ್ರಾಮಾಣಿಕವಾಗಿ ದಣಿವರಿಯದೆ ದುಡಿದವರು. ಕೊರೋನ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಚಿಕಿತ್ಸೆಯನ್ನೂ ನೀಡಿ, ಧೈರ್ಯ ತುಂಬಿದವರು, ಹಳ್ಳಿಗರ ಉಸಿರಿಗೆ ಉಸಿರು ನೀಡಿದವರು. ಕೇವಲ ವೈದ್ಯಕೀಯ ವೃತ್ತಿಗಷ್ಟೇ ತನ್ನನ್ನು ತಾನು ಸೀಮಿತಗೊಳಿಸದೆ ಹಳ್ಳಿಗರ ಸುಖ ಕಷ್ಟಗಳಿಗೆ ಸ್ಪಂದಿಸುತ್ತಾ ಅಪಾರ ಸಾಮಾಜಿಕ ಕಳಕಳಿಯೊಂದಿಗೆ ಜನೋಪಯೋಗಿ ಕಾಠ್ಯಕ್ರಮಗಳಿಗೆ ನೆರವಿನ ಹಸ್ತ ನೀಡಿ ಮೌನವಾಗಿ ನಿಂತ ಡಾ. ಪ್ರಭಾಚಂದ್ರರು ಹಳ್ಳಿಯ ಯಾವ ಮಗುವೂ ಚಿಕಿತ್ಸೆಯಿಲ್ಲದೆ ಕೊರಗಕೂಡದು ಎಂಬ ಹಳ್ಳಿಪರ ಕಳಕಳಿಯೊಂದಿಗೆ ತೊಡಗಿಸಿಕೊಂಡು ಸರ್ವ ಜನರ ಪ್ರೀತಿಗೆ ಕಾರಣರಾದರು. ತಿಳಿಹಾಸ್ಯ, ಮೃದುಮಾತು ಅಪಾರ ದೈವಭಕ್ತಿ, ಮೇಲು-ಕೀಳು ಭಾವ ತೋರದೆ ಮಾನವತಾವಾದದ ಅಚಲ ಸೈದ್ದಾಂತಿಕ ನಿಲುವಿನೊಂದಿಗೆ, ಅದನ್ನೇ ಜೀವನ ನಡೆಯಾಗಿಸಿಕೊಂಡ ಡಾ। ಪ್ರಭಾಚಂದ್ರರಿಗೆ ಪ್ರಭಾಚಂದ್ರರೇ ಸಾಟಿ. ರೋಗಲಕ್ಷಣದ ಬಗ್ಗೆ ಖಚಿತ ಮಾಹಿತಿ ಹೊಂದಿರುವ ಡಾ| ಪ್ರಭಾಚಂದ್ರರದ್ದು ಅಮೋಘ ಚಿಕಿತ್ಸೆ. ಸಾಮಾನ್ಯ ಶೀತಜ್ವರದಿಂದ ಹಿಡಿದು ಹೆರಿಗೆ ನಡೆಸುವ ತನಕವೂ ಅವರದು ಖಚಿತ ನಡೆ. ಬದ್ಧತೆಯ ಸೇವೆ. 9 ತಿಂಗಳ ಮಗುವಿನಿಂದ ಹಿಡಿದು 90 ವರ್ಷದ ವೃದ್ಧರಿಗೂ ಡಾ. ಪ್ರಭಾಚಂದ್ರರ ಔಷಧಿ ಬರಿಯ ಔಷಧಿಯಲ್ಲ. ಅವರ ನಗುವಿನ ಟಾನಿಕ್. ಅನೇಕರ ಜೀವನವನ್ನು ಭಾಗ್ಯವಾಗಿಸಿದ ಡಾಕ್ಟರ್ ನಮ್ಮ ಪಂಜಾಲ್ ಕುಟುಂಬಕ್ಕೆ ನನ್ನ ಅಜ್ಜ-ಅಜ್ಜಿ ಪಾಲಿಗೆ ಸಾಕ್ಷಾತ್ ಭಗವಂತನೇ ಸರಿ. ನಮ್ಮ ಇಡೀ ಕುಟುಂಬ ಇವರ ಬಗ್ಗೆ ಅಪಾರ ಗೌರವವನ್ನು ಹೊಂದಿದೆ. ಸದಾ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದ್ದವರು. ನನ್ನ ಬಾಲ್ಯ ಭಾಗ್ಯವಾಗುವಲ್ಲಿ ನನಗೆ ತಡೆಯಾದದ್ದು ಶೀತ ವಿಪರೀತ ಜ್ವರ ಭಾದೆ ನನ್ನ ನಗುವನ್ನೇ ಕಸಿದುಕೊಂಡಿದ್ದ ಈ ಖಾಯಿಲೆಗೆ ಒಂದಿನಿತು, ಹೇವರಿಕೆ ತೋರದೆ ಔಷಧಿ ನೀಡಿ ಗುಣಪಡಿಸಿ ಎಲ್ಲೋ ಅಡಗಿ ಕೂತಿದ್ದ ನನ್ನ ನಗುವನ್ನು ಮತ್ತೆ ನನಗೆ ಆಭರಣವಾಗಿಸಿದವರು, ನನ್ನಮ್ಮನಿಗೆ ಬಾಧಿಸಿದ್ದ ಖಾಯಿಲೆ ಉಲ್ಬಣವಾಗದ ಹಾಗೆ ತಡೆದು ಔಷಧಿ ನೀಡಿ ಅಮ್ಮನೆಂಬ ಬೆಳಕನ್ನು ಮರಳಿ ಕೊಟ್ಟ ಪುಣ್ಯಾತ್ಮ. ಹುಣ್ಣಿಮೆಯ ಪೂರ್ಣಚಂದ್ರನನ್ನು ಪ್ರಭಾಚಂದ್ರ ಎನ್ನುವ ಕ್ರಮವಿದೆ. ಹುಣ್ಣಿಮೆಯ ಚಂದ್ರ ತನ್ನ ತಂಪಾದ ಕಿರಣಗಳನ್ನು ಭೂಮಿಯ ವೃಕ್ಷರಾಶಿಯ ಮೇಲೆ ಚೆಲ್ಲಿದಾಗ ಅಲ್ಲಿರುವ ಪ್ರತಿ ಗಿಡಗಳಲ್ಲಿಯೂ ಔಷಧೀಯ ಗುಣಗಳು ತುಂಬುತ್ತದೆ. ಪ್ರಭಾಚಂದ್ರರು ಪ್ರತಿದಿನವೂ ಪೂರ್ಣಚಂದ್ರರಂತೆ. ಅವರಲ್ಲಿರುವ ಪರಹಿತ ಎಂಬ ತಂಪಾದ ಕಿರಣಗಳು ರೋಗಿಯನ್ನು ಅವರ ಮಾತಿನ ಮೂಲಕ ಮುಟ್ಟಿದಾಗ ಎಂತಹ ರೋಗವೂ ಮಾಯವಾಗುತ್ತದೆ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ The good physician treats the disease, the great physician treats the patient who has the disease ಒಳ್ಳೆಯ ವೈದ್ಯರು ರೋಗಕ್ಕೆ ಚಿಕಿತ್ಸೆ ಕೊಡುತ್ತಾರೆ. ಶ್ರೇಷ್ಠ ವೈದ್ಯರು ರೋಗವಿರುವ ರೋಗಿಗೆ ಚಿಕಿತ್ಸೆ ನೀಡಿ ರೋಗ ಬಾರದಂತೆ ನೋಡುತ್ತಾರೆ. ಡಾ. ಪ್ರಭಾಚಂದ್ರರದ್ದು ಶ್ರೇಷ್ಠ ವೈದ್ಯರ ಸಾಲಿನಲ್ಲಿ, ಶ್ರೇಷ್ಠರೆನಿಸಿಕೊಂಡವರು. ವೈದಕೀಯ ಕಲೆಯನ್ನು ಎಲ್ಲಿ ಪ್ರೀತಿಸಲಾಗುತ್ತಿದೆಯೋ ಅಲ್ಲಿ ಮಾನವೀಯತೆಯ ಪ್ರೀತಿಯೂ ಇರುತ್ತದೆ. ಈ ಮಾತು ಶೇಕಡಾ 100 ಒಪ್ಪುವುದು. ಡಾ. ಪ್ರಭಾಚಂದ್ರರಿಗೆ ಮಕ್ಕಳಲ್ಲಿ ಮಗುವಾಗಿ, ಯುವಕರಲ್ಲಿ ಯುವಕನಾಗಿ, ವೃದ್ಧರ ಜೊತೆ ಜ್ಞಾನ ವೃದ್ಧರಾಗಿ ಕುಟುಂಬ ಪ್ರೇಮಿಯಾಗಿ ಪ್ರಭಾಚಂದ್ರರದ್ದು ಪ್ರತೀ ಹೆಜ್ಜೆಯೂ ಅಪ್ಪಟ ಚಿನ್ನ, ಅಪರಂಜಿ. ಅನೇಕರ ಹೃದಯವನ್ನು ತಂಪಾಗಿಸಿ ತನ್ನ ವೈದ್ಯಕೀಯ ಸೇವೆಯಿಂದ ಜನಮನ್ನಣೆಗಳಿಸಿದ ಡಾ. ಪ್ರಭಾಚಂದ್ರರನ್ನು ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವೈದ್ಯಕೀಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಮಹತ್ ಪ್ರೇರಣೆಯಾಗುವ ಹಿರಿಯಾಸೆಯಿಂದ ಗೌರವಿಸಿ ಅಭಿವಂದಿಸಲಾಯಿತು.
ಅಲ್ಲದೆ ಜಂಟಿ ಜೈನ್ ಮಿಲನ್‌ಗಳಾದ ಇತ್ತೀಚೆಗೆ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಮದ್ವರಾಜ್ ಜೈನ್ ಹಾಗೂ ಮೂಡುಬಿದಿರೆಯ ಜೈನ್ ಮಿಲನ್ ಅಧ್ಯಕ್ಷರಾದ ದಿನೇಶ್ ಎಂ. ಆನಡ್ಕ ಮತ್ತು ಸದಸ್ಯರುಗಳು ಸೇರಿ ಸನ್ಮಾನಿಸಿ ಕೃತಾರ್ಥರಾದರು. ಈ ಎರಡೂ ಕಡೆ ನಡೆದದ್ದು ಬರಿಯ ಸನ್ಮಾನವಾಗಿರಲಿಲ್ಲ ಗೌರವಾದರ ಪ್ರಣಾಮಗಳ ತುಲಾಭಾರವಾಗಿತ್ತು. ಸೇರಿದ ಅಷ್ಟು ಮನಸ್ಸುಗಳು ಕೈ ಮುಗಿದು ಹೇಳುತ್ತಿದ್ದುದ್ದು ಒಂದೇ ಮಾತು.
✍️ಶ್ರೀಮತಿ ರಶ್ಮಿತಾ ಜೈನ್ ಕಲ್ಲಬೆಟ್ಟು, ಮೂಡುಬಿದಿರೆ











