ಬೆಳ್ತಂಗಡಿ: ಕಳೆದ ಮೂರು ವರ್ಷಗಳ ಹಿಂದೆ ಕರ್ನಾಟಕದ 16 ಹಾಲು ಒಕ್ಕೂಟಗಳ ಪೈಕಿ ಕಲ್ಬುರ್ಗಿ, ಬೀದರ್, ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಅತೀ ಕಡಿಮೆ ಹಾಲು ಸಂಗ್ರಹಣೆಯಾಗುತ್ತಿತ್ತು. ಬೀದರ್ ಜಿಲ್ಲೆಯಲ್ಲಿರುವ ಒಟ್ಟು 518 ಹಾಲು ಉತ್ಪಾದಕರ ಸಂಘಗಳ ಪೈಕಿ ಸುಮಾರು 400ರಷ್ಟು ಸಂಘಗಳು ನಿಷ್ಕ್ರಿಯಗೊಂಡಿದ್ದವು. ಬೀದರ್ ಜಿಲ್ಲೆಯ ಈ ಸಮಸ್ಯೆಯನ್ನು ಗುರುತಿಸಿದ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಬೀದರ್, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಕಲಬುರಗಿ ಹಾಲು ಒಕ್ಕೂಟಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ಅನುದಾನವನ್ನು ಒದಗಿಸಿಕೊಡುವುದರೊಂದಿಗೆ ಬೀದರ್ ಜಿಲ್ಲೆಯ ಕ್ಷೀರಕ್ರಾಂತಿಗೆ 2022ರಲ್ಲಿ ಚಾಲನೆಯನ್ನು ನೀಡಿದರು.
ಪ್ರಥಮ ಹಂತವಾಗಿ ಸ್ಥಗಿತಗೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಪುನಃಶ್ವೇತನ ಹಾಗೂ ಹೊಸ ಸಂಘಗಳ ರಚನೆ ಮತ್ತು ಹಾಲು ಉತ್ಪಾದಕರ ಸಂಘಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸಂಸದರ ನಿಧಿಯಿಂದ ರೂ. 2.45 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದರು. ಇದರಿಂದಾಗಿ ಜಿಲ್ಲೆಯಾದ್ಯಂತ ಹಾಲು ಉತ್ಪಾದಕರಲ್ಲಿ ಹೊಸ ಚೈತನ್ಯ ಮೂಡಿತು. ಬೀದರ್ ಜಿಲ್ಲೆಯಲ್ಲಿ ಪ್ರತಿ ದಿನ ಸಂಗ್ರಹವಾಗುತ್ತಿದ್ದ 18 ಸಾವಿರ ಲೀಟರ್ ಹಾಲಿನ ಪ್ರಮಾಣ ಇದೀಗ ಖಾಸಗಿ ಸಂಗ್ರಹವು ಸೇರಿ ರೂ. 1.18 ಲಕ್ಷ ಲೀಟರ್‌ನ ಗಡಿ ದಾಟಿದೆ.
ಇದೀಗ ಹಾಲು ಒಕ್ಕೂಟಗಳ ಮನವಿ ಮೇರೆಗೆ ಎರಡನೇ ಕಂತಿನ ರೂ. 2.50 ಕೋಟಿ ಮೊತ್ತವನ್ನು ಹೆಗ್ಗಡೆಯವರು ಬಿಡುಗಡೆ ಮಾಡಿದ್ದಾರೆ. ಈ ಮೊತ್ತದಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಹೊಸ ಕಟ್ಟಡ ರಚನೆ, ಹಾಲು ಪರೀಕ್ಷೆಗೆ ಆಧುನಿಕ ಯಂತ್ರೋಪಕರಣಗಳು, ಹಾಲು ಸಂಗ್ರಹಿಸಲು ಸ್ಟೇಲ್‌ನೇಸ್ ಸ್ಟಿಲ್ ಕ್ಯಾನ್, ಡಿಜಿಟಲ್ ತೂಕ ಯಂತ್ರ ಹಾಗೂ ಅಗತ್ಯ ಪಿಠೋಪಕರಣಗಳನ್ನು ಖರೀದಿಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಬಲಪಡಿಸಲಾಗಿದೆ. ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಸುಗಳ ಖರೀದಿಗೆ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಮೂಲಕ ಪ್ರಗತಿನಿಧಿಯನ್ನು ವ್ಯವಸ್ಥೆಗೊಳಿಸಿದೆ. ಇಲ್ಲಿ ಸಮತೋಲನ ಪಶು ಆಹಾರದ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ನಮೂನೆಯ ಹಸಿರು ಹುಲ್ಲು ಮೇವಿನ ಬೀಜ ಮತ್ತು ಬೇರುಗಳ ಪೂರೈಕೆಯನ್ನು ಮಾಡಲಾಗಿದೆ. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಸಮಗ್ರ ಪಶು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಹಾಲಿನ ಗುಣಮಟ್ಟ ಹೆಚ್ಚಿಸಲು ವಲಯವಾರು ಖನಿಜ ಮಿಶ್ರಣದ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ರೈತ ಮಹಿಳೆಯರಿಗೆ ಆಧುನಿಕ ಪದ್ಧತಿಯ ವೈಜ್ಞಾನಿಕ ಹೈನುಗಾರಿಕೆ ತರಬೇತಿ, ಸಂಘದ ಕಾರ್ಯಕಾರಿ ಮಂಡಳಿಗೆ ಮತ್ತು ಕಾರ್ಯದರ್ಶಿ ಹಾಗೂ ಹಾಲು ಪರೀಕ್ಷರಿಗೆ ಅಗತ್ಯ ತರಬೇತಿಗಳನ್ನು ನೀಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡಲು ಸಂಘದ ಸಿಬ್ಬಂದಿಗಳಿಗೆ ಕೆ.ಎಂ.ಎಫ್.ನ ತರಬೇತಿ ಕೇಂದ್ರದಲ್ಲಿ ತಜ್ಞರಿಂದ ತರಬೇತಿಯನ್ನು ಕೊಡಿಸಲಾಗಿದೆ. ಅಧ್ಯಯನ ಪ್ರವಾಸದ ಮೂಲಕ ವೈಜ್ಞಾನಿಕ ಹೈನುಗಾರಿಕೆ ಮಾಡುವುದನ್ನು ತಿಳಿಸಿಕೊಡಲಾಗಿದೆ. ಅಲ್ಲದೆ ಸಂಘಗಳಲ್ಲಿ ಮಾಸಿ ಮತ್ತು ವಾರ್ಷಿಕ ಸಭೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರಕಾರ ನೀಡುವಂತದ ಪ್ರೋತ್ಸಾಹಧನದೊಂದಿಗೆ ಹೈನುಗಾರರಿಗೆ ತಾವು ನಿತ್ಯ ಹಾಲು ಮಾರಾಟ ಮಾಡಿದ್ದಕ್ಕೆ ಸಂಬಂಧಪತಿ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಇದೀಗ ಜಿಲ್ಲೆಯಲ್ಲಿ ಒಟ್ಟು 17 ಹೊಸ ಹಾಲು ಉತ್ಪಾದಕರ ಸಂಘಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. 131 ಸಂಘಗಳಿಗೆ ಹಾಲು ಪರೀಕ್ಷೆ ಯಂತ್ರಗಳನ್ನು, 20 ಸಂಘಗಳಿಗೆ ಫ್ಯಾಟೋಮೇಟಿಕ್ ಯಂತ್ರ, 29 ಸಂಘಗಳಿಗೆ ಹಾಲು ಸಂಗ್ರಹಣಾ ಉಪಕರಣ, 29 ಸಂಘಗಳಿಗೆ ತೂಕದ ಯಂತ್ರಗಳನ್ನು ನೀಡಲಾಗಿದೆ. 1,672 ಸ್ಟೇಲ್‌ನೇಸ್ ಸ್ಟೀಲ್ ಹಾಲಿನ ಕ್ಯಾನ್‌ಗಳನ್ನು ನೀಡುವುದರ ಮೂಲಕ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಕ್ಯಾನ್‌ಗಳನ್ನು ಬಳಸದೆ ಶುದ್ಧ ಹಾಲು ಉತ್ಪಾದನೆಗೆ ಪ್ರಯತ್ನಿಸಲಾಗಿದೆ. ಇದರಿಂದಾಗಿ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗಿದೆ. ಹಾಲಿನ ಸಂಘಗಳಲ್ಲಿ ಮಾಸಿಕ ಸಭೆ ಮತ್ತು ತರಬೇತಿಗಳನ್ನು ನೀಡಲು ಅನುಕೂಲವಾಗುವಂತೆ 38 ಸಂಘಗಳಿಗೆ ಪಿಠೋಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕೃತಕ ಗರ್ಭಧಾರಣೆ ಮಾಡಲು 41 ದ್ರವಸಾರಜನಕದ ಜಾಡಿಯನ್ನು ಒದಗಿಸಲಾಗಿದೆ.
ಈಗಾಗಲೇ ಹೆಗ್ಗಡೆಯವರ ಸಂಸದರ ಅನುದಾನದಡಿಯಲ್ಲಿ ಬೀದರ್ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಮೊದಲ ಮತ್ತು ಎರಡನೇ ಹಂತದ ಯೋಜನೆಯಡಿಯಲ್ಲಿ ಒಟ್ಟು ರೂ. 5 ಕೋಟಿ ಮೊತ್ತವನ್ನು ವಿನಿಯೋಗಿಸಿದ್ದು ಇದರಿಂದಾಗಿ ಬೀದರ್ ಹೈನುಗಾರಿಕಾ ನಗರವಾಗಿ ಬೆಳೆಯುತ್ತಿದೆ.
ಕಳೆದ ನಾಲ್ಕುವರೆ ದಶಕಗಳಿಂದ ‘ಹೈನುಗಾರಿಕೆ’ಗೆ ಪ್ರೋತ್ಸಾಹ ನೀಡುವುದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಒಂದು ಪ್ರಮುಖ ಭಾಗವೇ ಆಗಿದೆ. ಇದುವರೆಗೆ ರಾಜ್ಯದ 5,090 ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆ ಕಾಮಗಾರಿಗಳಿಗೆ ಒಟ್ಟು ರೂ. 39 ಕೋಟಿ ಮೊತ್ತದ ಅನುದಾನವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇದರೊಂದಿಗೆ ಹೈನುಗಾರಿಕಾ ಇಲಾಖೆಗಳಿಗೂ ಹಾಲು ಪರೀಕ್ಷಾ ಯಂತ್ರ, ತೂಕದ ಯಂತ್ರ, ಹಾಲಿನ ಕ್ಯಾನ್ ಮುಂತಾದ ಅಗತ್ಯ ಉಪಕರಣಗಳನ್ನು ನೀಡುತ್ತಾ ಬಂದಿದ್ದಾರೆ.











