ಉಜಿರೆಯ ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಎಸ್.ಡಿ.ಎಂ. ಬಿ.ಎಡ್. ಕಾಲೇಜು ಹಾಗೂ ಬೆಳ್ತಂಗಡಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಹೃದಯ-ಶ್ವಾಸ ಪುನಶ್ಚೇತನ (ಸಿಪಿಆರ್) ಕುರಿತ ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮ ಡಿ.17 ರಂದು ನಡೆಯಿತು.

ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಹಿರಿಯ ವೈದ್ಯ ವಿದ್ಯಾರ್ಥಿ ಡಾ. ಸಾತ್ವಿಕ್ ಜಲಿಹಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಥಮ ಚಿಕಿತ್ಸೆಯ ಪ್ರಯೋಜನ, ಅಗತ್ಯ ಹಾಗೂ ನಾಯಿ, ಬೆಕ್ಕು, ಹಾವು ಮತ್ತಿತರ ಪ್ರಾಣಿಗಳು ಕಚ್ಚಿದಾಗ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದರು.
ಇನ್ನೋರ್ವ ಹಿರಿಯ ವೈದ್ಯ ವಿದ್ಯಾರ್ಥಿ ಡಾ. ವಿನೋಲಾ ಪಿಂಟೊ ಪ್ರಾಯೋಗಿಕವಾಗಿ ಪ್ರಥಮ ಚಿಕಿತ್ಸೆಯ ವಿಧಾನವನ್ನು ತೋರಿಸಿಕೊಟ್ಟರು. ಕಾರ್ಡಿಯೋ ಪಲ್ಮನರಿ ರಿಸಸ್ಸಿಟೇಶನ್ (ಸಿಪಿಆರ್) ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಯಿತು.

ಬೆಳ್ತಂಗಡಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ ಸಿಸ್ಟರ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಕಲ್ಲೇಗ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಧರ್ಮಪಾಲ ಅವರು ಏಡ್ಸ್ ಹಾಗೂ ಎಚ್.ಐ.ವಿ. ರೋಗದ ಲಕ್ಷಣ, ಹರಡುವ ವಿಧಾನ, ಇತ್ಯಾದಿ ವಿಷಯ ಕುರಿತ ಮಾಹಿತಿ ನೀಡಿದರು.
ಎಸ್.ಡಿ.ಎಂ. ಮಹಿಳಾ ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಏಡ್ಸ್ ಜಾಗೃತಿ ಕುರಿತ ಪ್ರಹಸನ ಪ್ರಸ್ತುತಪಡಿಸಿದರು.
ಸಂಸ್ಥೆಯ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್, ವಿದ್ಯಾರ್ಥಿಗಳು, ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿಗಳಾದ ಸಂದ್ಯಾ ಸ್ವಾಗತಿಸಿ, ನಿಧಿ ನಿರೂಪಿಸಿದರು.











