ಬೆಳ್ತಂಗಡಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತೀಕರಿಸುವ ಉದ್ಧೇಶದಿಂದ ಸಯ್ಯಿದ್ ಸಾದಾತ್ ತಂಙಳ್ ನೇತೃತ್ವದ ಬೆಳ್ತಂಗಡಿ ತಾಲೂಕು ಸುನ್ನೀ ಕೋರ್ಡಿನೇಷನ್ ಕಮಿಟಿ ವತಿಯಿಂದ ಸಬರ ಬೈಲ್ ನಲ್ಲಿ ಮೊಹಲ್ಲಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕೆಲವೊಮ್ಮೆ ಓದುವಿಕೆಯ ಸರಿಯಾದ ಕ್ರಮ ಅಳವಡಿಸಿಕೊಳ್ಳದೇ ಇರುವುದು, ಸಮಯದ ಹೊಂದಾಣಿಕೆಯಲ್ಲಿ ವಿಫಲತೆ, ಪರೀಕ್ಷಾ ಸಮಯದಲ್ಲಿ ಇತರೇ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಅಶಕ್ತಿ ತೋರುವುದು, ಕೆಟ್ಟ ಸ್ನೇಹಿತರ ಸಹವಾಸ, ಅತಿಯಾದ ನಿರ್ಲಕ್ಷ್ಯ, ಮೊಬೈಲ್ ಟಿವಿಯಂತಹಾ ಹವ್ಯಾಸ ಇತ್ಯಾಧಿಗಳ ಕಾರಣದಿಂದ ಕೆಲವೊಮ್ಮೆ ಒಳ್ಳೆಯ ಕಲಿಯುವ ವಿದ್ಯಾರ್ಥಿಗಳು ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಕಾಣಬಹುದು. ಇಂಥಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗಮನಸೆಳೆದರು.
ಸುನ್ನೀ ಕೋಡಿನೇಷನ್ ಸಮಿತಿ ಸದಸ್ಯರಾದ ವಾದಿ ಇರ್ಫಾನ್ ತಂಙಳ್, ಕಾರ್ಯಾಧ್ಯಕ್ಷ ಜಿ.ಕೆ ಉಮರ್ ಗುರುವಾಯನಕರೆ ಇವರು ನೇತೃತ್ವ ವಹಿಸಿದ್ದರು.
ಕಾರ್ಯಾಗಾರದ ಉದ್ಘಾಟನೆ ಎಸ್ ಎಂ ಕೋಯ ತಂಙಳ್ ಉಜಿರೆ ನೆರವೇರಿಸಿದರು.
ಮದ್ದಡ್ಕ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಕಿಂಬಿ ಮದ್ದಡ್ಕ, ಮುಸ್ಲಿಂ ಜಮಾಅತ್ ನಾಯಕ ಅಬ್ಬೋನು ಮದ್ದಡ್ಕ ಮೊದಲಾದವರು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡಿದರು.
ಕಾರ್ಯದರ್ಶಿ ಸಲೀಂ ಕನ್ಯಾಡಿ ನಾಡ್ಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಉಮ್ಮರ್ ಕುಂಞ ನಾಡ್ಜೆ ಧನ್ಯವಾದ ಸಲ್ಲಿಸಿದರು.











