ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ಬರುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಸಡನ್‌ಆಗಿ ಚಿರತೆ ಎದುರಾಗಿದ್ದು, ಭಯಗೊಂಡ ಬಾಲಕ ತಕ್ಷಣ ಸೈಕಲ್ ಹಿಂದಕ್ಕೆ ತಿರುಗಿಸಿ ವೇಗವಾಗಿ ಮನೆಗೆ ಹೋಗಿ ಅಪಾಯದಿಂದ ಪಾರಾದ ಘಟನೆ ಜ.16 ರಂದು ಬೆಳಿಗ್ಗೆ ನಡೆದಿದೆ.
ಮುಂಡಾಜೆ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ, ಕಲ್ಮಂಜ ಗ್ರಾಮದ ಜ್ಞಾನೇಶ ತನ್ನ ಸಮಯ ಪ್ರಜ್ಞೆಯಿಂದ ಜೀವಪಾಯದಿಂದ ಪಾರಾದ ವಿದ್ಯಾರ್ಥಿಯಾಗಿದ್ದಾನೆ. ಮುಂಡಾಜೆ ಗ್ರಾಮದ ಶೀಟು ಕಾರ್ಯರ್ತೋಡಿ ರಸ್ತೆಯಲ್ಲಿ ಮೂರು ಮಾರ್ಗ ಎಂಬಲ್ಲಿ ಇಂದು ಬೆಳಿಗ್ಗೆ 7.30ರ ಸಮಯ ಶಾಲಾ ಬಾಲಕ ಜ್ಞಾನೇಶ ಶಾಲೆಗೆ ತನ್ನ ಸೈಕಲ್‌ನಲ್ಲಿ ಬರುತ್ತಿದ್ದ ವೇಳೆ ಕಾಡಿನಿಂದ ರಸ್ತೆಗೆ ಇಳಿದ ಚಿರತೆ ಎದುರಾಗಿದೆ. ಚಿರತೆ ಒಮ್ಮೆಲೇ ಎದುರಿಗೆ ಬಂದದನ್ನು ನೋಡಿ ಹೆದರಿ, ಭೀತಿಗೊಂಡ ಬಾಲಕ ತಮ್ಮ ಸಮಯ ಪ್ರಜ್ಞೆಯಿಂದ ಸೈಕಲ್‌ನ್ನು ತಕ್ಷಣ ಹಿಂದಕ್ಕೆ ತಿರುಗಿಸಿ, ವೇಗವಾಗಿ ಮನೆಗೆ ಬಂದು ಅಪಾಯದಿಂದ ಪಾರಾಗಿದ್ದಾನೆ.
ಕಡಿರುದ್ಯಾವರದಲ್ಲಿ ಪ್ರತ್ಯಕ್ಷಗೊಂಡ ನಾಲ್ಕು ಚಿರತೆ:
ಇಂದು ಬೆಳಿಗ್ಗೆ ಕಡಿರುದ್ಯಾವರ ಗ್ರಾಮದಲ್ಲಿ ನಾಲ್ಕು ಚಿರತೆಗಳು ಪ್ರತ್ಯಕ್ಷಗೊಂಡಿದೆ. ಕಡಿರುದ್ಯಾವರ ಗ್ರಾಮದ ಕಾರ್ನಪ ಎಂಬಲ್ಲಿ ನಾಲ್ಕು ಚಿರತೆಗಳು ಸ್ಥಳೀಯರಿಗೆ ಕಂಡು ಬಂದಿದೆ. ಸ್ಥಳೀಯ ಕಾಡಿನಿಂದ ನಾಡಿಗೆ ಇಳಿದು ಬಂದಿದ್ದು, ನಾಗರಿಕರಲ್ಲಿ ಆಂತಕ ಸೃಷ್ಟಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಇವರ ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಕಂಡು ಬಂದಿತ್ತು. ರಬ್ಬರ್ ತೋಟಕ್ಕೆ ಬೆಳಗ್ಗಿನ ಜಾವ ಟ್ಯಾಪಿಂಗ್‌ಗೆ ಕಾರ್ಮಿಕರು ಹೋದಾಗ ಚಿರತೆಗಳು ಕಂಡು ಬಂದಿತ್ತು. ಒಂದು ದೊಡ್ಡ ಚಿರತೆಯ ಜೊತೆ ಮೂರು ಮರಿ ಚಿರತೆಗಳು ಇದ್ದವು. ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು ಪರಿಸರದ ಕಾಡಿನಲ್ಲಿ ಇವು ಓಡಾಟ ನಡೆಸುತ್ತಿದ್ದು, ಜನರು ಜಾಗೃತೆ ವಹಿಸಬೇಕಾಗಿದೆ. ಅರಣ್ಯ ಇಲಾಖೆ ಇದವರ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.











