28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಪ್ರಶಾಂತ್ ಶೆಟ್ಟಿ ರವರಿಗೆ ‘ಆಯುಷ್ ಭೂಷಣ’ ಪುರಸ್ಕಾರ

ಧರ್ಮಸ್ಥಳ: ಯೋಗ ಪ್ರಕೃತಿ ಚಿಕಿತ್ಸೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ, ಮಂಗಳೂರಿನಲ್ಲಿ ನಡೆದ ಆಯುಷ್ ಹಬ್ಬದ ಸಂಭ್ರಮದ ಅಂಗವಾಗಿ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ‘ಆಯುಷ್ ಭೂಷಣ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಇವರು 1994ರಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್‌ವೈಸಿ) ಪದವಿಯನ್ನು, 2006ರಲ್ಲಿ ಎಂ.ಎಸ್‌.ಸಿ ಪದವಿಯನ್ನು ಹಾಗೂ 2015ರಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದು ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿಯೂ ಆಗಿದ್ದ ಡಾ. ಪ್ರಶಾಂತ್ ಶೆಟ್ಟಿ ಅವರು ತಮ್ಮ ಸೇವಾ ಮನೋಭಾವದಿಂದ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಇದುವರೆಗಿನ ತಮ್ಮ 32 ವರ್ಷಗಳ ಸೇವಾ ಅವಧಿಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೂಲಕ ಆರೋಗ್ಯ ಸೇವೆ ಒದಗಿಸಿ, ಅವರನ್ನು ರೋಗಮುಕ್ತ ಜೀವನದತ್ತ ಮುನ್ನಡೆಸಿರುವುದು ಅವರ ಸೇವೆಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಜೊತೆಗೆ ದೇಶ–ವಿದೇಶಗಳಲ್ಲಿ ನೂರಾರು ಸಂಶೋಧನಾ ಲೇಖನಗಳು ಹಾಗೂ ಪ್ರಬಂಧಗಳನ್ನು ಮಂಡಿಸಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ಡಾ. ಪ್ರಶಾಂತ್ ಶೆಟ್ಟಿ ಅವರು ಭಾರತದ ಮೊದಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿದ್ದು, 1994ರಲ್ಲಿ ಪದವಿ ಪಡೆದಿದ್ದಾರೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ತಾವು ವಿದ್ಯಾಭ್ಯಾಸ ಮಾಡಿದ ಅದೇ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದರು.

ಅಲೋಪತಿ ಮಾದರಿಯ ಸಮಾನ ಸೌಲಭ್ಯಗಳು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿಯೂ ಇರಬೇಕು ಎಂಬ ದೃಷ್ಟಿಕೋನದೊಂದಿಗೆ ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದರು. ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಮತ್ತು ಡಿ ಹರ್ಷೇಂದ್ರ ಕುಮಾರ್ ಅವರ ಗರಡಿಯಲ್ಲಿ ಬೆಳೆದು, ಅವರ ಆದೇಶಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಇಂದು ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲದೆ, ಇಡೀ ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಡಬ್ಲ್ಯು.ಎಚ್‌.ಓ (WHO) ಮತ್ತು ಕಾಮನ್‌ವೆಲ್ತ್ ಸಂಸ್ಥೆಗಳ ಸದಸ್ಯರಾಗಿ ಗುರುತಿಸಿಕೊಂಡಿರುವುದು ಇಡೀ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಲಯಕ್ಕೆ ಸಿಕ್ಕ ಮಾನ್ಯತೆಯಾಗಿದೆ.

ಮೂಲತಃ ಹೆಬ್ರಿ ತಾಲೂಕಿನವರಾದ ಡಾ. ಪ್ರಶಾಂತ್ ಶೆಟ್ಟಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಬಿ.ಸಿ. ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ ಆಯುಷ್ ಸಚಿವಾಲಯದಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್, ಕರ್ನಾಟಕ ಸರ್ಕಾರದ ಗೌರವಾನ್ವಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಸಹ ಇವರಿಗೆ ಲಭಿಸಿದೆ. ದೇಶ ಮತ್ತು ರಾಜ್ಯದ ಅನೇಕ ಆರೋಗ್ಯ ಸಂಬಂಧಿತ ಸಮಿತಿಗಳಲ್ಲಿಯೂ ಅವರು ಸದಸ್ಯರಾಗಿದ್ದಾರೆ.

ಈ ಗೌರವವು ಅವರ ನಿರಂತರ ಶ್ರಮ, ಸೇವೆ ಮತ್ತು ನಿಷ್ಠೆಗೆ ಸಿಕ್ಕ ಸಾರ್ಥಕ ಮಾನ್ಯತೆಯಾಗಿದೆ. ತಮ್ಮ ಎಲ್ಲಾ ಸಾಧನೆಗಳಿಗೆ ಡಾ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನ ಹಾಗೂ ಎಸ್ ಡಿ ಎಂ ಆಡಳಿತ ಮಂಡಳಿಯ ಮಾರ್ಗದರ್ಶನವೇ ಕಾರಣ ಎಂದು ಡಾ. ಪ್ರಶಾಂತ್ ಶೆಟ್ಟಿ ಅವರು ಸಂತೋಷದಿಂದ ನುಡಿದರು.

Related posts

ತಾಲೂಕಿನ ನಾಲ್ಕು ಮಂದಿ ಯಕ್ಷಗಾನ ಸಾಧಕರಿಗೆ ಪ್ರಶಸ್ತಿ

Suddi Udaya

ಅಂತರ್ ಕಾಲೇಜು ಗಣಿತ ಸ್ಪರ್ಧೆ: ಎಸ್. ಡಿ. ಎಂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya

ಗುರುವಾಯನಕೆರೆ ಪ್ಯಾಕ್ಸ್ ಮಹಾಸಭೆ: ರೂ.158 ಕೋಟಿ ವ್ಯವಹಾರ, ರೂ.68,41,887 ನಿವ್ವಳ ಲಾಭ, ಸದಸ್ಯರಿಗೆ 11% ಡಿವಿಡೆಂಟ್-ಮುಗುಳಿ ನಾರಾಯಣ ರಾವ್

Suddi Udaya

ಮಾ 11: ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ದಿನ ಉಜಿರೆಯಲ್ಲಿ ನಡೆಯಲಿದೆ ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ”

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಧನಸಹಾಯ ವಿತರಣೆ

Suddi Udaya
error: Content is protected !!