27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ.15 (ನಾಳೆ) ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಲ್ಲಿ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ “ಅಕ್ಷಯ ಪಾಕಶಾಲೆ” ಲೋಕಾರ್ಪಣೆ

ಬೆಳ್ತಂಗಡಿ: ಕಳೆದ 47 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ ಕಲೆ, ಸಾಹಿತ್ಯ, ಆರೋಗ್ಯ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಈ ಜಿಲ್ಲೆಯ ಅತ್ಯಂತ ಶ್ರೇಷ್ಠ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ “ಅಕ್ಷಯ ಪಾಕಶಾಲೆ” ಇದರ ಲೋಕಾರ್ಪಣೆಯು ಫೆ.15 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದ್ದಾರೆ.

1979 ರಲ್ಲಿ ಊರವರ ಸಹಕಾರದಿಂದ ಸ್ವಂತ ಜಾಗ ಖರೀದಿಸಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಪ್ರಾರಂಭಗೊಂಡು 1982 ರಲ್ಲಿ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.1983 ರಲ್ಲಿ ಸಂಘದ ಕಟ್ಟಡ ನಿರ್ಮಿಸಿ ಉದ್ಘಾಟನೆಗೊಂಡು ನಾಲ್ಕು ದಶಕಗಳ ಕಾಲ ಅದೇ ಕಟ್ಟಡದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ. 2021ರಲ್ಲಿ ನೂತನ ಸುಂದರ ಸಭಾಭವನದ ಕನಸು ಕಂಡು ರೂ 80 ಲಕ್ಷ ವೆಚ್ಚದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಸಭಾಭವನವನ್ನು ಲೋಕಾರ್ಪಣೆಗೊಳಿಸಲಾಗಿದೆ.

ಅಕ್ಷಯ ಪಾಕಶಾಲೆ: ಸಂಘದಲ್ಲಿ ನಡೆಯುವ ಸಮಾರಂಭಗಳಿಗೆ ಸುಸಜ್ಜಿತವಾದ ಅಡುಗೆ ಕೋಣೆಯ ಅವಶ್ಯಕತೆಯನ್ನು ಮನಗಂಡು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಕೂಡಲೇ ಶಾಸಕರು ನಮ್ಮ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿ ಅಡುಗೆ ಕೋಣೆಯ ಪ್ರಗತಿಯ ಕೆಲಸಕ್ಕೆ ರೂ 26ಲಕ್ಷ ಮಂಜೂರುಗೊಳಿಸಿ ನೂತನ ಅಕ್ಷಯ ಪಾಕಶಾಲೆ ನಿರ್ಮಾಣಗೊಂಡಿದೆ.ಈಗಾಗಲೇ ಟೈಲ್ಸ್ ಅಳವಡಿಕೆ ,ಮೆಸ್,ಗೋಡೆ,ಪೈಂಟಿಂಗ್,ದ್ವಾರ,ಶೀಟ್ ಮುಂತಾದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಲೋಕಾರ್ಪಣೆಗೆ ಸಿದ್ದಗೊಂಡಿದೆ ಎಂದರು.

ಕಾರ್ಯಕ್ರಮಗಳು: ಫೆ 15 ರಂದು ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ,ಭಜನಾ ಕಾರ್ಯಕ್ರಮ ನಡೆದು ಶಾಸಕ ಹರೀಶ್ ಪೂಂಜರವರು ನೂತನ ಅಡುಗೆ ಕೊಠಡಿ “ಅಕ್ಷಯ ಪಾಕಶಾಲೆಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.

ವಿವಿಧ ಕ್ಷೇತ್ರದ ಅತಿಥಿ-ಅಭ್ಯಾಗತರು ಭಾಗಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ, ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಗುಜರಾತ್ ದ್ವಾರಕಾ ರೆಸ್ಟೋರೆಂಟ್ ಮಾಲಕ ಶೇಖರ್ ದೇವಾಡಿಗ ಪಾಲಬೆ, ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಸುಭಾಶ್ ಆರ್. ಸುವರ್ಣ, ಬೆಂಗಳೂರು ಶರಣ್ಯ ಪ್ರಿಸಿಶನ್ ಇಂಡಸ್ಟ್ರೀಸ್ ಮಾಲಕ ಮಹೇಶ್ ಸುವರ್ಣ ಹಾಕೋಟೆ ಭಾಗವಹಿಸಲಿರುವರು. ಸಮಾರಂಭದಲ್ಕಿ ದ.ಕ. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ, ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಫೆ.22: ಬೊಳ್ಳಜ್ಜ ದೈವದ ವರ್ಷಾವಧಿ ಸಾರ್ವಜನಿಕ ಅಗೇಲು ಸೇವೆ:
ಕಾರ್ಣಿಕದ ದೈವ ಬೊಳ್ಳಜ್ಜ ಬಳಂಜ ನಾಲ್ಕೂರಿನ ಪ್ರತಿಯೊಂದು ಮನೆಯಲ್ಲಿ ಆರಾಧನೆ ಮಾಡುತ್ತಿರುವ ಕಾರಣಿಕದ ದೈವ ಬೊಳ್ಳಜ್ಜನ ಮೂಲಸ್ಥಾನ ಸಂಘದ ವಠಾರದಲ್ಲಿದ್ದು ಪ್ರತಿ ವರ್ಷ ಸಾರ್ಜಜನಿಕ ಅಗೇಲು ಸೇವೆ ನೀಡಲಾಗುತ್ತಿದೆ. ನಂಬಿದವರನ್ನು ಎಂದಿಗೂ ಕೈ ಬಿಡದ ಬೊಳ್ಳಜ್ಞ ದೈವದ ಮೂಲಸ್ಥಾನದಲ್ಲಿ ಫೆ 22ರಂದು ಸಾರ್ವಜನಿಕ ಅಗೇಲು ಸೇವೆ ನಡೆಯಲಿದೆ.

ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ: ಒಂದೇ ಜಾತಿ,ಒಂದೇ ಧರ್ಮ,ಒಂದೇ ದೇವರ ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ‌ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ರೂಪದಲ್ಲಿ ಆವತರಿಸಿದ ದೇವರಾಗಿದ್ದಾರೆ.ಅವರ ತತ್ವ ಸಂದೇಶ ಸಾರ್ವಕಾಲಿಕವಾದುದು.ಬಳಂಜ ನನಗೆ ಧಾರ್ಮಿಕ ಹಾಗೂ ರಾಜಕೀಯವಾಗಿ ಶಕ್ತಿ ನೀಡಿದ ಊರು.ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಉತ್ತಮ ಸೇವಾ ಕಾರ್ಯಗಳು ನಡೆಯುತ್ತಿದೆ.ಇಲ್ಲಿನ ಬೇಡಿಕೆಯಂತೆ ಅಡುಗೆ ಕೋಣೆಯ ನಿರ್ಮಾಣಕ್ಕೆ ರೂ 26 ಲಕ್ಷ ಅನುದಾನ ನೀಡಿದ್ದೇನೆ. ಸಂಘದ ಸಮುದಾಯ ಭವನದ ಅಭಿವೃದ್ಧಿಗೂ ಗರಿಷ್ಠ ಪ್ರಮಾಣದ ಅನುದಾನ ನೀಡಲಾಗಿದೆ. ಮುಂದಿನ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. -ಶಾಸಕ ಹರೀಶ್ ಪೂಂಜ

ಶಾಸಕ ಹರೀಶ್ ಪೂಂಜರವರ ಪ್ರಯತ್ನ-ರೂ 80 ಲಕ್ಷ ಅನುದಾನ: ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜರವರು ವಿಶೇಷವಾಗಿ ಸ್ಪಂದಿಸಿ ರೂ 80 ಲಕ್ಷಕ್ಕೂ ಅಧಿಕ ಅನುದಾನ ನೀಡಿ ಸಹಕರಿಸಿದ್ದಾರೆ.ಕೋಟ ಶ್ರೀನಿವಾಸ್ ಪೂಜಾರಿ ರೂ 25 ಲಕ್ಷ ಕೆ.ಪ್ರತಾಪಸಿಂಹ ನಾಯಕ್ ರೂ 5 ಲಕ್ಷ ಅನುದಾನ ನೀಡಿದ್ದಾರೆ.ಸಭಾಭವನ‌ ನಿರ್ಮಾಣ,ಇಂಟರ್ ಲಾಕ್ ಅಳವಡಿಕೆ,ಅಡುಗೆ ಕೋಣೆ ನಿರ್ಮಾಣ,2 ಬೋರುವೆಲ್,1 ಹೈಮಾಸ್ಟ್ ದೀಪ ಸಹಿತ ಇನ್ನಿತರ ಕಾಮಗಾರಿಗಳಿಗೆ ಒಟ್ಟು ರೂ 80ಲಕ್ಷ ಅನುದಾನ ನೀಡಿದ್ದಾರೆ.ಜೊತೆಗೆ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರೂ 10 ಲಕ್ಷ,ಬಿ.ಕೆ ಹರಿಪ್ರಸಾದ್ ರೂ 2.50ಲಕ್ಷ ಅನುದಾನ ನೀಡಿ ಸಹಕರಿಸಿದ್ದಾರೆ.ಮಾಜಿ ಶಾಸಕ ಕೆ.ವಸಂತ ಬಂಗೇರರವರ ಪ್ರಯತ್ನದಿಂದ ಹಿಂದುಳಿದ ವರ್ಗಗಳ ಇಲಾಖೆಯಿಂದ ಕೂಡ ರೂ10ಲಕ್ಷ ಮೊತ್ತ ದೊರಕಿದೆ.ಜಿ.ಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಅವರು ಸಹಕರಿಸಿದ್ದಾರೆ.

ಸಂಘದಿಂದ ಸಮಾಜಮುಖಿ ಕಾರ್ಯ: ಸಂಘವು ಸೇವಾ ಮನೋಭಾವದಲ್ಲಿ ದುಡಿಯುತ್ತಿದ್ದು ವಿದ್ಯೆ ಹಾಗೂ ಸಂಘಟನೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ನೆರವು, ವೈದ್ಯಕೀಯ ಸಹಾಯ ಹಸ್ತ ನೀಡುತ್ತಿದೆ.ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಿರಂತರವಾಗಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು ಅತೀ ಕಡಿಮೆ ಬಾಡಿಗೆಯಲ್ಲಿ ಸಭೆ, ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವೈಭವದ ಶ್ರೀ ಶಾರದೋತ್ಸವ, ಭರತನಾಟ್ಯ ಮತ್ತು ಸಂಗೀತ ತರಬೇತಿ ತರಗತಿ, ಕುಣಿತಾ ಭಜನೆ, ಆಟಿ ಕೂಟ ಆಚರಣೆ, ಅಗೇಲು ಸೇವೆ,ಕ್ರೀಡಾಕೂಟ,ತರಭೇತಿ ಕಾರ್ಯಗಾರ,ಧತ್ತಿ ನಿಧಿ ಯೋಜನೆ, ಪ್ರವಾಸ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಶಿವಗಿರಿ ಕ್ಷೇತ್ರ ದರ್ಶನ, ಸಾಧಕರಿಗೆ ಗೌರವ,
ಶ್ರೀ ಗುರು ಪೂಜೆ, ಸತ್ಯನಾರಾಯಣ ಪೂಜೆ,ಸರ್ವೇಶ್ವರೀ ದೇವಿಯ ಪೂಜೆ, ದೀಪಾವಳಿ ಆಚರಣೆ, ನಡೆಯುತ್ತಿದೆ. ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಊರಿನ ಪ್ರಗತಿಗೆ ಸಂಘವು ವಿಶೇಷ ಸಹಕಾರ ನೀಡುತ್ತಿದೆ ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದರು.

Related posts

ಡಿ.19: ಅಳದಂಗಡಿ ನಮ ಮಾತೆರ್ಲ ಒಂಜೇ ಕಲಾ ತಂಡದ 18ನೇ ವಾರ್ಷಿಕೋತ್ಸವ: ಯಕ್ಷಗಾನ ಬಯಲಾಟ, ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಆರ್ಥಿಕ ನೆರವು

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ವರದಿ ಸಾಲಿನಲ್ಲಿ ರೂ. 394.12 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.1.54 ಕೋಟಿ ಲಾಭ: ರಾಕೇಶ್ ಹೆಗ್ಡೆ

Suddi Udaya

ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

Suddi Udaya

ಮದ್ದಡ್ಕ: ಸಬರಬೈಲುನಲ್ಲಿ ಹೊಂಡಕ್ಕೆ ಬಿದ್ದ ಲಾರಿ‌

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Suddi Udaya

ಅಲ್ಯುಮಿನಿಯಂ ದೋಂಟಿಗೆ ವಿದ್ಯುತ್ ಸ್ಪರ್ಷ: ಸಿಹಿಯಾಳ ತೆಗೆಯುತ್ತಿದ್ದ ಕೃಷಿಕ ಸಾವು

Suddi Udaya
error: Content is protected !!