ಮೊಗ್ರು: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಬೆಳ್ತಂಗಡಿ ಇವರ ದತ್ತು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಇದರ ಅಭಿವೃದ್ಧಿಗಾಗಿ ಟ್ರಸ್ಟ್ ನ ನೇತೃತ್ವದಲ್ಲಿ 2025-26ರ ಶೈಕ್ಷಣಿಕ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಕ್ಕಾಗಿ ಹಾಗೂ ಇಬ್ಬರು ಆಂಗ್ಲ ಮಾಧ್ಯಮ ಶಿಕ್ಷಣ ಬೋಧನೆಯ ಶಿಕ್ಷಕಿಯರ ವೇತನ ಪಾವತಿ ಸೇರಿದಂತೆ ಸುಮಾರು ಏಳು ಲಕ್ಷ ಇಪ್ಪತ್ತೈದು ಸಾವಿರ ರೂಪಾಯಿಯನ್ನು ವಿನಿಯೋಗಿಸಲಾಗಿದೆ ಎಂದು ಮುಗೇರಡ್ಕ ಸರಕಾರಿ ಸರಕಾರಿ ಶಾಲಾ ಸೇವಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಜೆ ಮಾಹಿತಿ ನೀಡಿದರು.
ಟ್ರಸ್ಟಿನ ವಾರ್ಷಿಕ ಮಹಾಸಭೆಯು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ನಡೆದು, ಮೊಗ್ರು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಪ್ರಾರಂಭಿಕ ಹಂತದಲ್ಲಿ ಶಾಲಾ ವಠಾರ, ಶಾಲಾ ಮಾಡು ರಿಪೇರಿ, ಶಾಲಾಕಟ್ಟಡದ ಒಳಗಡೆ ಕೊಠಡಿಗಾಗಿ ವಿಭಜಕ, ಹೊಸ ಡೆಸ್ಕ್ ಹಾಗೂ ಬೆಂಚು, ಆಕರ್ಷಕ ಮೇಜು ಕುರ್ಚಿ, ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಮನೋಹರ ಗೌಡ ಅಂತರ ಮಾಹಿತಿ ನೀಡಿದರು.
ಮೊಗ್ರು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ: 2025-26 ರಲ್ಲಿ ಮೊಗ್ರು ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಅನುಮೋದನೆ ಪಡೆದಿದ್ದು ಟ್ರಸ್ಟ್ನ ನೇತೃತ್ವದಲ್ಲಿ ಇಬ್ಬರು ಆಂಗ್ಲಮಾಧ್ಯಮದಲ್ಲಿ ಭೋದನೆಯ ಅನುಭವಿ ಶಿಕ್ಷಕಿಯನ್ನು ನೇಮಕ ಮಾಡಿ, ಇಬ್ಬರು ಶಿಕ್ಷಕಿಯರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇಬ್ಬರು ಶಿಕ್ಷಕಿಯರ ವೇತನವನ್ನು ಟ್ರಸ್ಟ್ನಿಂದ ಪಾವತಿಸಲಾಗಿದೆ ಎಂದು ಟ್ರಸ್ಟ್ನ ಕೋಶಾಧಿಕಾರಿ ಪುರಂದರ ಗೌಡ ನಾÊಮಾರು ಸಭೆಯಲ್ಲಿ ಮಾಹಿತಿ ಹಂಚಿಕೊಂಡರು.
ಸರಕಾರಿ ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ : ಮೊಗ್ರು ಶಾಲಾ ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಟ್ರಸ್ಟ್ನ ವತಿಯಿಂದ ಶಾಲಾ ವಾಹನವನ್ನು ಖರೀದಿಸಲಾಗಿದ್ದು ಶಾಲೆಗೆ ಬರುವ ಮಕ್ಕಳಿಗೆ ಮಿತವ್ಯಯದಲ್ಲಿ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ. ಟ್ರಸ್ಟಿ ದೀಕ್ಷಿತ್ ವಾಹನದ ಚಾಲಕರಾಗಿ ಹಾಗೂ ಟ್ರಸ್ಟಿನಿಂದ ನೇಮಿಸಲ್ಪಟ್ಟ ಶಿಕ್ಷಕಿ ಶ್ರೀಮತಿ ಕೀರ್ತಿ ಇವರ ಸಹಕಾರದೊಂದಿಗೆ ಮಕ್ಕಳನ್ನು ಸುರಕ್ಷಿತವಾಗಿ ವಾಹನ ಪ್ರಯಾಣವನ್ನು ಒದಗಿಸಲಾಗುತ್ತಿದೆ ಎಂದು ವಾಹನ ಸಂಚಾಲಕ ಟ್ರಸ್ಟಿ ದೀಕ್ಷಿತ್ ಅಭಿಪ್ರಾಯ ಹಂಚಿಕೊಂಡರು.
ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ: ಟ್ರಸ್ಟಿನ ಜೊತೆ ಕಾರ್ಯದರ್ಶಿ ಉಮೇಶ ಗೌಡ ಪರಕ್ಕಜೆ ಮಾತನಾಡಿ ಪ್ರಾಥಮಿಕ ಹಂತದಲ್ಲಿಯೇ ಪರಿಣಾಮಕಾರಿ ಆಂಗ್ಲ ಭಾಷೆಯ ಶಿಕ್ಷಣ ಪ್ರಸ್ತುತ ಅಗತ್ಯ. ಅದನ್ನು ಮನಗಂಡು ನಾಲ್ಕು ಶಿಕ್ಷಕ/ಕಿಯ ತಂಡವು ಮೊಗ್ರು ಶಾಲೆಯಲ್ಲಿ ಭೋದನೆ ಮಾಡುತ್ತಿದ್ದು, ಇಬ್ಬರು ಅನುಭವಿ ಆಂಗ್ಲ ಮಾಧ್ಯಮದ ಶಿಕ್ಷಕಿಯರು ಮೊಗ್ರು ಶಾಲೆಗೆ ಸಿಕ್ಕಿರುವುದು ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿದೆ. ಕೇವಲ ಪಠ್ಯ ಶಿಕ್ಷಣವಲ್ಲದೆ ಪಠ್ಯೇತರ ಚಟುವಟಿಕೆಗಳು ರಾಷ್ಟ್ರೀಯ ಹಬ್ಬಗಳು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಶೈಕ್ಷಣಿಕ ಪ್ರವಾಸ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಉತ್ತಮ ಪಡಿಸುತ್ತಿದೆ ಎಂದರು.
ಹೊಸ ಟ್ರಸ್ಟಿಗಳಿಗೆ ಸೇರ್ಪಡೆಗೆ ಆಹ್ವಾನ: ಟ್ರಸ್ಟಿನ ಉಪಾಧ್ಯಕ್ಷ ಆನಂದ ಗೌಡ ಬರಮೇಲು ಮೊಗ್ರು ಮಾತನಾಡಿ. ನಮ್ಮೂರ ಶಾಲೆಯನ್ನು ಉಳಿಸಿ ಬೆಳೆಸಲು ಹಾಗೂ ಅಭಿವೃದ್ಧಿ ಪಡಿಸಲು, ಸಮಾಜ ಸೇವಾ ಮನೋಭವದ ಇನ್ನಷ್ಟು ವಿದ್ಯಾಭಿಮಾನಿಗಳು ಟ್ರಸ್ಟಿಗಳಾಗಿ ಬರಬೇಕು ಆ ಮೂಲಕ ಶಾಲೆಯನ್ನು ಉನ್ನತೀಕರಿಸಬಹುದು ಎಂದರು.
ಹೊಸ ಶಾಲಾ ಕಟ್ಟಡದ ಅನಿವಾರ್ಯ: ಸರ್ವರುತುವಿನ ಶಾಶ್ವತ ಸೇತುವೆ ಮುಗೇರಡ್ಕದಲ್ಲಿ ನಿರ್ಮಾಣವಾಗುತ್ತಿರವಾಗ ಅಭಿವೃದ್ಧಿ ಹೊಂದುತ್ತಿರುವ ಮೊಗ್ರು ಗ್ರಾಮದಲ್ಲಿ ಹಳೆಯ ಕಟ್ಟಡದ ಚಿಕ್ಕ ಶಾಲೆ ಇದ್ದು ಮುಂದಿನ ದಿನಗಳಲ್ಲಿ ಹೊಸ ಶಾಲೆ ನಿರ್ಮಾಣದ ಅವಶ್ಯಕತೆಯನ್ನು ಟ್ರಸ್ಟಿನ ಉಪಾಧ್ಯಕ್ಷ ಚಂದ್ರಹಾಸ ಗೌಡ, ಪ್ರಸ್ತಾಪಿಸಿದರು.
ವಿವಿಧ ಮೂಲಗಳಿಂದ ದೇಣಿಗೆ, ಸಮರ್ಪಕ ಬಳಕೆ : 13 ಮಂದಿ ಕೃಷಿಕರು ಇಬ್ಬರು ನಿವೃತ್ತ ಸೈನಿಕರು ಒಬ್ಬರು ನಿವೃತ್ತ ಪೋಲಿಸ್ ಅಧಿಕಾರಿ ಇಬ್ಬರು ಯೋಗ ಗುರುಗಳನ್ನು ಒಳಗೊಂಡು 18 ಮಂದಿ ಟ್ರಸ್ಟಿಗಳು ತಲಾ 12000/- ದೇಣಿಗೆ ಪಾವತಿಸುವುದರೊಂದಿಗೆ ಟ್ರಸ್ಟಿನ ಮಹಾಪೋಷಕರಾದ ಶ್ರೀ ಕ್ಷೇತ್ರ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದಿಂದ ಒಂದು ಶಿಕ್ಷಕಿಯ ಒಂದು ವರ್ಷದ ವೇತನದ ದೇಣಿಗೆ, ಟ್ರಸ್ಟಿನ ಮಹಾಪೋಷಕರಾದ ಆವಿಷ್ಕಾರ ಯೋಗ ಮಂಗಳೂರು ಇದರ ಯೋಗ ಗುರು ಕುಶಾಲಪ್ಪ ಗೌಡ ಇವರು ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಮ್ಯಾರಥಾನ್ ಯೋಗ ಭೋದನೆಯ ಮೂಲಕ 2,55,000/- ಸಂಗ್ರಹದೊಂದಿಗೆ ವಿವಿಧ ದಾನಿಗಳಿಂದ ಒಟ್ಟು 7,25,000/- ದೇಣಿಗೆ ಸಂಗ್ರಹವಾಗಿದ್ದು ಸಂಗ್ರಹವಾದ ಹಣವನ್ನು ಸಮರ್ಪಕವಾಗಿ ಬಳಸಲಾಗಿದೆ. ಆರ್ಥಿಕ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಟ್ರಸ್ಟಿನ ಅಧ್ಯಕ್ಷ ಸಮರ್ಪಿಸಿದರು. ಟ್ರಸ್ಟಿಗಳಾದ ಬಾಬುಗೌಡ ಸಂಪತ್ತು ನಿಲಯ, ಡಿ.ಚಂದಪ್ಪ ದಂಬೆತ್ತಿಮಾರು, ಬಾಲಕೃಷ್ಣ ಗೌಡ ಮುಗೇರಡ್ಕ ಅನುಗ್ರಹ, ಪ್ರದೀಪ್ ಕೃಷ್ಣಪ್ಪಗೌಡ ಮನ್ಕುಡೆ, ಅಶ್ವತ್ ಜಾಲ್ನಡೆ, ಗಿರಿಯಪ್ಪ ಎರ್ಮಳ, ಸೇಸಪ್ಪ ಗೌಡ ಜಾಲ್ನಡೆ, ಸುಧಾಕರ ಗೌಡ ವಿದ್ಯಾದರ ಅಂತರ, ದೇವಪ್ರಸಾದ್ ಬರಮೇಲು, ಭರತ್ ಜಾಲ್ನಡೆ ಉಪಸ್ಥಿತರಿದ್ದರು.











