ಉಜಿರೆ: ರುಡ್ ಸೆಟ್ ಸಂಸ್ಥೆಯ ಆವರಣದಲ್ಲಿ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ. ಗೂಂಡೂರಾವ್ ಅವರು ಉದ್ಯಮದಲ್ಲಿ ಯಶಸ್ಸು ಗಳಿಸಲು ನೈತಿಕತೆ, ಶಿಸ್ತು ಹಾಗೂ ಪ್ರಾಮಾಣಿಕತೆ ಮುಖ್ಯವಾದ ಅಂಶಗಳು ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ತಾಂತ್ರಿಕ ಕ್ಷೇತ್ರದಲ್ಲಿ ಬದಲಾವಣೆ ವೇಗವಾಗಿ ನಡೆಯುತ್ತಿರುವುದರಿಂದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು. ಬಳಿಕ ತರಬೇತಿಗಾರರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಭವಿಷ್ಯದಲ್ಲಿ ಸ್ವ ಉದ್ಯೋಗದ ಮೂಲಕ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.


ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜಯ್ ಅತಿಥಿಗಳನ್ನು ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ಉದ್ದೇಶ, ಅವಧಿ ಹಾಗೂ ನೀಡಲಾದ ಪ್ರಾಯೋಗಿಕ ತರಬೇತಿಯ ವಿವರವನ್ನು ನೀಡಿದರು. ಈ ತರಬೇತಿ ಯುವಕರಿಗೆ ತಾಂತ್ರಿಕ ಜ್ಞಾನ ಮಾತ್ರವಲ್ಲದೆ ಉದ್ಯಮಶೀಲತೆ ಮನೋಭಾವವನ್ನೂ ಬೆಳೆಸುವಲ್ಲಿ ಸಹಕಾರಿ ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಪಿ.ವಿ. ಕಾರ್ಯಕ್ರಮ ನಿರ್ವಹಿಸಿ ಸಮಾರಂಭವನ್ನು ಸುಗಮವಾಗಿ ನಡೆಸಿಕೊಟ್ಟರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದವಿತ್ತರು. ಅತಿಥಿ ಉಪನ್ಯಾಸಕ ರಾಕೇಶ್ ಉಪಸ್ಥಿತರಿದ್ದರು.
ಪ್ರಜ್ವಲ್ , ಸೂರಜ್ ಕಿಣಿ ತಮ್ಮ ತರಬೇತಿಯ ಅನುಭವ ಹಂಚಿಕೊಂಡು, ತರಬೇತಿಯ ಮೂಲಕ ಪಡೆದ ಪ್ರಾಯೋಗಿಕ ಜ್ಞಾನ ಮತ್ತು ಆತ್ಮವಿಶ್ವಾಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತರಬೇತಿ ಅವರ ಭವಿಷ್ಯದ ಬದುಕಿಗೆ ದಿಕ್ಕು ತೋರಿಸುವ ಮಹತ್ವದ ಹಂತವಾಗಿದೆ ಎಂದು ಹೇಳಿದರು.











