32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉಜಿರೆ “ಕನಸಿನ ಮನೆ” ಕೆ. ಮೋಹನ್ ಕುಮಾರ್‌ರ ವಿಭಿನ್ನ ಕಲ್ಪನೆಯಲ್ಲಿ ತಲೆಎತ್ತಿ ನಿಂತಿದೆ-ಬ್ರಹ್ಮಕಲಶೋತ್ಸವದಲ್ಲಿ ಮನಸೆಳೆಯುತ್ತಿರುವ “ಸುಪ್ರಸಾದ” ಭೋಜನಾಲಯ

ಉಜಿರೆ: “ನಭೂತೋ ನ ಭವಿಷ್ಯತಿ” ಎಂಬ ಮಾತಿನಂತೆ ಜಿಲ್ಲೆಯಲ್ಲಿ ಹಿಂದೆAದೂ ನಡೆಯದ ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಮಿಗಿಲಾದ ದಾಖಲಿತ ಸುದೀರ್ಘ ಇತಿಹಾಸವುಳ್ಳ, ಆಚಾರ್ಯ ಮಧ್ವರು ಕರ್ಮ ನಿರ್ಣಯ ಎಂಬ ಗ್ರಂಥ ರಚಿಸಿದ ಉಲ್ಲೇಖವಿರುವ, ಬಂಗಾಡಿ ಸೀಮೆಯ ಪ್ರಧಾನ ವಿಷ್ಣುಕ್ಷೇತ್ರವಾಗಿ, ಭಕ್ತರ ಶ್ರದ್ಧಾಕೇಂದ್ರವಾಗಿ ಪ್ರಸಿದ್ಧಿ ಹೊಂದಿರುವ ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮಾ.೨ರಂದು ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು, ಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಕೆ. ಮೋಹನ್ ಕುಮಾರ್ ರವರ ವಿಭಿನ್ನ ಕಲ್ಪನೆಯೊಂದಿಗೆ ನಿರ್ಮಾಣಗೊಂಡ ಅರಮನೆಯಂತೆ ಕಂಗೋಳಿಸುವ “ಸುಪ್ರಸಾದ” ಅನ್ನಛತ್ರವು ವಿಶೇಷ ಆಕರ್ಷಣೆಯೊಂದಿಗೆ ಭಕ್ತರ ಮನಸೂರೆಗೊಳ್ಳುತ್ತಿದೆ.

ಅರಮನೆಯನ್ನು ಹೋಲುವ ಅನ್ನಛತ್ರ: ಧಾರ್ಮಿಕ ಕ್ಷೇತ್ರಗಳಲ್ಲಿ ಸುಮಾರು 12 ವರ್ಷಗಳಿಗೊಮ್ಮೆ ಜರುಗುವ ಬ್ರಹ್ಮಕಲಶೋತ್ಸವದಲ್ಲಿ ದೇವಳದ ಸಾನಿಧ್ಯದಲ್ಲಿ ನೀಡುವ ಪ್ರಸಾದದಷ್ಟೇ ಪಾವಿತ್ರ್ಯತೆ ಹೊಂದಿರುವಂತದ್ದು, ಸಾರ್ವಜನಿಕ ಅನ್ನಪ್ರಸಾದ ಸಮರ್ಪಣೆ. ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವಂತಹ ಭಕ್ತವರ್ಗಕ್ಕೆ ಅನ್ನಪ್ರಸಾದ ಒದಗಿಸುವಲ್ಲಿ ಯಾವುದೇ ರೀತಿಯ ಚ್ಯುತಿ ಬರಬಾರದು ಎಂಬ ಉದ್ದೇಶದಿಂದ ಕೆ. ಮೋಹನ್ ಕುಮಾರ್ ರವರ ವಿಭಿನ್ನ ಕಲ್ಪನೆಯೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ ಎಲ್ಲೂ ಕಾಣದ, ಅನ್ನದಾನದ ಮಹತ್ವವನ್ನು ತಿಳಿಹೇಳುವ ನಾವೀನ್ಯತೆಯೊಂದಿಗೆ ಅರಮನೆಯನ್ನೇ ಹೋಲುವ ರೀತಿಯಲ್ಲಿ ಸುಪ್ರಸಾದ ಅನ್ನಛತ್ರ ನಿರ್ಮಾಣಗೊಂಡಿರುತ್ತದೆ.


“ಸುಪ್ರಸಾದ” ಅನ್ನಛತ್ರದ ವೈಶಿಷ್ಟ್ಯ:
ಸುಪ್ರಸಾದ ಅನ್ನಛತ್ರವು 210 ಅಡಿ ಉದ್ದ, 135 ಅಡಿ ಅಗಲದ ಸುಮಾರು 25 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುತ್ತದೆ. ಬರೋಡ ಶಶಿಧರ್ ಶೆಟ್ಟಿ ಅವರ ಸಹೋದರ ರಾಜೇಶ್ ಶೆಟ್ಟಿ ನವಶಕ್ತಿಯವರ ಅಡಿಕೆ ತೋಟದಿಂದ ಸುಮಾರು 3 ಸಾವಿರ ಅಡಿಕೆ ಮರಗಳನ್ನು ಕಡಿದು ತಂದಿದ್ದು, ಈ ಪೈಕಿ 250 ಅಡಿಕೆ ಮರಗಳನ್ನು ಅನ್ನಛತ್ರದ ಚಪ್ಪರಕ್ಕೆ ಉಪಯೋಗಿಸಲಾಗಿದೆ. ಮೋಹನ್ ಕುಮಾರ್ ಅವರ ಯುವಕರು ಕೇವಲ ೮ ದಿನಗಳಲ್ಲಿ ಅಡಿಕೆ ಮರಗಳನ್ನು ಹಾಕಿ ಮೇಲ್ಭಾಗಕ್ಕೆ ಅಡಿಕೆ ಮರದ ಗರಿ (ಸೊಗೆ) ಅಳವಡಿಸಿದ್ದಾರೆ. ಬಿಸಿಲಿನ ತಾಪಮಾನ ಕಡಿಮೆಗೊಳಿಸಲು ಬಿಳಿ ಬಣ್ಣದ ಮೇಲ್ಕಟ್ಟು, ಅಡಿಕೆ ಮರಗಳಿಗೆ ಫೈಬರ್ ಡಿಸೈನ್‌ಗಳ್ಳುಳ ಕಂಬ ಅಳವಡಿಕೆ, ನೆಲಕ್ಕೆ ಹಸಿರು ಬಣ್ಣದ ಮ್ಯಾಟ್ ಹಾಕಲಾಗಿದೆ. ಸುಪ್ರಸಾದ ಅನ್ನಛತ್ರ ಪ್ರವೇಶಿಸುತ್ತಿದ್ದಂತೆ ಮುಂಭಾಗದಲ್ಲಿ ಕೇದಾರನಾಥ, ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಹೋಲುವ ಶಿಲಾಮಯ ವರ್ಣ. ಶಿಲ್ಪಕಲೆಯನ್ನು ಹೋಲುವಂತಹ ಶಿವನ ಮೂರ್ತಿ, ಆನೆಗಳು, ಯಕ್ಷಗಾನ ಕಲಾಕೃತಿಗಳು, ದೀಪಾಲಂಕಾರಗಳು, ರಾರಾಜಿಸುತ್ತಿರುವ ಕೇಸರಿ ಪತಾಕೆ ಜನರನ್ನು ಆಕರ್ಷಿಸುತ್ತಿದ್ದು, ಸಾಂಪ್ರದಾಯಿಕ ಶೈಲಿಯ ಜೊತೆಗೆ ಹೊಸತನದ ರೂಪ ನೀಡಲಾಗಿದೆ.

ಸುಪ್ರಸಾದದಲ್ಲಿ “ಶ್ರೀ ಅನ್ನಪೂರ್ಣೇಶ್ವರಿ ಗುಡಿ”:

“ಅನ್ನಪೂರ್ಣೆ ಸದಾ ಪೂರ್ಣೆ ಪರಮೇಶ್ವರ ಪ್ರಾಣವಲ್ಲಭೆ” ಸುಪ್ರಸಾದ ಅನ್ನಛತ್ರವನ್ನು ಪ್ರವೇಶಿಸಿ ಒಳಭಾಗಕ್ಕೆ ಪ್ರವೇಶಿಸಿದಾಗ ಧನಾತ್ಮಕತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಶ್ರೀ ಅನ್ನಪೂರ್ಣೇಶ್ವರಿಯ ಗುಡಿಯನ್ನೇ ಹೋಲುವಂತಹ ತಾತ್ಕಾಲಿಕ ಗುಡಿಯನ್ನು ನಿರ್ಮಿಸಲಾಗಿದೆ. ಮೋಹನ್ ಕುಮಾರ್ ಅವರ ಜೊತೆ ಸದಾ ಹುಮ್ಮಸ್ಸಿನೊಂದಿಗೆ ದುಡಿಯುವ ಯುವಕರ ತಂಡದ ಜೊತೆಗೆ ಬಾಲ್ಯದ ಸ್ನೇಹಿತ, ಖ್ಯಾತ ಕಲಾವಿದ ಉಜಿರೆಯ ಶಿವಕುಮಾರ್ ಅವರು ಈ ಗುಡಿಯ ನಿರ್ಮಾಣ ಕಾರ್ಯವನ್ನು ನಡೆಸಿದ್ದು, ಕಳೆದ ಒಂದೂವರೆ ತಿಂಗಳು ಇವರ ತಂಡ ಕೆಲಸ ಮಾಡಿದೆ.


ಪ್ರತಿಭಾ ಪ್ರದರ್ಶನಕ್ಕೆ ಅವಕಾಶ: ಬ್ರಹ್ಮಕಲಶೋತ್ಸವದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ಕಲಾವಿದರ ಕಾರ್ಯಕ್ರಮಗಳು ಸುದರ್ಶನ ವೇದಿಕೆ, ತಾಲೂಕಿನ ಪ್ರತಿಭಾವಂತ ಕಲಾವಿದರ ಕಾರ್ಯಕ್ರಮವು ಕೃಷ್ಣಾನುಗ್ರಹ ವೇದಿಕೆಯಲ್ಲಿ ಜರುಗುತ್ತದೆ. ಅದೇ ರೀತಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೆ. ಮೋಹನ್ ಕುಮಾರ್ ಅವರು ಅನ್ನ ಛತ್ರದ ಮುಂಭಾಗದಲ್ಲಿ ವೇದಿಕೆಯನ್ನು ನಿರ್ಮಿಸುವುದರ ಮೂಲಕ ಪ್ರತಿ ದಿನ ಸಂಜೆ 7ರಿಂದ 9 ತನಕ, 10 ವರ್ಷದ ಒಳಗಿನ ಗ್ರಾಮೀಣ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.


ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯರ ಕನಸಿನ ಗೋಪುರ:
ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯರ ಕನಸಾಗಿದ್ದ ಗೋಪುರ ನಿರ್ಮಾಣವು, ಕಳೆದ 15 ವರ್ಷದ ಹಿಂದೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ದ್ವಾರ ನಿರ್ಮಾಣದ ನೇತೃತ್ವವನ್ನು ವಹಿಸಿಕೊಂಡಿದ್ದ ಕೆ. ಮೋಹನ್ ಕುಮಾರ್ ಅವರ ಪ್ರಧಾನ ಸಂಚಾಲಕತ್ವದಲ್ಲಿ, ಶಶಿಧರ ಶೆಟ್ಟಿ ಬರೋಡ ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಒಟ್ಟು ೪೯ ಅಡಿ ಎತ್ತರ ಇರುವ ವಿಜಯ ಗೋಪುರದ ಕಾಮಗಾರಿಯು ಊರ ಕಾರ್ಮಿಕರಿಂದಲೇ ನಿರ್ಮಾಣಗೊಳ್ಳಬೇಕು ಎಂಬ ಉದ್ದೇಶದಿಂದ ಶರತ್‌ಕೃಷ್ಣ ಪಡ್ವೆಟ್ನಾಯರು ಮತ್ತು ಸಮಿತಿಯವರು ಚಿಂತನೆ ನಡೆಸಿ, ಬೆನಕ ಕನ್ಸ್‌ಟ್ರಕ್ಷನ್ ಮಾಲಕರಾದ ಗಣೇಶ ಗೌಡ ಅವರಿಗೆ ಇದರ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು. ಶಿಲ್ಪಕಲಾ ಕೆಲಸವನ್ನು ಲಾಯಿಲದ ರಮೇಶ್ ತಂಡ, ಸಿಮೆಂಟ್ ಕುಸುರಿ ಕೆಲಸವನ್ನು ಉಜಿರೆಯ ಕೃಷ್ಣಪ್ಪ ತಂಡ, ಕಾಸ್ಟ ಶಿಲ್ಪ ಶಶಿಧರ ಆಚಾರ್ಯ ಬೆಳಾಲು, ಹೊರಾಂಗಣದ ಹಾಸುಕಲ್ಲು ಶೇಖರ್ ಸೋಮೇಶ್ವರ ತಂಡ ನಿರ್ವಹಿಸಿದೆ. ಕಳೆದ 6 ತಿಂಗಳುಗಳ ಕಾಲ ಹಗಲಿರುಳು ಸಿಮೆಂಟ್‌ನ ಕುಸುರಿ ಕೆಲಸ ನಡೆದಿದ್ದು, ಸುಮಾರು 60-70 ಸಾವಿರ ಕಾರ್ಖಾನೆ ಇಟ್ಟಿಗೆ, 1ಸಾವಿರ ಗೋಣಿ ಸಿಮೆಂಟ್, ತಲಾ 100 ಅಡಿ ಅಗಲ ಹೊಂದಿರುವ ಸುತ್ತು ಪೌಳಿಗೆ 5 ಸಾವಿರ ಸೇಫ್ಟಿ ಕಲ್ಲುಗಳು, 18 ಸಾವಿರ ಹಂಚು, ಕಬ್ಬಿಣದ ಪಕ್ಕಾಸುಗಳನ್ನು ಬಳಸಲಾಗಿದೆ. ಗೋಪುರದ ಹೆಬ್ಬಾಗಿಲು ಕೈಯಿಂದಲೇ ಕೆತ್ತಿದ ದಶಾವತಾರವುಳ್ಳ ಕಲಾಕೃತಿಗಳನ್ನು ಹೊಂದಿದ್ದು, ಮೋಹನ್ ಕುಮಾರ್ ಅವರ ಯುವಕರ ತಂಡ ಗೋಪುರಕ್ಕೆ ಬಣ್ಣ ಬಳಿಯುವುದರ ಜೊತೆಗೆ ಬ್ರಹ್ಮಕಲಶದ ಅನೇಕ ಕೆಲಸಗಳನ್ನು ಯಾವುದೇ ಸಂಭಾವನೆ ಪಡೆಯದೆ ಶ್ರಮದಾನದ ಮೂಲಕ ನಡೆಸಿದ್ದಾರೆ ಎಂಬುವುದು ಗಮನಾರ್ಹವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೇರಣಾ ಶಕ್ತಿ
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಎಂದಾಗ ನೆನಪಾಗುವುದು ಕೀರ್ತಿಶೇಷ ವಿಜಯ ರಾಘವ ಪಡುವೆಟ್ನಾಯರು. ಅವರ ಕನಸನ್ನು ನನಸು ಮಾಡುವುದಕ್ಕೆ ಹೊರಟವರು ನಾವು. ಅನ್ನ ಪ್ರಸಾದದ ಮಹತ್ವವು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ವಿಭಿನ್ನ ಕಲ್ಪನೆಯ ಅನ್ನಛತ್ರ ನಿರ್ಮಾಣ ಮಾಡಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್ ರವರು ನನಗೆ ಪ್ರೇರಣೆ. ವರ್ತಕರು, ಆಟೋ ಚಾಲಕರು, ಮಹಿಳೆಯರು, ಮಕ್ಕಳು, ಹಿರಿಯರ ಶ್ರಮದಾನದ ಮೂಲಕ ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳು ನಡೆದಿದ್ದು ಇದರ ಯಶಸ್ಸು ಅವರಿಗೆ ಸಲ್ಲಬೇಕು. ಅನ್ನ ಪ್ರಸಾದ ಸ್ವೀಕರಿಸುವ ಭಕ್ತರು ಕೈ ತೊಳೆಯುವ ಜಾಗದಲ್ಲಿ ಮಿತವಾಗಿ ನೀರನ್ನು ಬಳಸಿ. ಅನ್ನವನ್ನು ಸೇವಿಸುವ ಹಕ್ಕು ಎಲ್ಲರಿಗೂ ಇದೆ, ಬಿಸಾಡುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಕೆ. ಮೋಹನ್ ಕುಮಾರ್
ಪ್ರಧಾನ ಸಂಚಾಲಕರು
ಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ

ಏಕಕಾಲದಲ್ಲಿ ಮೂರು ಸಾವಿರ ಮಂದಿಗೆ ಅನ್ನಪ್ರಸಾದ ವಿತರಣೆ:
ಸುಪ್ರಸಾದ ಭೋಜನಾಲಯದಲ್ಲಿ ಏಕಕಾಲದಲ್ಲಿ ಸುಮಾರು ೩ ಸಾವಿರ ಜನರು ಊಟ ಮಾಡುವ ಅವಕಾಶವಿದ್ದು, ಮಧ್ಯಾಹ್ನ 12 ರಿಂದ 3.30, ಸಂಜೆ 7 ರಿಂದ ರಾತ್ರಿ 10 ರವರೆಗೆ ಅನ್ನದಾನ ನಡೆಯುತ್ತದೆ. 16 ಊಟದ ಕೌಂಟರ್, 125 ಜನ ಬಡಿಸುವ ಕಾರ್ಯಕರ್ತರು, ಅಡುಗೆ ತರುವುದಕ್ಕೆ ೬೦ ಜನ ಸ್ವಯಂಸೇವಕರು, ಜೊತೆಗೆ ಬದುಕು ಕಟ್ಟೋಣ ಬನ್ನಿ ತಂಡದ ಸುಮಾರು 150 ಸ್ವಯಂ ಸೇವಕರ ತಂಡವು ಪ್ರತೀ ದಿನ ಊಟದ ಬಳಿಕ ಸ್ವಚ್ಛತೆ ಕಾರ್ಯದಲ್ಲಿ ನಿರತರಾಗಿರುತ್ತಾರೆ.

Related posts

ಕಾಪಿನಬಾಗಿಲು: ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಕೆಡವಿದ ಅಧಿಕಾರಿಗಳು

Suddi Udaya

ಮಳೆಗೆ ಹಾನಿಗೊಳಗಾದ ನಡ ಹಾಗೂ ಉಜಿರೆ ಗ್ರಾಮಗಳ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾಡಿನಾದ್ಯಂತ ನವರಾತ್ರಿ ಸಂಭ್ರಮ; ಕರಾವಳಿಯಲ್ಲಿ ಮಾರ್ನೆಮಿ ವೇಷಗಳ ಸದ್ದು ಆರಂಭ

Suddi Udaya

ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಭಾರತೀಯ ಸೈನ್ಯ ಹಾಗೂ ಸೈನಿಕರಿಗೆ ಶಕ್ತಿ ತುಂಬಲು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ‘ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ’

Suddi Udaya
error: Content is protected !!