ಬೆಳ್ತಂಗಡಿ: ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ಶ್ರೀ ವಿಠಲ ಪೂಜಾರಿಯವರು ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ನೂತನ ಸೌಲಭ್ಯಗಳನ್ನು ವೀಕ್ಷಿಸಿದರು.
ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿಶೇಷ ಅನುದಾನದಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ (Smart Class) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿಜಿಟಲ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ಕಾರ್ಯನಿರ್ವಹಣೆ ಮತ್ತು ಉಪಯುಕ್ತತೆಯ ಬಗ್ಗೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಠಲ ಪೂಜಾರಿ ಮಾತನಾಡಿ “ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಶಿಕ್ಷಣ ಲಭಿಸುವಂತಾಗಬೇಕು ಎನ್ನುವುದು ಪೂಜ್ಯ ಹೆಗ್ಗಡೆಯವರ ಆಶಯವಾಗಿದೆ. ಈ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯು ಮಕ್ಕಳ ಜ್ಞಾನಾರ್ಜನೆಗೆ ಹೊಸ ಆಯಾಮ ನೀಡಲಿದೆ,” ಎಂದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ವಿಭಾಗದ ತಾಲೂಕು ಸಮನ್ವಯಾಧಿಕಾರಿ ಮಧುರ, ಬೆಳ್ತಂಗಡಿ ವಲಯದ ಮೇಲ್ವಿಚಾರಕ ರವಿ, ಒಕ್ಕೂಟದ ಅಧ್ಯಕ್ಷ ದಯಾನಂದ, ಯಶೋಧ ಹಾಗೂ ಚರಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಸ್ವಾಗತಿಸಿ, ವಂದಿಸಿದರು.












