26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಏಕರೂಪ ಸಮವಸ್ತ್ರ ನೀತಿ ಪಾಲನೆ ಹಾಗೂ ಬಕ್ರೀದ್ ಹಬ್ಬದ ಹಿನ್ನಲೆ ಅಕ್ರಮ ಗೋಹತ್ಯೆ ತಡೆಗೆ ಆಗ್ರಹ: ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ರಿಗೆ ಮನವಿ

ಬೆಳ್ತಂಗಡಿ : ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ಸಮಾನತೆ ಕಾಪಾಡುವುದು ಹಾಗೂ ಮುಂಬರುವ ಹಬ್ಬದ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯು ತಹಶೀಲ್ದಾರ್ ರವರ ಮುಖೆನ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಿಗೆ ಹಾಗೂ ಗೃಹ ಸಚಿವರಿಗೆ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರದ ಇತ್ತೀಚಿನ ನಿರ್ಧಾರವು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ ಎಂದು ಸಮಿತಿಯು ಮಾನ್ಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಈ ಧಾರ್ಮಿಕ ಗುರುತುಗಳಿಗೆ ಪ್ರತ್ಯೇಕ ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಧರ್ಮ ಆಧಾರಿತ ವಿಭಜನೆ ಮತ್ತು ಗುಂಪುಗಾರಿಕೆ ಹೆಚ್ಚಾಗಲಿದ್ದು, ಶೈಕ್ಷಣಿಕ ಸಂಸ್ಥೆಗಳು ಧಾರ್ಮಿಕ ಸಂಘರ್ಷಗಳ ವೇದಿಕೆಯಾಗುವ ಅಪಾಯವಿದೆ ಎಂದು ಸಮಿತಿ ಎಚ್ಚರಿಸಿದೆ. ಕಳೆದ 2022 ರ ಹಿಜಾಬ್ ವಿವಾದದ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಎಂದು ಸ್ಪಷ್ಟಪಡಿಸಿ, ನಿಗದಿತ ಸಮವಸ್ತ್ರ ಪಾಲನೆಗೆ ಮಹತ್ವದ ತೀರ್ಪು ನೀಡಿತ್ತು. ಪ್ರಸ್ತುತ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ ಸರ್ಕಾರದ ಈ ನಿರ್ಧಾರ ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾಗಿದ್ದು, ಹಿಜಾಬ್‌ಗೆ ಅವಕಾಶ ನೀಡುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಸಮಿತಿ ಒತ್ತಾಯಿಸಿದೆ.

ಇದರೊಂದಿಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಪ್ರತ್ಯೇಕ ಧಾರ್ಮಿಕ ಚಿಹ್ನೆ, ಶಾಲು ಅಥವಾ ಉಡುಪುಗಳಿಗೆ ಆಸ್ಪದ ನೀಡದೆ ಏಕರೂಪದ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಶಾಲಾ ಆವರಣದಲ್ಲಿ ಶಿಸ್ತು ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಆಗ್ರಹಿಸಲಾಗಿದೆ.

ಮುಂಬರುವ ಮೇ 28ರಂದು ನಡೆಯಲಿರುವ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಬಾಹಿರ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟವನ್ನು ಸಂಪೂರ್ಣವಾಗಿ ತಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಮಿತಿಯು ಮಾನ್ಯ ಗೃಹ ಸಚಿವರಿಗೆ ಮನವಿ ಮಾಡಿದೆ.

ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ, ನಾಗರಿಕರ ಧಾರ್ಮಿಕ ಭಾವನೆಗಳ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರವು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ ಈ ಮನವಿ ಸಂದರ್ಭದಲ್ಲಿ ಕೇಶವ ಅಚ್ಚಿನಡ್ಕ, ರಾಜೇಂದ್ರ ಜಿ. ಕಾನರ್ಪ, ಜಗದೀಶ್ ಚಂದ್ರ ವೇಣೂರು, ಪ್ರಸನ್ನ ಬೇಕಲ್ ಬೆಳ್ತಂಗಡಿ,, ವಿಘ್ನೇಶ್ ಆಚಾರ್ಯ, ಶ್ರೀಮತಿ ಕಸ್ತೂರಿ ಬೆಳ್ತಂಗಡಿ, ಶಿವರಾಮ್ ಎಂ ಕೆ ಉಜಿರೆ, ಶಾರದ ಭಂಡಾರ್ಕರ್, ಯೋಗೀಶ್ ಅಚ್ಚಿನಡ್ಕ, ಹರೀಶ್ ಮುದ್ದಿನಡ್ಕ ಮುಂತಾದವರು ಉಪಸ್ಥಿತರಿದ್ದರು.

Related posts

ಬಡಗಕಾರಂದೂರು ಸ.ಉ.ಪ್ರಾ.ಶಾಲೆಯ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಸಂಸದ ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಕೆ

Suddi Udaya

ಡಾಮರೀಕರಣ ಭಾಗ್ಯಕ್ಕಾಗಿ ಕಾಯುತ್ತಿರುವ ಬಂಗೇರಕಟ್ಟೆ- ನೆತ್ತರ ರಸ್ತೆ

Suddi Udaya

ವಿಪರೀತ ಶಬ್ಧ ಮಾಲಿನ್ಯ ಮಾಡುತ್ತಿದ್ದ ಬೈಕ್ ಮತ್ತು ಸ್ಕೂಟರ್‌ಗಳ ಸೈಲೆನ್ಸರನ್ನು ರೋಲ‌ರ್ ಮೂಲಕ ನಾಶ ಮಾಡಿದ ಬೆಳ್ತಂಗಡಿ ಸಂಚಾರ ಪೊಲೀಸರು

Suddi Udaya

ನಾರಾವಿ: ಸಂತ ಅಂತೋನಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಸಾಫ್ಟ್‌ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟಿಒಟಿ ತರಬೇತಿ

Suddi Udaya
error: Content is protected !!