July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ನವೀಕೃತ ಕೈಗಾರಿಕಾ ಸಮಗ್ರ ವಿದ್ಯುತ್ ಕಾರ್ಯಗಾರ ಕೇಂದ್ರಕ್ಕೆ ಚಾಲನೆ

ಬೆಳ್ತಂಗಡಿ : ಕನಸ್ಸುಗಳಿಲ್ಲದ ಬದುಕು ನಮ್ಮನ್ನು ಅತ್ಯಂತ ಸಾಮಾನ್ಯರನ್ನಾಗಿಸುತ್ತಿದೆ. ಕನಸುಗಳು ಹುಟ್ಟಲು ಕುತೂಹಲ ಬೆಳೆಯಬೇಕು. ಭಾರತೀಯ ತರುಣರು ಕ್ರಿಯಾಶೀಲತೆಯ ಕೌಶಲ್ಯವಂತರಾಗಲು ತನ್ನ ವಿದ್ಯಾರ್ಥಿ ಜೀವನದಿಂದಲೇ ದೃಢವಾದ ಪ್ರಯತ್ನ ಮತ್ತು ಕನಸ್ಸುಗಳೊಂದಿಗೆ ಸಾಗಬೇಕು ಎಂದು ಷ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಉಪಾಧ್ಯಕ್ಷ ದೇವ್ ದಾಸ್ ಶೆಟ್ಟಿ ಅಭಿಪ್ರಾಯಪಟ್ಟರು.

ಇವರು ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ನವೀಕೃತ ಅತ್ಯಾಧುನಿಕ ಕೈಗಾರಿಕಾ ಸಮಗ್ರ ಉಪಕರಣಗಳ ಕಾರ್ಯಗಾರ ಕೇಂದ್ರದ ಉದ್ಘಾಟನಾ ಸಭಾ ಕಾರ್ಯಕ್ರಮದ ಮುಖ್ಯ ಉದ್ಘಾಟಕರಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಸ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಯುತವಾದ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ನಿಶ್ಚಲವಾದ ಗುರಿ ಮತ್ತು ಮನಸಿದ್ದರೆ ಕಲೆ ಕರಗತವಾಗುತ್ತದೆ. ಉದ್ದಿಮೆ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳನ್ನು ತೆರೆಯುವ ಜೊತೆಗೆ ನಾವು ಉದ್ಯೋಗದಾತರಾಗಿ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಂಘ ಸಂಸ್ಥೆಗಳು ಕೊಡಮಾಡುವ ಸಹಕಾರಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಗುರು ಹಿರಿಯರ ಅನುಭವ ಮತ್ತು ಬುದ್ಧಿ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ. ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿ, 30 ವಿದ್ಯಾರ್ಥಿಗಳಿಂದ ಆರಂಭವಾದ ವೇಣೂರಿನ ಕೈಗಾರಿಕಾ ತರಬೇತಿ ಸಂಸ್ಥೆ ಇಂದು 300 ವಿದ್ಯಾರ್ಥಿಗಳತ್ತ ತಲುಪಿದೆ. ಪ್ರತಿ ವರ್ಷ ನೂರು ಶೇಕಡಾ ದಾಖಲಾತಿಯ ಜೊತೆಗೆ ವಿದ್ಯಾರ್ಥಿಗಳಿಗೆ ನೂರು ಶೇಕಡಾ ಪ್ಲೇಸ್ ಮೆಂಟ್ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಥೆಯು ಟೊಯೋಟಾ, ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್, ಬೋಶ್ ತರಹದ 6 ಕ್ಕೂ ಅಧಿಕ ಅಂತಾರಾಷ್ಟ್ರೀಯ ಕಂಪೆನಿಗಳ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ನಂತಹ ಸಂಸ್ಥೆ ಇಂದು ತನ್ನ ಸಿಎಸ್ಆರ್ ಆಶ್ರಯದಲ್ಲಿ ಸುಮಾರು 22 ಲಕ್ಷ ಮೌಲ್ಯದ ವಿದ್ಯುತ್ ಉಪಕರಣಗಳನ್ನು ತರಬೇತಿ ಕಾರ್ಯಾಗಾರ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉಪಕಾರಿಯಾಗಲಿದೆ ಎಂದು ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾದ ಷ್ನೇಯ್ಡರ್ ಎಲೆಕ್ಟ್ರಿಕ್ ಫೌಂಡೇಶನ್ ಆಫ್ ಇಂಡಿಯಾ ಕಂಪನಿಯ ಉಪಾಧ್ಯಕ್ಷರಾದ ದೇವ್ ದಾಸ್ ಶೆಟ್ಟಿ ಮತ್ತು ಸಿಎಸ್ಆರ್ ವಿಭಾಗದ ಡಿಜಿಎಂ ಪ್ರಶಾಂತ್ ಶೆಟ್ಟಿಯವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗು ಕಾಲೇಜಿನ ವತಿಯಿಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಕಾಲೇಜಿನ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸನ್ಮಾನಿಸಿದರು.

ಇದೇ‌ ಸಂದರ್ಭದಲ್ಲಿ ಅತಿಥಿಗಳೊಂದಿಗೆ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಕಾಲೇಜಿನ ಟೊಯೋಟಾ ಕಾರ್ಯಾಗಾರ, ಫಿಟ್ಟರ್ , ಟರ್ನರ್ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಯಂತ್ರೋಪಕರಣಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಟೂಲ್ ಕಿಟ್ ವಿತರಣೆ :

ಕಾರ್ಯಕ್ರಮದಲ್ಲಿ ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಸೂಮಾರು 50 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಬ್ಯಾಗ್ ವಿತರಿಸಲಾಯಿತು. ವೇದಿಕೆಯಲ್ಲಿ ಸಾಂಕೇತಿಕವಾಗಿ ರೋಹಿತ್, ಪ್ರದೀಪ್,ಕಾರ್ತಿಕ್ ರಾಜ್ , ಧನುಶ್ , ಸೂರಜ್ ಕಿಣಿ, ಚೈತ್ರೇಶ್ ಸೇರಿದಂತೆ 6 ಜನ ವಿದ್ಯಾರ್ಥಿಗಳಿಗೆ ಅತಿಥಿಗಳಾದ ದೇವದಾಸ್ ಶೆಟ್ಟಿ ಹಾಗು ಪ್ರಶಾಂತ್ ಶೆಟ್ಟಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸಮ್ಮುಖದಲ್ಲಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು , ನಿವೃತ್ತ ಪ್ರಾಚಾರ್ಯರು , ಹಳೆ ವಿದ್ಯಾರ್ಥಿ ಸಂಘದವರು ಸೇರಿದಂತೆ ಹಲವಾರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಪ್ರಭಾ ಮತ್ತು ಪೂಜಾ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಪದ್ಮ ಪ್ರಸಾದ್ ಬಿ ನಿರೂಪಿಸಿ, ರಾಮ ಚಂದ್ರ ಶೆಟ್ಟಿ ವಂದಿಸಿದರು.

ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ ಹಲವು ಭರವಸೆ :

ಕಳೆದ ಅನೇಕ ವರ್ಷಗಳಿಂದ ಎಸ್.ಡಿ.ಎಂ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸ್ನೇಯ್ಡರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಉದ್ಯೋಗವನ್ನು ನೀಡುತ್ತಿದ್ದೇವೆ. ಇಂದು ಮಹಿಳೆಯರಿಗೂ ಕೈಗಾರಿಕಾ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದು, ಆಸಕ್ತಕರ ಸಂಖ್ಯೆ ಕಮ್ಮಿ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳಾ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ವತಿಯಿಂದ ಸ್ಕಾಲರ್ಶಿಪ್ ನೀಡಲಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಉದ್ದಿಮೆ ತೆರೆಯಲು ಇಚ್ಚಿಸುವ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ 21 ದಿನಗಳ ಉಚಿತ ತರಬೇತಿಯನ್ನು ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ ಕಾರ್ಯಾಗಾರ

Suddi Udaya

ದಿ. ಪ್ರವೀಣ್ ನೆಟ್ಟಾರುರವರ ಮನೆಗೆ ಬೆಳ್ತಂಗಡಿ ಯುವಮೋರ್ಚಾ ಮಂಡಲದ ಪದಾಧಿಕಾರಿಗಳ ಭೇಟಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೂಡಿಗೆರೆ ಶಾಸಕಿ ಶ್ರೀಮತಿ ನಯನ ಮೋಟಮ್ಮ ಭೇಟಿ

Suddi Udaya

ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದಿಂದ ಎಂಟು ದಿನಗಳ ಪ್ರವಾಸ

Suddi Udaya
error: Content is protected !!