28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹುಟ್ಟೂರು ತ್ಯಜಿಸಿ ಹೋಗಿದ್ದವನಿಗೆ ಮತ್ತೆ ಮರುಕಳಿಸಿದ ಬಾಲ್ಯದ ನೆನಪು..! 26 ವರ್ಷದ ಬಳಿಕ ಒಂದಾದ ಕರುಳ ಕುಡಿ….

✍🏻ಮನೀಷ್ ವಿ. ಅಂಚನ್ ಪಾಲೇದು

ಬೆಳ್ತಂಗಡಿ: “ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ ಕಾಣ ಹೊರಟೆ ಅಮ್ಮ ಎಂಬ ವಿಸ್ಮಯನೆ…. ಉಸಿರೇ ನನ್ನುಸಿರೇ ನಿನ್ನಮ್ಮ”… ಎಂಬ ವಜ್ರಕಾಯ ಸಿನಿಮಾದ ಈ ಹಾಡಿನ ಸಾಲು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಮಗ ಜನ್ಮ ನೀಡಿದ ತಾಯಿಯನ್ನು 26 ವರ್ಷದ ಬಳಿಕ ಹುಡುಕಿಕೊಂಡು ಹುಟ್ಟೂರಿಗೆ ಮರಳಿ ಬಂದು, ಅಮ್ಮ ಮಗನ ಪುನರ್ ಸಮ್ಮಿಲನಕ್ಕೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಶೋಕನಗರ ಸಾಕ್ಷಿಯಾಗಿದೆ.

12 ವರುಷದ ಬಾಲಕ ಸತೀಶ್ ಎಂಬಾತ 26 ವರ್ಷಗಳ ಹಿಂದೆ ಅಂದರೆ 2000 ಇಸವಿಯ ಲಕ್ಷದೀಪೋತ್ಸವ ಸಮಯದಲ್ಲಿ ಸರ್ಕಸ್ ಕಂಪನಿಯೊಂದಿಗೆ ಕೆಲಸಕ್ಕೆಂದು ಹೋದತ ಮರಳಿ ಬಂದಿದ್ದೆ 2026ರ ಜೂ.9 ರಂದು ತನ್ನ ಹುಟ್ಟೂರಿಗೆ ಆಗಮಿಸಿದ್ದಾನೆ. ಧರ್ಮಸ್ಥಳ ಗ್ರಾಮದ ಅಶೋಕ ನಗರದ ಶಿವಪಾರ್ವತಿ ನಿಲಯದ ಕುಂಞ ಮತ್ತು ಅಕ್ಕು ದಂಪತಿಯ ಪ್ರಥಮ ಪುತ್ರ ಈ ಸತೀಶ್.

ಕ್ಷೇತ್ರ ದರ್ಶನದೊಂದಿಗೆ ತಾಯಿಯ ದರ್ಶನ: ಮಹಾರಾಷ್ಟ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ, ವಾಸವಿದ್ದ ರೂಮ್‌ನ ಅಸುಪಾಸಿನಲ್ಲಿ ಸುತ್ತಾಡಿಕೊಂಡು ಬಂದತಾನಿಗೆ ತನ್ನ ಬಾಲ್ಯ ದಿನಗಳ ಮರುಕಳಿಸಿದವು. ತಾನು ಕಲಿತ ಎಸ್‌ಡಿಎಮ್ ಶಾಲೆ, ಆಟದ ಮೈದಾನ, ಬೆಳೆದ ಊರು ನೆನೆಪಿಗೆ ಬಂದು, ತನ್ನ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳ ಗ್ರಾಮ ಪಂಚಾಯತ್ ಕೆಳಭಾಗದಲ್ಲಿರುವ ಅಂಗಡಿಯೊಂದಕ್ಕೆ ಬಂದ ಸತೀಶ್ ನಾನು ಬಾಲ್ಯದಲ್ಲಿ ಈ ಊರಿನಲ್ಲಿ ಬೆಳೆದಿದ್ದು, ನಾನು 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳುತ್ತಿದ್ದಂತೆ ಅಂಗಡಿಯ ಮಾಲಿಕ ಯತೀಶ್ ಯಕ್ಷ ಎಂಬುವರು ಆತನ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸರ್ಕಸ್ ಕಂಪನಿಯ ಕೆಲಸಕ್ಕೆ ಹೋಗಿದ್ದ: ಲಕ್ಷ ದೀಪೋತ್ಸವ ಸಮಯ ಸರ್ಕಸ್ ಕಂಪನಿಯೊಂದಿಗೆ ಅಶೋಕ ನಗರ 4 ಮಂದಿ ಕೆಲಸಕ್ಕೆಂದು ಹೋಗಿದ್ದರು. ಸುಬ್ರಹ್ಮಣ್ಯ, ಸುಳ್ಯ, ಭದ್ರಾವತಿ ತನಕ ಕೆಲಸ ಮಾಡಿ ನಾಲ್ಕು ಮಂದಿಯ ತಂಡ ಸರ್ಕಸ್ ಕಂಪನಿ ಮುಂಬೈಗೆ ಹೋಗುವುದಾಗಿ ತಿಳಿಸಿದಕ್ಕೆ ಸತೀಶ್ ನಾನು ಬರುವುದಿಲ್ಲ ನೀವು ಹೋಗಿ ಎಂದಕ್ಕೆ ಉಳಿದ ಮೂರು ಮಂದಿ 2 ವರ್ಷದ ಬಳಿಕ ಊರು ಸೇರಿದರು. ಮಹಾರಾಷ್ಟçದಲ್ಲಿ ಮದುವೆ ಹಾಲ್, ಡೆಕೋರೇಶನ್, ಚಾಲಕ, ಹೋಟೆಲ್‌ಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಸತೀಶ ಸಲೀಂ ಅಬ್ದುಲ್ ಅನ್ಸಾರಿಯಾಗಿ(38) ಬದಲಾಗಿ ಹೊಸ ಜೀವನಕ್ಕೆ ಮುನ್ನಡಿ ಬರೆದ.

ಮಹಾರಾಷ್ಟ್ರದಿಂದ ಹುಟ್ಟೂರಿಗೆ: ಮಹಾರಾಷ್ಟ್ರ ರಾಜ್ಯದ ನಾಗ್ಪುರ ಜಿಲ್ಲೆಯ ಕಲ್ಮೇಶ್ವರದ ದಹೆಂಗಾವ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ತಾಲೀಮಾ ಸಲೀಂ ಅಬ್ದುಲ್ ಅನ್ಸಾರಿ ಗೃಹಿಣಿಯಾಗಿದ್ದ, ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ(9) ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 2015ರಿಂದ ದಹೆಂಗಾವ್‌ನ ಶರ್ಮ ಡಾಬಾದ ವ್ಯವಸ್ಥಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಸುಮಾರು ಮಾಸಿಕವಾಗಿ 25 ಸಾವಿರ ಸಂಪಾದನೆ ಮಾಡಿ ಬದುಕು ಕಟ್ಟಿಕೊಂಡ ಸತೀಶ್ ಯಾನೆ ಸಲೀಂ ಅನ್ಸಾರಿ ದಹೆಂಗಾವ್‌ನಿಂದ ತನ್ನ ಸಹೊದ್ಯೋಗಿ ರಮೇಶ್‌ರೊಂದಿಗೆ 1258 ಕಿಮೀ.ಕ್ರಮಿಸಿ ಹುಟ್ಟೂರಿಗೆ ಮರಳಿ ಬಂದಿದ್ದಾರೆ.

ಹಿಂದಿವಾಲ: ಸತೀಶ್ ಮೂರು ವರ್ಷದ ಹಿಂದೆ ತಂದೆ ಕುಂಞ ಅವರನ್ನು ಕಳೆದುಕೊಂಡಿರುವ ವಿಷಯ ಕೇಳಿ ದು:ಖತಪ್ತರಾದರು. ಬಾಲ್ಯದಲ್ಲಿ ಮಾತೃ ಭಾಷೆ ತುಳು ಅರಿತಿದ್ದ ಸತೀಶ್ ಇದೀಗ ಹಿಂದೆ ಭಾಷೆ ಬಲ್ಲವರಾಗಿದ್ದಾರೆ. ತುಳು ಅವರಿಗೆ ಅರ್ಥವಾಗುತ್ತಿದ್ದು ಮಾತನಾಡಲು ಅಲ್ಪಸ್ವಲ್ಪ ಬರುತ್ತದೆ ಎನ್ನುತ್ತಾರೆ ಸತೀಶ್. ಮನೆಯವರು ಮತ್ತೆ ಸಿಕ್ಕ ಬಳಿಕ ತನ್ನ ಕುಟುಂಬವನ್ನು ಕರೆದುಕೊಂಡು ಬಂದು ಪರಿಚಯಿಸುವುದಾಗಿ ಮಾಧ್ಯಮದ ಪ್ರಶ್ನೆಗೆ ಸತೀಶ್ ಯಾನೆ ಸಲೀಂ ಅನ್ಸಾರಿ ಪ್ರತಿಕ್ರಿಯೆ ನೀಡಿದ್ದಾರೆ. ಜೂ.10 ರಂದು ತನ್ನ ಸ್ನೇಹಿತ ರಮೇಶ್ ಅವರೊಂದಿಗೆ ಸಲೀಂ ಅನ್ಸಾರಿ ವಾಪಸು ಕರ್ಮಭೂಮಿಗೆ ಪ್ರಯಣ ಬೆಳೆಸಿದ್ದಾರೆ. 26 ವರ್ಷದ ಬಳಿಕ ಹುಟ್ಟೂರಿಗೆ ಮರಳಿ ಬಂದ ಸತೀಶ್ ಅವರನ್ನು ನೋಡಲು ತನ್ನ ಕುಟುಂಬದವರು, ಸಾಲು ಸಾಲು ಹಿತೈಶಿಗಳು ಬಂದು ಅವರನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದರು.

ಹರಕ್ಕೆ ಕಟ್ಟಿಕೊಂಡಿದ್ದೆ:
ಮಗ ಮರಳಿ ಬರಲು ಹೆತ್ತವ್ವ ಅಕ್ಕು ಶ್ರೀಕ್ಷೇತ್ರ ಧರ್ಮಸ್ಥಳ, ಕಟೀಲು, ಪಣೋಲಿಬೈಲು ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡಿದ್ದರು. ಇತ್ತೀಚೇಗೆ ತನ್ನ ಮಕ್ಕಳಾದ ಹರೀಶ್ ಮತ್ತು ನಾಗೇಶರ ಬಳಿ ನಾನು ಸಾವನ್ನಪ್ಪುವ ಮೊದಲು ನನಗೆ ನನ್ನ ಹಿರಿಮಗ ಸತೀಶನನ್ನು ನೋಡಬೇಕು ಎಂದು ತಾಯಿ ಮಕ್ಕಳಲ್ಲಿ ಹೇಳಿದ್ದರು. ಭಕ್ತಿಯ ಪ್ರಾರ್ಥನೆಯೋ, ದೈವೀಚ್ಚೆಯೋ ೨೬ ವರ್ಷದ ಬಳಿಕ ತಾಯಿ ಮಗ ಒಂದಾಗಿದ್ದಾರೆ.

ಹುಟ್ಟೂರು ತ್ಯಜಿಸಿದರೂ ನನ್ನ ಕುಟುಂಬದವರ ಚಹರೆ, ಒಡನಾಟ ನೆನೆಪಿತ್ತು. ದೇವರ ದರ್ಶನಕ್ಕೆಂದು ಬಂದಾಗ ನನಗೆ ಬಾಲ್ಯದ ದಿನಗಳು ನೆನಪಾಗಿ ಅಂಗಡಿಯೊಂದರಲ್ಲಿ ವಿಚಾರಿಸಿದಾಗ ತಾಯಿ ಮತ್ತು ಕುಟುಂಬದವರು ಮತ್ತೆ ಸಿಕ್ಕಿರುವುದು ಖುಷಿ ತಂದಿದೆ. ಆಗಾಗ ಬಂದು ಹೋಗಿ ತಾಯಿಯನ್ನು ಭೇಟಿ ಮಾಡುತ್ತೇನೆ. ನನ್ನ ಕುಟುಂಬದವರನ್ನೂ ಕರೆತರುತ್ತೇನೆ.
-ಸತೀಶ್ ಯಾನೆ ಸಲೀಂ ಅನ್ಸಾರಿ

ಅಣ್ಣ ಮರಳಿ ಬಂದಿರುವುದು ನಮಗೆ ಸಂತೋಷವಾಗುತ್ತಿದೆ. ಮಹಾರಾಷ್ಟçದಲ್ಲಿ ತನ್ನ ಬದುಕು ಕಟ್ಟಿಕೊಂಡಿದ್ದಾನೆ. ಅವನ ಕುಟುಂಬವನ್ನು ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದೇವೆ. ನಾವು ಅವನ ಮನೆಗೆ ಹೋಗುತ್ತೇವೆ ಅವನು ಎಲ್ಲಿದ್ದರೂ ನಮಗೆ ಖುಷಿಯೇ, ಕಡಿದು ಹೋಗಿದ್ದ ಸಂಬಂಧ ಮತ್ತೆ ಒಂದಾಗಿದೆ. —ನಾಗೇಶ್ ಸಹೋದರ.

Related posts

ಮೂಲ ಸೌಕರ್ಯದಿಂದ ವಂಚಿತವಾಗಿದೆ ಬಂಗಾಡಿ ಅಂಗನವಾಡಿ ಕೇಂದ್ರ: ಸಮಸ್ಯೆಯನ್ನು ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

Suddi Udaya

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya

ಉಜಿರೆ ಜಾತ್ರೆಯಲ್ಲಿ ಗಮನ ಸೆಳೆದ ಸಾನಿಧ್ಯ ಮಕ್ಕಳ ಸ್ಟಾಲ್

Suddi Udaya

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹುದ್ದೆಗೆ ಗೇರುಕಟ್ಟೆಯ ಹಿದಾಯತುಲ್ಲಾ ಕೆ.ಎ ಆಯ್ಕೆ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಗರ್ಡಾಡಿ: ಸತ್ಯ ಶೋಧಕ ವೇದಿಕೆಯಿಂದ ಹಚ್ಚಾಡಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!