ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಶಾಸಕರು ಅಡ್ಡ ಮತನಾದನ ಮಾಡಿರುವುದರಿಂದ ನನ್ನನ್ನು ಸೇರಿದಂತೆ ರಾಜ್ಯದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಬಹಳಷ್ಟು ನೋವನ್ನು ತಂದಿದೆ. ಇದರ ಬಗ್ಗೆ ಸಾಮಾಜಿಕ ಮಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆದಿದೆ. ನಮ್ಮ ಪಕ್ಷದಿಂದ ಮೂರು ಮಂದಿ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇದರ ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಅವರು ಜೂ.26ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತ ಲಿಂಗರಾಜು ಪಾಟೀಲ್ 27 ಮತ ಹಾಗೂ ರಘು ಕೌಟಿಲ್ಯ ಅವರು 29 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ನಮ್ಮ ಶಾಸಕರು ಅಡ್ಡ ಮತದಾನ ಮಾಡಿದ ಬಗ್ಗೆ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಸಿ, ಸತ್ಯಶೋಧನೆ ಆಗಬೇಕು ಎಂದು ನಾನು ಹೇಳಿರುವುದು ಸತ್ಯ. ಆದರೆ ನಮ್ಮ ಪಕ್ಷದ ಹಿರಿಯ ಶಾಸಕರು ಇದನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗುವುದು ಬೇಡ. ವರಿಷ್ಠರ ಗಮನಕ್ಕೆ ತರೋಣ ಎಂದು ಕಿವಿ ಮಾತು ಹೇಳಿದ್ದರು. ಅದರಂತೆ ನಾನು ಮತ್ತು ಅಶೋಕ್ ಅವರು ಡೆಲ್ಲಿಗೆ ಹೋಗಿ ವರಿಷ್ಠರಿಗೆ ವಿಷಯವನ್ನು ತಿಳಿಸಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ವ್ಯವಹಾರ ಇಲ್ಲ:
ರಾಜ್ಯದ ಮುಖ್ಯಮಂತ್ರಿ ಡಿಕೆಶಿ ಮತ್ತು ರಾಜ್ಯಾಧ್ಯಕ್ಷರಿಗೆ ಒಳ್ಳೆಯ ಸಂಬಂಧ ಇದೆ. ಅತ್ಮೀಯತೆ ಇದೆ. ಅವರೇ ಅಡ್ಡಮತದಾನಕ್ಕೆ ಅವಕಾಶ ಮಾಡಿಕೊಟ್ಟಿರಬಹುದು ಎಂಬ ಚರ್ಚೆಯನ್ನು ನಮ್ಮವರೇ ಕೆಲವರು ಹುಟ್ಟು ಹಾಕಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರ ಆಶೀರ್ವಾದದಿಂದ ನನಗೆ ರಾಜ್ಯಾಧ್ಯಕ್ಷನ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಇಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ನನಗೆ ಮತ್ತು ಡಿಕೆಶಿ ನಡುವೆ ಯಾವುದೇ ಸಂಬಂಧ ಇಲ್ಲ, ಆತ್ಮೀಯತೆಯೂ ಇಲ್ಲ ಎಂದು ಸ್ವಷ್ಟಪಡಿಸಿ, ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ಅವರಿಗೆ ಗೌರವ ಕೊಟ್ಟಿದ್ದೇನೆ. ನಮ್ಮ ನಡುವೆ ಯಾವುದೇ ವ್ಯವಹಾರ ಇಲ್ಲ, ಸಂಬಂಧವೂ ಇಲ್ಲ, ಆತ್ಮೀಯತೆಯೂ ಇಲ್ಲ, ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಪ್ರಗತಿಗೆ ಪ್ರಾಥ೯ನೆ :
ನನಗೆ ಬಿಜೆಪಿಯ ಸಂಘಟನೆ ಬಗ್ಗೆ ವಿಶ್ವಾಸ ಇದೆ. ಕಾರ್ಯಕರ್ತರ ಶಕ್ತಿಯ ಬಗ್ಗೆ ವಿಶ್ವಾಸ ಇದೆ. ರಾಜ್ಯದಲ್ಲಿ ಜನವಿರೋಧಿ, ಬಡವರ ವಿರೋಧಿ ಭ್ರಷ್ಟ ಕಾಂಗ್ರೇಸ್ ಸರಕಾರದ ಆಡಳಿತ ಇದೆ. ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶವಿದ್ದು ಇದೆಲ್ಲ ನಿವಾರಣೆಯಾಗಿ ಒಳ್ಳೆಯ ಮಳೆ-ಬೆಳೆ ಆಗಲಿ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ. ಜನರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಹಿಂದೂಗಳ ರಕ್ಷಣೆ ಮಾಡುವ ಬಿ.ಜೆ.ಪಿ. ನೇತೃತ್ವದ ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರಲಿ ಎಂದು ಹಾಗೂ ರಾಜ್ಯದ ಸರ್ವತೋಮುಖ ಪ್ರಗತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ
ಎಂದು ತಿಳಿಸಿದರು.
ಗೃಹಲಕ್ಷೀ ಯೋಜನೆಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ:
ಗೃಹ ಲಕ್ಷ್ಮೀ ಯೋಜನೆಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ಸಿಐಜಿ ವರದಿಯಲ್ಲಿ ಇದೆ. ಕಾಂಗ್ರೆಸ್ ಪಕ್ಷದ ಪುಡಾರಿಗಳೇ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿದ್ದಾರೆ. ಅವನನ್ನು ಮನೆಗೆ ಕಳುಹಿಸಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಬಿಡದಿ ಟೌನ್‌ಶೀಪ್ ವಿಷಯದಲ್ಲಿ ನಾವು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು, ರೈತನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು ಎಂದು ಈ ಸಂದರ್ಭದಲ್ಲಿ ಬಿ.ಎಸ್ ವಿಜೇಂದ್ರ ಅವರು ತಿಳಿಸಿದರು.
ಎಸ್.ಐ.ಆರ್. ಬಗ್ಯೆ ಅಪಪ್ರಚಾರವಾಗುತ್ತಿದೆ. ಪಕ್ಷ ಯಾವ ರೀತಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಅವರು ಅದನ್ನು ಗಮನಿಸುತ್ತಾರೆ ಎಂದು ತಿಳಿಸಿದರು.
ಡಿ. ವಿ. ಸದಾನಂದ ಗೌಡ ತಮ್ಮನ್ನು ಸಂಪರ್ಕಿಸಿದ್ದಾರೆ. ಯಾವುದೇ ವಿಶಿಷ್ಟ ಮಾಹಿತಿ ನೀಡಿಲ್ಲ. ಬೆಂಗಳೂರಿಗೆ ಹೋದ ಮೇಲೆ ಅವರನ್ನು ಹಾಗೂ ಸಿ.ಟಿ. ರವಿ ಅವರನ್ನೂ ಸಂಪರ್ಕಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಕರಾವಳಿ ಭಾಗದ ಶಾಸಕರುಗಳಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಲ್ಯ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ, ವಿಧಾನ ಪರಿಷ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್, ಕಿಶೊರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪೊ, ಬೆಳ್ತಂಗಡಿ ಮಂಡಲ ಅಧ್ಪಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಹಾಗೂ ಪ್ರಮುಖ ನಾಯಕರುಗಳಾದ ಜಯಂತ್ ಗೌಡ ಗುರಿಪಳ್ಳ, ದಿನೇಶ್ ಗೌಡ ದಿಡುಪೆ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.












