22.9 C
ಪುತ್ತೂರು, ಬೆಳ್ತಂಗಡಿ
August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬಂಟರ ಸಂಘ ಕಾವಳಕಟ್ಟೆ ವಲಯ : ಕಲಾಭಿನಂದನೆ – 2026 ಸಂಭ್ರಮಾಚರಣೆ

ಬೆಳ್ತಂಗಡಿ: ಕಲೆ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಮಾಧ್ಯಮ. ಕಲಾವಿದರ ಸಾಧನೆಯ ಹಿಂದೆ ಅಪಾರ ಪರಿಶ್ರಮ, ತ್ಯಾಗ ಮತ್ತು ನಿರಂತರ ಅಭ್ಯಾಸ ಇರುತ್ತದೆ. ಕಲಾಸಾಧಕರನ್ನು ಸಮಾಜ ಗುರುತಿಸಿ ಗೌರವಿಸಿದಾಗ ಮತ್ತಷ್ಟು ಸಾಧಿಸುವ ಉತ್ಸಾಹ ಹೆಚ್ಚುತ್ತದೆ. ಕಲೆಯ ತಳಹದಿಯಲ್ಲಿ ಈ ಸಮಾಜ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ಸಮಾಜಿಕ ಚಿಂತಕ ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು.

ಇವರು ಬಂಟ್ವಾಳ ತಾಲೂಕು ಬಂಟರ ಸಂಘದ ವತಿಯಿಂದ ಬಂಟರ ಸಂಘ ಕಾವಳಕಟ್ಟೆ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ಡಡ್ಡ ರವರ ನಿವಾಸದಲ್ಲಿ ನಡೆದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾವಳಕಟ್ಟೆ ವಲಯದ ಕಲಾವಿದರನ್ನು ಅಭಿನಂದಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡುವುದು ಪ್ರತಿಯೊಂದು ಸಂಘ-ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ. ಬಂಟರ ಸಂಘ ಕಾವಳಕಟ್ಟೆ ವಲಯವು ಕಳೆದ ಹಲವು ವರ್ಷಗಳಿಂದ ಸಮಾಜಸೇವೆ, ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.

ಕಲಾವಿದರನ್ನು ಗೌರವಿಸುವ ಸಮಾಜ ಎಂದಿಗೂ ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಳೆದುಕೊಳ್ಳುವುದಿಲ್ಲ. ಯುವಜನರು ಕಲೆ ಮತ್ತು ಸಂಸ್ಕೃತಿಯತ್ತ ಸೆಳೆಯುವ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಬಂಟರ ಸಂಘ ಕಾವಳಕಟ್ಟೆ ವಲಯವು ಕೈಗೊಂಡಿರುವ ಈ ಕಾರ್ಯ ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೋಹನ್ ಶೆಟ್ಟಿ ನರ್ವಲ್ಡಡ್ಡ ಮಾತನಾಡಿ, ಕಲಾವಿದರನ್ನು ಗೌರವಿಸುವುದು ಎಂದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಿದಂತೆಯೇ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಘಗಳು ಸಮಾಜಕ್ಕೆ ದಾರಿದೀಪವಾಗುತ್ತವೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾವಳಕಟ್ಟೆ ವಲಯದ ನೃತ್ಯ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಸಂಯೋಜಿಸಿದ ಮಂಗಳೂರಿನ ಸೀಝ್ಲಿಂಗ್ ಡ್ಯಾನ್ಸ್ ಅಕಾಡೆಮಿಯ ಶುಭಕಿರಣ ಮಣಿ ಹಾಗೂ ಅವರ ತಂಡವನ್ನು ವಿಶೇಷವಾಗಿ ಶಾಲು ಹೊದಿಸಿ ಅಭಿನಂದಿಸಲಾಯಿತು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ಸಾಧನೆಯನ್ನು ಪ್ರಶಂಸಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸಂಘದ ಲೆಕ್ಕಪತ್ರವನ್ನು ಮಂಡಿಸಿ, ಸಂಘದ ಆದಾಯ–ವೆಚ್ಚ ಹಾಗೂ ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿವರಗಳನ್ನು ಸಭೆಯ ಮುಂದಿಟ್ಟರು. ಸದಸ್ಯರು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಾರಿ ನಿಧಿಶಾ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾವಳಕಟ್ಟೆ ವಲಯದ ಗೌರವಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಗೌರವ ಸಲಹೆಗಾರರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಬಿಯಂತಬೆಟ್ಟು, ಕೋಶಾಧಿಕಾರಿಯಾದ ಚಂದ್ರಶೇಖರ ಶೆಟ್ಟಿ ಪಣೆಕಲ, ಯುವ ವಿಭಾಗದ ಅಧ್ಯಕ್ಷರು ಕಿಶೋರ್ ರೈ ಕಾಡಬೆಟ್ಟು ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುಮಾರಿ ಮಾನ್ವಿ ಪ್ರಾರ್ಥಿಸಿದರು. ಪುನೀತ್ ಶೆಟ್ಟಿ ಕೈಮಾರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು.

Related posts

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ : ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.97.14 ಫಲಿತಾಂಶ

Suddi Udaya

ಕಾರಿನಲ್ಲಿ ಅಕ್ರಮ ದನ ಸಾಗಾಟ : ಧರ್ಮಸ್ಥಳ ಪೊಲೀಸರಿಂದ ಆರೋಪಿಗಳ ಬಂಧನ

Suddi Udaya

ಎ.11: ಕುಡುಮೇರು ಮನೆಯ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ರವರ ಆರೋಗ್ಯ ವಿಚಾರಿಸಿದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!