27.5 C
ಪುತ್ತೂರು, ಬೆಳ್ತಂಗಡಿ
August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿಯಲ್ಲಿ ಸರ್ವಧರ್ಮೀಯರ ಸಮಾವೇಶ

ನಾರಾವಿ: ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು. ಪರಸ್ಪರೋಪಗ್ರಹೋಜೀವಾನಾಂ – ಇದು ಜೈನಧರ್ಮದ ಸಾರವಾಗಿದೆ. ಜೀವನವಿಡೀ ಅಹಿಂಸಾಧರ್ಮದ ಪಾಲನೆಯೊಂದಿಗೆ ಶಿಸ್ತಿನ ಸಿಪಾಯಿಯಾಗಿ, ಧರ್ಮಾನುರಾಗಿಯಾಗಿ, ವೃತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸರ್ವಧರ್ಮಿಯರಿಗೂ ಬಹುಮುಖಿ ಸಮಾಜಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಆದರ್ಶ ಶ್ರಾವಕರತ್ನವಾಗಿ ಮೆರೆದವರು ಎಂದು ನರಸಿಂಹರಾಜಪುರ ಬಸ್ತಿಮಠದ ಪೂಜ್ಯ ಲಕ್ಷ್ಮೀ ಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ಹೊಸ್ಮಾರಿನ ಉದ್ಯಮಿ ಹಾಗೂ ಆದರ್ಶ ಸಮಾಜಸೇವಕ ಎನ್. ಪ್ರೇಮ್‌ಕುಮಾರ್ ಸ್ಮರಣಾರ್ಥವಾಗಿ ಭಾನುವಾರ ನಾರಾವಿಯಲ್ಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಯೋಜಿಸಿದ ಸರ್ವಧರ್ಮೀಯರ ಸಮಾವೇಶದಲ್ಲಿ ಅವರು ವಿನಯಾಂಜಲಿ ಸಲ್ಲಿಸಿ ಮಂಗಲಪ್ರವಚನದೊಂದಿಗೆ ಆಶೀರ್ವಚನ ನೀಡಿದರು.

ಶಾಶ್ವತ ಧರ್ಮಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕ ಹಾಗೂ ಪರಿಪೂರ್ಣ ಅಗುತ್ತದೆ. ಜೈನಧರ್ಮದ ಪ್ರಕಾರ ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದಾಗ ಪುಣ್ಯಸಂಚಯವಾಗಿ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರೇಮ್‌ಕುಮಾರ್ ಅವರ ಆದರ್ಶ ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ವಿನಯಾಂಜಲಿಯಾಗಿದೆ. ಅವರ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಬೇಕು. ಯಾವುದಾದರೂ ಶಾಶ್ವತ ಸೇವಾಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಡಾ. ಪ್ರಸಾದಶೆಟ್ಟಿ ನಾರಾವಿ ಮಾತನಾಡಿ, ಸರ್ವರಿಗೂ ಆಪಾತ್ಭಾಂಧವರಾಗಿ, ಹೃದಯಶ್ರೀಮಂತಿಕೆಯೊಂದಿಗೆ ಸರ್ವಧರ್ಮೀಯರಿಗೂ ಪ್ರೇಮ್‌ಕುಮಾರ್ ಮಾಡಿದ ಸೇವಾ ಕಾರ್ಯಗಳು ಸರ್ವರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು. ಅವರು ಮಾನವೀಯತೆಯ ಸೇವೆಯಿಂದ ಅಮರರಾಗಿದ್ದಾರೆ ಎಂದು ಹೇಳಿದರು.

ನಾರಾವಿ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಜೆರೋಂ ಡಿ’ಸೋಜ ಮಾತನಾಡಿ, ಚರ್ಚ್ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ ಪ್ರೇಮ್‌ಕುಮಾರ್, ಚರ್ಚ್ ಹಾಗೂ ಶಾಲೆಗೆ ನೀಡಿದ ಸೇವೆಯನ್ನು ಸ್ಮರಿಸಿದರು.
ಮೂಡಬಿದ್ರೆಯ ಕೆ. ಅಭಯಚಂದ್ರ ಜೈನ್ ಮಾತನಾಡಿ, ಬಸದಿಗಳು, ಮಠ-ಮಂದಿರಗಳು, ಮಸೀದಿಗಳು, ಚರ್ಚ್ಗಳಿಗೆ ಪ್ರೇಮ್‌ಕುಮಾರ್ ನೀಡಿದ ಸೇವೆಯನ್ನು ಶ್ಲಾಘಿಸಿದರು.

ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಸುನಿಲ್ ಕುಮಾರ್, ಕಾರ್ಕಳದ ಶೇಖರ ಮಡಿವಾಳ, ರವೀಂದ್ರ ಶೆಟ್ಟಿ, ವಕೀಲ ಮುರಳೀಧರ ಭಟ್, ಶ್ರೀರಂಗ ಮಯ್ಯ ಮತ್ತು ನಿವೃತ್ತ ಮುಖೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿದರು.
ಬೆಂಗಳೂರಿನ ದಿಶಾ ಬಳ್ಳಾಲ್ ಸ್ವಾಗತಿಸಿದರು. ವಿಜಯ ಕುಮಾರ್ ನೂರಾಳಬೆಟ್ಟು ಧನ್ಯವಾದವಿತ್ತರು.

ದಿ. ಪ್ರೇಮ್‌ಕುಮಾರ್ ಕುಟುಂಬಸ್ಥರು ಹಾಗೂ ಹಾಸನದ ಡಾ. ಆದರ್ಶ ಮತ್ತು ಡಾ. ಪ್ರತಿಮಾ ಉಪಸ್ಥಿತರಿದ್ದರು.
ಸೂರ್ಯನಾರಾಯಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು.

Related posts

ಮುಂಡಾಜೆ ಸೀಟು ಬಳಿ ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ

Suddi Udaya

ಬಂಗಾಡಿ ಪರಿಸರದಲ್ಲಿ ವಿದ್ಯುತ್ ಸಮಸ್ಯೆ: ಬಗೆಹರಿಸದೆ ಇದ್ದಲ್ಲಿ ಕಛೇರಿಯ ಮುಂದೆ ಪ್ರತಿಭಟನೆ ಗ್ರಾಮಸ್ಥರ ಆಗ್ರಹ

Suddi Udaya

ಪುದುವೆಟ್ಟು ಶ್ರೀಧ.ಮಂ.ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಓಡಿಲ್ನಾಳ ದ.ಕ ಜಿ.ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಪ್ರಾರಂಭೊತ್ಸವ

Suddi Udaya

ಲಾಯಿಲ ಭೂ ಪರಿವರ್ತನೆಯಾಗದ ಜಾಗಕ್ಕೆ ಉದ್ಯಮ ಲೈಸೆನ್ಸ್: ಲೋಕಾಯುಕ್ತದಲ್ಲಿ ದೂರು ದಾಖಲು

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!