ಧರ್ಮಸ್ಥಳ : ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದ ಕಾರ್ಯದರ್ಶಿ ವೀರು ಶೆಟ್ಟಿ ಉದ್ಘಾಟಿಸಿ ಭಜನಾ ಪರಿಷತ್ತು ಕೇವಲ ಧಾರ್ಮಿಕತೆಯಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಪ್ರೌಢ ವ್ಯವಸ್ಥೆಗೆ ಬಂದಿರುವ ಯುವ ಪೀಳಿಗೆಗಳಿಗೆ ಸರಿಯಾದ ಮಾಹಿತಿ ಮಾರ್ಗದರ್ಶನಗಳನ್ನು ಆಗಾಗ ನೀಡಿ ಒಂದು ಉತ್ತಮವಾದ ಯುವ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಹೆಜ್ಜೆ ಇಟ್ಟಿರುವುದು ಶ್ಲಾಘನೀಯವೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಮಣ್ಯ ಪ್ರಸಾದ್ ರವರು ಸಂಸ್ಕಾರ ಮತ್ತು ದೈವ ಬಲದಿಂದ ಯಾವುದೇ ಕಾರ್ಯವನ್ನಾದರೂ ಸಾಧಿಸಬಹುದು ಎಂದರು.
ಇಂದಿನ ಸಂಪನ್ಮೂಲ ವ್ಯಕ್ತಿಗಳಾದ ಉದಯ್ ಬಿ.ಕೆ ವಕೀಲರು ಬೆಳ್ತಂಗಡಿ ಇವರು ಮಾತನಾಡಿ ಭಾರತದ ಆಧ್ಯಾತ್ಮಿಕ ಚಿಂತನೆಯ ಜೊತೆಗೆ ವಿದ್ಯಾರ್ಥಿಗಳು ನೈತಿಕತೆಯ ನೆಲೆಯಲ್ಲಿ ಯಾವ ರೀತಿ ಬೆಳೆಯಬೇಕು ಎಂದು ವಿವರಿಸುತ್ತಾ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆಯ ಅರಿವು, ಮಾದಕ ವ್ಯಸನಕ್ಕೆ ಬಲಿಯಾದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.
ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ರವರು ಮಾತನಾಡಿ ಒಂದು ಗಿಡವನ್ನು ನೆಟ್ಟು ಅದರಿಂದ ಕಾಯಿಯನ್ನು ಪಡೆಯಬೇಕಾದರೆ ಅದಕ್ಕೆ ಆಗಾಗ ನೀರು ಮತ್ತು ಗೊಬ್ಬರವನ್ನು ಹೇಗೆ ಕೊಡುತ್ತೇವೋ ಅದೇ ರೀತಿ ಇಂದಿನ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಬೇಕಾದರೆ ಈ ರೀತಿಯ ನೈತಿಕ ಶಿಕ್ಷಣದ ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ. ಮಂ. ಅ. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಜೈನ್ ಮಾತನಾಡುತ್ತಾ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮವಾದಂತಹ ನೈತಿಕ ಶಿಕ್ಷಣದೊಂದಿಗೆ ಪ್ರೌಢ ವ್ಯವಸ್ಥೆಗೆ ಬಂದಿರುವ ಮಕ್ಕಳಿಗೆ ಬೇಕಾದಂತಹ ಕಾನೂನಿನ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಂತಹ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಪದಾಧಿಕಾರಿಗಳನ್ನು ಅಭಿನಂದಿಸುತ್ತ ವಿದ್ಯಾರ್ಥಿಗಳು ಇಂದು ಇಲ್ಲಿ ಪಡೆದಂತಹ ಮಾಹಿತಿ ಮಾರ್ಗದರ್ಶನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಭಜನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಪಿ ಅಳಿಯೂರು. ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ, ಭಜನಾ ಪರಿಷತ್ತಿನ ಉಜಿರೆ ವಲಯದ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಯುವರಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ಶಿಕ್ಷಕರಾದ ಜಗದೀಶ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಭವ್ಯ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.













