26.2 C
ಪುತ್ತೂರು, ಬೆಳ್ತಂಗಡಿ
August 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಶ್ಚಿಮ ಘಟ್ಟದ ಜನರ ಬದುಕಿನ ಜೊತೆ ಚೆಲ್ಲಾಟ ಬೇಡ: ಕೇಂದ್ರ ಸರ್ಕಾರ ESA ಕರಡು ಅಧಿಸೂಚನೆಯನ್ನು ಹಿಂಪಡೆಯಲಿ : ಕಸ್ತೂರಿರಂಗನ್ ವರದಿ ಜಾರಿಗೆ ತೀವ್ರ ವಿರೋಧ: ರಕ್ಷಿತ್ ಶಿವರಾಂ

ಬೆಳ್ತಂಗಡಿ: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿರುವುದು ಬೆಳ್ತಂಗಡಿ ತಾಲೂಕಿನ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕರ್ನಾಟಕ ಸರ್ಕಾರದ ವಿರೋಧ ಹಾಗೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ.

ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಪ್ರದೇಶಗಳನ್ನು ESA ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಳೆಂಜ, ಕೂತ್ಲೂರು, ಮಲವಂತಿಗೆ, ನಡ, ನಾಲ್ಕೂರು, ನಾವೂರು, ನೆರಿಯ, ಪುದುವೆಟ್ಟು, ರೆಖ್ಯ, ಸವಣಾಲು, ನಾರಾವಿ, ಶಿಬಾಜೆ, ಶಿಶಿಲ, ಶಿರ್ಲಾಲು, ಸುಲ್ಕೇರಿ ಹಾಗೂ ಸುಲ್ಕೇರಿಮೊಗ್ರು ಸೇರಿದಂತೆ ಹಲವು ಗ್ರಾಮಗಳ ಜನರಲ್ಲಿ ಆತಂಕ ಮೂಡಿದೆ.

ಪಶ್ಚಿಮ ಘಟ್ಟವನ್ನು ರಕ್ಷಿಸಬೇಕು ಎಂಬ ವಿಚಾರದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪಶ್ಚಿಮ ಘಟ್ಟದ ಮಡಿಲಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವ ಜನರ ಬದುಕನ್ನೇ ಅನಿಶ್ಚಿತತೆಗೆ ತಳ್ಳುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ”

ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಸೂಕ್ಷ್ಮ ಮತ್ತು ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ವಿಷಯದಲ್ಲಿ ರಾಜ್ಯ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು, ರೈತರು ಹಾಗೂ ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನು ಸಮಗ್ರವಾಗಿ ಪಡೆಯಬೇಕಿತ್ತು.

ಪಶ್ಚಿಮ ಘಟ್ಟದ ಗ್ರಾಮಗಳಲ್ಲಿ ವಾಸಿಸುವ ಜನರು ಕೇವಲ ಅಂಕಿ-ಅಂಶಗಳಲ್ಲ. ಅವರ ಬದುಕು ಕೃಷಿಯೊಂದಿಗೆ ಬೆಸೆದುಕೊಂಡಿದೆ. ಮನೆ, ಜಮೀನು, ತೋಟ, ರಸ್ತೆ, ಮೂಲಸೌಕರ್ಯ ಮತ್ತು ಜೀವನೋಪಾಯದ ಪ್ರಶ್ನೆಗಳು ಅವರ ಮುಂದಿವೆ. ಹೀಗಿರುವಾಗ ದೆಹಲಿಯಲ್ಲಿ ಕುಳಿತು ರೂಪಿಸುವ ನೀತಿಯ ಪರಿಣಾಮವನ್ನು ಬೆಳ್ತಂಗಡಿಯ ಗ್ರಾಮಗಳ ಜನರು ಅನುಭವಿಸುವಂತಾಗಬಾರದು.

ಈ ವಿಚಾರದಲ್ಲಿ ಈ ಭಾಗದ ಶಾಸಕರು, ಸಂಸದರು ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತರಾಗಬಾರದು
ಕೇಂದ್ರ ಸರ್ಕಾರವೇ ಕರಡು ಅಧಿಸೂಚನೆ ಹೊರಡಿಸಿರುವಾಗ ರಾಜ್ಯ ಸರ್ಕಾರವನ್ನು ಮಾತ್ರ ಪ್ರಶ್ನಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಪಕ್ಷದ ಸರ್ಕಾರದ ಮುಂದೆ ನಿಂತು ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ಜನರ ಆತಂಕವನ್ನು ಮನವರಿಕೆ ಮಾಡಿಸುವ ಜವಾಬ್ದಾರಿ ಅವರ ಮೇಲಿದೆ”

ಜನರ ಪರವಾಗಿ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಸಂಬಂಧಪಟ್ಟ ಇಲಾಖೆಗಳ ಮುಂದೆ ಈ ಭಾಗದ ವಾಸ್ತವ ಪರಿಸ್ಥಿತಿಯನ್ನು ಮಂಡಿಸಬೇಕು. ಕರಡು ಅಧಿಸೂಚನೆಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಜನರಿಗೆ ತೊಂದರೆಯಾಗುವ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಡ ಹೇರಬೇಕು.

“ರಾಜ್ಯ ಸರ್ಕಾರ ಜನರ ಪರ ನಿಂತಿದೆ” ತಾಲೂಕಿನ ಸೂಕ್ಷ್ಮ ಪ್ರದೇಶಗಳ ವಾಸ್ತವ ಪರಿಸ್ಥಿತಿಯನ್ನು, ಜನರ ಭಾವನೆಯನ್ನು ಸರ್ಕಾರಕ್ಕೆ ತಿಳಿಸಲಿದ್ದೇನೆ.
ಕರ್ನಾಟಕ ಸರ್ಕಾರ ಈಗಾಗಲೇ ರಾಜ್ಯದ ಹಿತಾಸಕ್ತಿ ಹಾಗೂ ಪಶ್ಚಿಮ ಘಟ್ಟದ ಜನರ ಬದುಕಿನ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯ ಜನರ ಹಕ್ಕು, ಜೀವನೋಪಾಯ ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಪರಿಗಣಿಸಬೇಕು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ.
“ಕಾಂಗ್ರೆಸ್ ಸರ್ಕಾರ ಪರಿಸರ ಸಂರಕ್ಷಣೆಯ ವಿರೋಧಿಯಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಆತಂಕಕ್ಕೆ ದೂಡುವ ಏಕಪಕ್ಷೀಯ ನೀತಿಗಳನ್ನು ನಾವು ವಿರೋಧಿಸುತ್ತೇವೆ. ಜನರ ಬದುಕು ಮತ್ತು ಪರಿಸರ ಎರಡನ್ನೂ ರಕ್ಷಿಸುವ ಸಮತೋಲಿತ ನೀತಿಯೇ ಅಗತ್ಯ” ಕೇಂದ್ರ ಸರ್ಕಾರ ಕೂಡಲೇ ಕರಡು ಅಧಿಸೂಚನೆಯನ್ನು ಮರುಪರಿಶೀಲಿಸಬೇಕು. ರಾಜ್ಯ ಸರ್ಕಾರದೊಂದಿಗೆ ಸಮಗ್ರ ಚರ್ಚೆ ನಡೆಸಬೇಕು. ಸ್ಥಳೀಯ ಜನರ ಅಭಿಪ್ರಾಯ ಪಡೆಯಬೇಕು. ಅಗತ್ಯವಿರುವ ಕಡೆಗಳಲ್ಲಿ ಸಾರ್ವಜನಿಕ ಆಲಿಕೆ ಸಭೆಗಳನ್ನು ನಡೆಸಿ, ಜನರ ಆತಂಕಗಳಿಗೆ ಸ್ಪಷ್ಟ ಉತ್ತರ ನೀಡಬೇಕು.
ಪಶ್ಚಿಮ ಘಟ್ಟ ಉಳಿಯಬೇಕು; ಪಶ್ಚಿಮ ಘಟ್ಟದ ಜನರೂ ಉಳಿಯಬೇಕು. ಪರಿಸರ ಸಂರಕ್ಷಣೆ ಬೇಕು ಆದರೆ ಜನರ ಬದುಕನ್ನು ಬಲಿಕೊಟ್ಟು ಅಲ್ಲ ಎಂದರು.

Related posts

ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು ಮಂಜೂರು

Suddi Udaya

ಮುಂಡಾಜೆ: ಮಂದಿರ ಮಹಾಸಂಘ ಮತ್ತು ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಆರತಿ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : ಏಳನೇ ಸುತ್ತಿನಲ್ಲಿ 6875 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಶ್ರೀ ಮಂಜುನಾಥ ಬನ್ನಿಸ್ ಟಂಟೋಲ’ ಘಟಕಕ್ಕೆ ಚಾಲನೆ

Suddi Udaya

ಮಿತ್ತಬಾಗಿಲು: ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ನಿಧನ

Suddi Udaya
error: Content is protected !!