ಬೆಳ್ತಂಗಡಿ: ಅನೇಕ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿಶ್ರಮದ ಫಲವಾಗಿ ಭಾರತ ಇಂದು ಆಕ್ರಮಣಕಾರರಿಂದ ಬಂಧಮುಕ್ತವಾಗಿದೆ. ಭಾರತೀಯ ಪ್ರತಿಯೊಬ್ಬ ನಾಗರಿಕ ಇಂದು ಶಿಕ್ಷಿತನಾಗುವಲ್ಲಿ ಮೊದಲ ಪ್ರಾಶಸ್ತ್ಯ ನೀಡುತ್ತಿದೆ. ಶಿಕ್ಷಣದ ಬಲದಿಂದ ಎಲ್ಲ ವಿದ್ಯಾರ್ಥಿಗಳು ಭವ್ಯ ಭಾರತದ ಪ್ರಜೆಗಳಾಗಿ ಬೆಳೆಯಲು ಪಣತೊಡಬೇಕು ಎಂದು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಸಂದೇಶ ನೀಡಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಆ.15 ರಂದು 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾವು ಅನುಭವಿಸಿದ ಕಷ್ಟನಷ್ಟವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಪೋಷಕರು ಮಕ್ಕಳನ್ನು ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸುತ್ತಾರೆ. ಆದರೆ ಮಕ್ಕಳು ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿರಬೇಕು. ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಿಸದೆ, ಭವಿಷ್ಯದಲ್ಲಿ ಭಾರತದ ಪ್ರತಿಹಂತದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುವಲ್ಲಿ ದೇಶಪ್ರೇಮ ಕಣಕಣದಲ್ಲೂ ಮೊಳಗಲಿ ಎಂದು ಶುಭಾಶಯಕೋರಿದರು.
ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಈ ಮಂಡಗಳಲೆ ಮಾತನಾಡಿ, ಸಂಘಟಿತ ಭಾರತದ ಕಲ್ಪನೆ ಇಲ್ಲದ ಸಂದರ್ಭದಲ್ಲಿ ಭಾರತದ ಹೆಸರು ಪಾಶ್ಚಿಮಾತ್ತ್ಯದ ಸುತ್ತ ಪಸರಿಸಿತ್ತು. ಭಾರತ ಸಂಬೃದ್ಧ, ಸಂಪದ್ಭರಿತ ರಾಷ್ಟ್ರವಾಗಿ ಜಗತ್ತಿಗೆ ವ್ಯಾಪಾರದ ಕಲ್ಪನೆ ಬಿತ್ತಿದ ಪರಿಣಾಮವೇ ನಮ್ಮ ದೇಶದ ಮೇಲೆ ಅನೇಕರಿಂದ ದಾಳಿಗಳು ಸಂಭವಿಸಿವೆ. ನಮ್ಮ ಸ್ವಾತಂತ್ರ್ಯ ಸಾವಿರಾರು ಘಟನೆಗಳು, ಹಲವಾರು ಜನರ ಬಲಿದಾನದಿಂದ ಬಂದಿರುವುದಾಗಿದೆ. ದೇಶಕ್ಕಾಗಿ ಕ್ರಾಂತಿಕಾರಿಗಳು ರಕ್ತ ಚೆಲ್ಲಿದ ಭೂಮಿಯಲ್ಲಿ ಜನಿಸಿದ ಪೀಳಿಗೆ ನಿಮ್ಮದು. ಹಾಗಾಗಿ ಹೋರಾಟಗಾರರ ಬಲಿದಾನದ ನೆನಪು ಮಾಸದಂತೆ ಅವರ ಆದರ್ಶ ಪಾಲಿಸುವಂತವರಾಗಬೇಕು.

ಇಂದು ದೇಶದಲ್ಲಿ ಕೆಪಿಎಸ್.ಸಿ, ಯುಪಿಎಸ್.ಸಿ. ನೀಟ್ ಹಗರಣಗಳು ಮಕ್ಕಳ ಭಾವನೆಗೆ ಘಾಸಿಗೊಳಿಸಿದೆ. ಇವೆಲ್ಲ ಸಂಕುಚಿತ ಮನೋಭಾವದ ಭಾಗವಾಗಿದೆ. ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸಿ, ದೇಶ ವಿಭಜಿಸುವ ಕೆಲಸಕ್ಕೆ ಮಕ್ಕಳು ಬಲಿಯಾಗಬೇಡಿ. ನಿಮ್ಮತನವನ್ನು ಉಳಿಸುವ ಮೂಲಕ ಪ್ರತಿನಿತ್ಯ ಭಾರತ ಮಾತೆಗೆ ಗೌರವಿಸುವ ಮನೋಭಾವ ನಿಮ್ಮದಾಗಲಿ ಎಂದು ಕರೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ಕೆ.ರೈ, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲರಾದ ಬಾಲಕೃಷ್ಣ ನಾಯಕ್ ಹಾಗೂ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆದಿತ್ಯ ತುಬಾಕಿ ಮತ್ತು ತಂಡದಿಂದ ಧ್ವಜವಂದನೆ ನೆರವೇರಿತು. ವಿಕಸಿತ ಭಾರತ ಎಂಬ ವಿಚಾರವಾಗಿ ಸಾಯಿಜಿತ್ ಹೆಗಡೆ ಮಾತನಾಡಿದರು. ಸ್ವಾತಂತ್ರ್ಯ ವಿಚಾರವಾಗಿ ಪ್ರಥಮ ಪಿಯುಸಿ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ರಚಿಸಿದ ಭಿತ್ತಿಚಿತ್ರಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ದ್ವಿತೀಯ ಪಿಯುಸಿ ಜೆಇಇ ವಿಭಾಗದ ಸೇತುರಾಮ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ನೀಲಕಂಠ ವಂದಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ ಕಾರ್ಯಕ್ರಮ ಸಂಘಟಿಸಿದರು.












