ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಉಡುಪಿ ಕ್ಷಮತ್ವಂ-2026 ರಲ್ಲಿ ಆಟೋಇಮ್ಯೂನ್ ಕಾಯಿಲೆಗಳ ಕುರಿತ ಆಯುರ್ವೇದದ ಆರನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರವರೆಗೆ, ಉಡುಪಿಯ ಭಾವಪ್ರಕಾಶ ಸಭಾಂಗಣದಲ್ಲಿ ಆಯೋಜಿಸಿದೆ. ಸಮ್ಮೇಳನಕ್ಕೆ ಮುನ್ನ ಸೆಪ್ಟೆಂಬರ್ 29ರಂದು ಪೂರ್ವಭಾವಿ ಕಾರ್ಯಾಗಾರ ನಡೆಯಲಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು, ವೈದ್ಯರು, ಶಿಕ್ಷಕರು ಹಾಗೂ ಆಯುರ್ವೇದ ಕ್ಷೇತ್ರದ ಪರಿಣಿತರು ಭಾಗವಹಿಸಲಿರುವ ಈ ಸಮ್ಮೇಳನದಲ್ಲಿ ಆಯುರ್ವೇದದ ದೃಷ್ಟಿಕೋನದಿಂದ ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ.
“ಆಟೋಇಮ್ಯೂನ್ ಕಾಯಿಲೆಗಳಲ್ಲಿ ಆಯುರ್ವೇದ: ಸಾಂಪ್ರದಾಯಿಕ ಜ್ಞಾನ ಮತ್ತು ಜಾಗತಿಕ ಆರೋಗ್ಯಸೇವೆಯ ನಡುವಿನ ಸೇತುವೆ” ಎಂಬ ವಿಷಯದಡಿ ನಡೆಯಲಿರುವ ಈ ಸಮ್ಮೇಳನವು ಆಯುರ್ವೇದದ ಮೂಲ ತತ್ವಗಳನ್ನು ಆಧುನಿಕ ರೋಗನಿರೋಧಕ ವಿಜ್ಞಾನ, ವೈದ್ಯಕೀಯ ವಿಜ್ಞಾನ ಹಾಗೂ ಕ್ಲಿನಿಕಲ್ ಸಂಶೋಧನೆಗಳೊಂದಿಗೆ ಸಮನ್ವಯಗೊಳಿಸುವ ಸಾಧ್ಯತೆಗಳನ್ನು ಅನ್ವೇಷಿಸಲಿದೆ. ವ್ಯಾಧಿಕ್ಷಮತ್ವ, ಓಜಸ್, ಅಗ್ನಿ, ರಸಾಯನ ಮತ್ತು ವೈಯಕ್ತಿಕ ಆರೋಗ್ಯ ನಿರ್ವಹಣೆ ಸೇರಿದಂತೆ ಹಲವು ಆಯುರ್ವೇದ ಪರಿಕಲ್ಪನೆಗಳ ಕುರಿತು ತಜ್ಞರ ಚರ್ಚೆಗಳು ನಡೆಯಲಿದ್ದು, ಸಾಕ್ಷ್ಯಾಧಾರಿತ ಸಂಶೋಧನೆ ಹಾಗೂ ಬಹುಶಾಖಾ ಸಂವಾದಕ್ಕೆ ಉತ್ತೇಜನ ನೀಡಲಾಗುವುದು.
ಸಮ್ಮೇಳನದ ಮಹತ್ವದ ಕುರಿತು ಮಾತನಾಡಿದ ಪದ್ಮ ವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ; ಕುಲಾಧಿಪತಿಗಳು, ಎಸ್‌ಡಿಎಂ ವಿಶ್ವವಿದ್ಯಾಲಯ; ಹಾಗೂ ಅಧ್ಯಕ್ಷರು, ಎಸ್‌ಡಿಎಂ ಶಿಕ್ಷಣ ಸಂಸ್ಥೆ(ರಿ.), ಉಜಿರೆ, “ಕ್ಷಮತ್ವಂ-2026 ಆಯುರ್ವೇದವನ್ನು ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ಮುನ್ನಡೆಸುವ ಮತ್ತು ಅರ್ಥಪೂರ್ಣ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಂವಾದಕ್ಕೆ ವೇದಿಕೆಯಾಗುವ ನಮ್ಮ ನಿರಂತರ ಪ್ರಯತ್ನದ ಪ್ರತೀಕವಾಗಿದೆ. ದೀರ್ಘಕಾಲಿಕ ಕಾಯಿಲೆಗಳ ನಿರ್ವಹಣೆಗೆ ಜಗತ್ತಿನ ಆರೋಗ್ಯ ವ್ಯವಸ್ಥೆಗಳು ಸಮಗ್ರ ಮತ್ತು ಸುಸ್ಥಿರ ಪರಿಹಾರಗಳನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಹಾಗೂ ಆಧುನಿಕ ವೈಜ್ಞಾನಿಕ ಸಂಶೋಧನೆಗಳ ನಡುವೆ ಅರ್ಥಪೂರ್ಣ ಸಂವಾದ ಅತ್ಯಗತ್ಯವಾಗಿದೆ. ಈ ಸಮ್ಮೇಳನದ ಮೂಲಕ ಜಾಗತಿಕ ಸಹಯೋಗವನ್ನು ಬಲಪಡಿಸಿ, ಗುಣಮಟ್ಟದ ಸಂಶೋಧನೆಗೆ ಉತ್ತೇಜನ ನೀಡಿ, ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆ ಮತ್ತು ಮಾನವ ಆರೋಗ್ಯ ವೃದ್ಧಿಯಲ್ಲಿ ಆಯುರ್ವೇದದ ಪಾತ್ರದ ಕುರಿತು ಇನ್ನಷ್ಟು ಆಳವಾದ ಅರಿವು ಮೂಡಿಸುವ ಆಶಯ ಹೊಂದಿದ್ದೇವೆ” ಎಂದು ಹೇಳಿದರು.
ಇದೇ ವಿಚಾರವನ್ನು ಪ್ರತಿಧ್ವನಿಸಿದ ಡಾ. ಮಮತಾ ಕೆ.ವಿ., ಪ್ರಾಂಶುಪಾಲರು, ಎಸ್.ಡಿ.ಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಹಾಗೂ ಕ್ಷಮತ್ವಂ-2026ರ ಮುಖ್ಯ ಸಂಘಟನಾ ಕಾರ್ಯದರ್ಶಿ ಮಾತನಾಡಿ, “ಸಾಂಪ್ರದಾಯಿಕ ಆಯುರ್ವೇದ ಜ್ಞಾನ ಮತ್ತು ಸಮಕಾಲೀನ ವೈಜ್ಞಾನಿಕ ಸಂಶೋಧನೆಯ ನಡುವಿನ ಅರ್ಥಪೂರ್ಣ ಸಂವಾದಕ್ಕೆ ಕ್ಷಮತ್ವಂ-2026 ವೇದಿಕೆಯಾಗಲಿದೆ. ಆಯುರ್ವೇದ, ರೋಗನಿರೋಧಕ ವಿಜ್ಞಾನ ಮತ್ತು ಸಂಬಂಧಿತ ವಿಭಾಗಗಳ ತಜ್ಞರನ್ನು ಒಂದೇ ವೇದಿಕೆಗೆ ತರಲು, ಆಟೋಇಮ್ಯೂನ್ ಕಾಯಿಲೆಗಳ ಚಿಕಿತ್ಸೆಯಲ್ಲಿ ಆಯುರ್ವೇದದ ಪರಿಣಾಮಕಾರಿತ್ವಕ್ಕೆ ಹೆಚ್ಚಿನ ವೈಜ್ಞಾನಿಕ ಸಾಕ್ಷ್ಯಗಳನ್ನು ಒದಗಿಸುವ ಸಂಶೋಧನೆಗೆ ಉತ್ತೇಜನ ನೀಡಲು ಹಾಗೂ ಜಾಗತಿಕ ಆರೋಗ್ಯ ಚರ್ಚೆಗಳಿಗೆ ಕೊಡುಗೆ ನೀಡಲು ಈ ಸಮ್ಮೇಳನ ನೆರವಾಗಲಿದೆ” ಎಂದು ತಿಳಿಸಿದರು.
ವೈಜ್ಞಾನಿಕ ಸಮಿತಿ ಆಯ್ಕೆ ಮಾಡುವ ಪ್ರಬಂಧಗಳು ಹಾಗೂ ಪೋಸ್ಟರ್‌ಗಳಿಗೆ ಸಮ್ಮೇಳನದಲ್ಲಿ ನೇರ ಅಥವಾ ಆನ್‌ಲೈನ್ ಪ್ರಸ್ತುತಿ ಅವಕಾಶ ದೊರೆಯಲಿದೆ. ಅತ್ಯುತ್ತಮ ಸಂಶೋಧನಾ ಪ್ರಬಂಧ ಮತ್ತು ಪೋಸ್ಟರ್‌ಗಳಿಗೆ ವಿಶೇಷ ಪ್ರಶಸ್ತಿಗಳನ್ನೂ ನೀಡಲಾಗುವುದು.
ಎರಡು ದಿನಗಳ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಳು, ವಿಶೇಷ ವೈಜ್ಞಾನಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು, ಸಂಶೋಧನಾ ಪ್ರಬಂಧ ಹಾಗೂ ಪೋಸ್ಟರ್ ಪ್ರದರ್ಶನಗಳು ನಡೆಯಲಿವೆ. ಆಯುರ್ವೇದ, ರೋಗನಿರೋಧಕ ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳ ಖ್ಯಾತ ತಜ್ಞರು ಭಾಗವಹಿಸಲಿದ್ದಾರೆ. ಡಾ. ಶ್ರೀನಿವಾಸ ಹೆಜ್ಮಾಡಿ ಆಚಾರ್ಯ, ಡಾ. ವಿಶ್ವೇಶ್ವರಯ್ಯ ಪ್ರಕಾಶ್, ಡಾ. ಭೂಷಣ್ ಪಟವರ್ಧನ್, ಡಾ. ಜಾರ್ಜ್ ಲೂಯಿಸ್ ಬೆರ್ರಾ, ಡಾ. ರಾಮಮನೋಹರ್ ಪುತಿಯೇಡತ್ ಹಾಗೂ ಡಾ. ಸಂಜೀವ್ ರಸ್ತೋಗಿ, ಡಾ. ಶಶಿಕಿರಣ್ ಉಮಾಕಾಂತ್, ಡಾ. ಕ್ರಿಶ್ಚಿಯನ್ ಕೆಸ್ಲರ್, ಡಾ. ಯೋಗೇಶ್ ಬೆಂದಾಳೆ, ಡಾ. ಕಿಶೋರ್ ಕುಮಾರ್, ಡಾ. ಆಂಟೋನಿಯೊ ಮೊರಾಂಡಿ, ಡಾ. ಅನಿತಾ ಕರಿಲಿಯೊ ಅರ್ಕಾಸ್, ಡಾ. ಪ್ರಶಾಂತ್ ಎ.ಎಸ್. ಸೇರಿದಂತೆ ಅಂತರರಾಷ್ಟ್ರೀಯ ಖ್ಯಾತಿಯ ತಜ್ಞರು ಉಪನ್ಯಾಸಗಳನ್ನು ನೀಡಲಿದ್ದಾರೆ. ಆಟೋಇಮ್ಯೂನ್ ಕಾಯಿಲೆಗಳ ವಿವಿಧ ಆಯಾಮಗಳು ಹಾಗೂ ಆಯುರ್ವೇದ ಕ್ಷೇತ್ರದಲ್ಲಿನ ಸಂಶೋಧನೆಯ ವ್ಯಾಪ್ತಿಯ ಕುರಿತು ಬೆಳಕು ಚೆಲ್ಲಲಾಗುವುದು.
ಸಮ್ಮೇಳನದ ಪೂರ್ವಭಾವಿಯಾಗಿ ಸೆಪ್ಟೆಂಬರ್ 29ರಂದು ವಿಶೇಷ ಕಾರ್ಯಾಗಾರ ನಡೆಯಲಿದ್ದು, ಆಟೋಇಮ್ಯೂನ್ ಕಾಯಿಲೆಗಳ ಸಂಶೋಧನಾ ಮಾದರಿಗಳು, ಡ್ರಗ್ ಸರ್ವೇ, ಮರ್ಮ ಚಿಕಿತ್ಸೆ ಹಾಗೂ ಹೊರರೋಗಿ ವಿಭಾಗ ಆಧಾರಿತ ಪಂಚಕರ್ಮ ವಿಧಾನಗಳ ಕುರಿತು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಶೋಧನೆ ಮತ್ತು ವೈದ್ಯಕೀಯ ಅನ್ವಯಿಕೆಗಳ ಕುರಿತು ಭಾಗವಹಿಸುವವರಿಗೆ ಪ್ರಾಯೋಗಿಕ ಹಾಗೂ ಶೈಕ್ಷಣಿಕ ಅನುಭವ ಒದಗಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.
ಸಮ್ಮೇಳನದ ಅಂಗವಾಗಿ ಆಯುರ್ವೇದ ಎಕ್ಸ್‌ಪೋ ಆಯೋಜಿಸಲಾಗಿದ್ದು, ಆಯುರ್ವೇದ ಔಷಧ ಉತ್ಪಾದನೆ, ರೋಗನಿರ್ಣಯ, ಸಂಶೋಧನೆ, ಆರೋಗ್ಯ ತಂತ್ರಜ್ಞಾನ, ಪ್ರಕಟಣೆಗಳು ಹಾಗೂ ವೆಲ್‌ನೆಸ್ ಸೇವೆಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾರಿಕಾ ಪ್ರದರ್ಶನ ಮಳಿಗೆಗಳನ್ನು ಒಳಗೊಂಡಿರುತ್ತದೆ. 2,೦೦೦ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕಾ ಕ್ಷೇತ್ರಗಳ ನಡುವೆ ಜ್ಞಾನ ವಿನಿಮಯ ಮತ್ತು ಸಹಯೋಗಕ್ಕೆ ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ.











