September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುತ್ಲೂರು ಮತ್ತು ನಾವೂರಿಗೆ ವಿದ್ಯುತ್ ಯೋಜನೆ ಮಂಜೂರಾತಿಗೆ ಶಾಸಕರ ಶ್ರಮವೇ ಕಾರಣ

ಬೆಳ್ತಂಗಡಿ: ಈಗಿನ ರಾಜ್ಯ ಸರ್ಕಾರಕ್ಕೆ ಆರು ತಿಂಗಳಿನಿಂದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗಿಲ್ಲ. ಬಜೆಟ್‌ನಲ್ಲಿ ಪೌಷ್ಟಿಕ ಆಹಾರಕ್ಕೆ ಮೀಸಲಿಟ್ಟ ಹಣವನ್ನು ದೋಚುವ ಕೆಲಸ ಮಾಡಲಾಗುತ್ತಿದೆ. ವಾಲ್ಮೀಕಿ ಹಗರಣದಲ್ಲಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಣ್ಣ ಮುಂದೆಯೇ ದೋಚುವಾಗ ಕಮ್ಯೂನಿಸ್ಟ್ ಮೆದುಳಿನ ಕಾಂಗ್ರೆಸ್ ಪ್ರೇರಿತ ಹೋರಾಟಗಾರರು ತುಟಿ ಬಿಚ್ಚಿಲ್ಲ. ಶೇಖರ್ ಲಾಯಿಲ ಮತ್ತವರ ತಂಡ ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಹರೀಶ್ ಪೂಂಜರವರು ಏನೂ ಕೆಲಸ ಮಾಡಿಲ್ಲ, ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಹೇಳಿದರು.


ಅವರು ಸೆ.7 ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹರೀಶ್ ಪೂಂಜಾರವರು ಶಾಸಕರಾದ ಬಳಿಕ ನಮ್ಮ ಸಮುದಾಯದ ಸಮಸ್ಯೆಯನ್ನು ಅವರ ಗಮನಕ್ಕೆ ತಂದಾಗ ಅವರು ಕಾಲೋನಿಗಳಿಗೆ ಭೇಟಿ ನೀಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ವಿದ್ಯುತ್ ಸೌಲಭ್ಯದ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಪ್ರಮುಖವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವನ್ಯಜೀವಿ ಮಂಡಳಿಯ ಅನುಮತಿಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು. ಆ ಸಭೆಯಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಬೇಡ ಎಂಬ ತೀರ್ಮಾನಕ್ಕೆ ಕುದುರೆಮುಖ ಡಿಎಫ್‌ಒ ಸಮ್ಮತಿಯನ್ನು ಸೂಚಿಸಿದ್ದರು. ನಂತರ ವೈಯಕ್ತಿಕಅರಣ್ಯ ಹಕ್ಕುಪತ್ರ ಇದ್ದಾಗ ಫಾರೆಸ್ಟ್ ಕ್ಲಿಯರೆನ್ಸ್ ಬೇಡ, ಇಲ್ಲದೆ ಇದ್ದಾಗ ಫಾರೆಸ್ಟ್ ಕ್ಲಿಯರೆನ್ಸ್ ಬೇಕು ಎಂಬ ಸೂಚನೆಯನ್ನು ನೀಡಿದರು. ನಂತರ ೨೦೨೫ ಅ.26ರಂದು 7 ಕಾಮಗಾರಿಗಳಿಗೆ 6 ಪ್ರಸ್ತಾವನೆಗಳನ್ನು ಸಲ್ಲಿಸಲಾಯಿತು. ಸದ್ರಿ ಪ್ರಸ್ತಾವನೆಗಳಿಗೆ ೨೦೨೬ ಎ.೧೬ರಂದು ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಹಾಗೂ ೨೦೨೬ ಸೆ.೯ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ದೊರೆತಿದೆ. ೨೦೨೬ ಮೇ 7ರಂದು ೦೭-೦೫-೨೦೨೬ರಂದು ಪಿಸಿಸಿಎಫ್ ಎಲ್ಲಾ ಕಡತಗಳನ್ನು ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು. ಹೀಗೆ ಹಂತ ಹಂತವಾಗಿ ಕೆಲಸಗಳು ನಿಧಾವಾಗಿ ನಡೆಯುತ್ತಾ ಬಂತು.ಈ ಎಲ್ಲಾ ಬೆಳವಣಿಗೆಗೆ ಶಾಸಕರು ಒತ್ತಡ ಹಾಕುವುದರ ಜೊತೆಗೆ ತಮ್ಮ ಆಪ್ತ ಸಹಾಯಕರ ಮೂಲಕ ಕಡತಗಳ ಸ್ಥಿತಿಗತಿಯ ಬಗ್ಗೆ ಇಲಾಖೆಗಳ ಜೊತೆಯಲ್ಲಿ ನಿರಂತರವಾಗಿ ಸಂವಹನ ನಡೆಸುತ್ತಿದ್ದರು ಎಂದರು.


2026 ಮೇ 21ರಂದು ಕುತ್ಲೂರು ಮತ್ತು ನಾವೂರುಗೆ ಸಂಬಂಧಪಟ್ಟ ಕಡತಗಳನ್ನು ಸಚಿವಾಲಯಕ್ಕೆ ರವಾನೆ ಮಾಡಲಾಯಿತು. ಉಳಿದ ನಾಲ್ಕು ಕಡತಗಳಿಗೆ ವಿವರಣೆ ಕೇಳಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ, ಶಾಸಕರು ಬೆಂಗಳೂರಿನಲ್ಲಿ ಇಲಾಖಾ ಮುಖ್ಯಸ್ಥರನ್ನು ಭೇಟಿಯಾಗಲು ಇದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಾನೂ ಕೂಡ ಶಾಸಕರ ಜೊತೆ ಬೆಂಗಳೂರಿಗೆ ತೆರಳಿ ಇಲಾಖೆಗಳ ಅಧಿಕಾರಿಗಳನ್ನು ಭೇಟಿಯಾಗಿ, ಜನರ ಕಷ್ಟಗಳನ್ನು ಮನವರಿಕೆ ಮಾಡಿ, ಕಡತಗಳನ್ನು ಇತ್ಯರ್ಥಪಡಿಸಲು ಮನವಿ ಮಾಡಿದ್ದೇವೆ. ಹೀಗೆ ಹಂತ ಹಂತವಾಗಿ ಪ್ರಕ್ರಿಯೆಗಳು ಮುಗಿದು ವನ್ಯಜೀವಿ ಮಂಡಳಿಯ ಅನುಮತಿ ದೊರೆತಿದೆ. ವನ್ಯಜೀವಿ ಮಂಡಳಿಯ ಅನುಮತಿ ದೊರೆತ ನಂತರ ಫಾರೆಸ್ಟ್ ಕ್ಲಿಯರೆನ್ಸ್ ಹಾಗೂ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩(೨) ಅಡಿಯಲ್ಲಿ ಭೂ ಪರಿವರ್ತನೆ ಆಗಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆ ಭಾಗದ ಜನರಿಗೆ ಮಾಹಿತಿ ನೀಡುವುದು ನಮ್ಮೆಲ್ಲರಿಗೂ ತಾತ್ಕಾಲಿಕವಾಗಿ ಸಂಭ್ರಮದ ದಿನ ಎಂದು ಭಾವಿಸಿದ್ದೇವೆ ಎಂದು ತಿಳಿಸಿದರು.
ಈ ಮಧ್ಯೆ ಒಂದಷ್ಟು ಜನ ವನ್ಯಜೀವಿ ಮಂಡಳಿಯ ಅನುಮತಿಯನ್ನು ನಾವೇ ಕೊಡಿಸಿದ್ದೇವೆ, ಅನುದಾನಕ್ಕಾಗಿ ಇಂಧನ ಸಚಿವರಿಗೆ ಮನವಿ ಮಾಡಿದ್ದೇವೆ ಎಂಬ ರೀತಿಯಲ್ಲಿ ಬಿಂಬಿಸಿ, ಆ ಭಾಗದ ಒಂದಷ್ಟು ಜನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ನಾವೇ ಎಲ್ಲವನ್ನೂ ಮಾಡಿದ್ದೇವೆ ಎಂದು ಬಿಂಬಿಸುವ ಕೆಲಸಗಳು ನಡೆದಿವೆ. ಹರೀಶ್ ಪೂಂಜರು ಏನೂ ಕೆಲಸ ಮಾಡಿಲ್ಲ, ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.


ಭೂನ್ಯಾಯ ಮಂಡಳಿಯ ಬೆಳ್ತಂಗಡಿಯ ನಿಕಟಪೂರ್ವ ಸದಸ್ಯ ಹರೀಶ್ ಎಳನೀರು ಮಾತನಾಡಿ, ಹರೀಶ್ ಪೂಂಜರವರ ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾದ ಕುತ್ಲೂರಿಗೆ ಡಾಮರೀಕರಣವಾಯಿತು, ಕುಗ್ರಾಮದಂತೆ ಇದ್ದ ಎಳನೀರು ಪ್ರದೇಶಗಳ ಅಭಿವೃದ್ಧಿಯಾಯಿತು, ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದು ಶಾಸಕ ಹರೀಶ್ ಪೂಂಜರವರು. ಮಲೆಕುಡಿಯ ಸಮುದಾಯದ ಕಾಲೋನಿಗಳಿಗೆ ಈ ಹಿಂದಿನ ಎಲ್ಲಾ ಶಾಸಕರಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. ನಾವೂರು ಮತ್ತು ಕುತ್ಲೂರಿಗೆ ವಿದ್ಯುತ್‌ಗೆ ಶಾಸಕರ ಪ್ರಯತ್ನವೇ ಕಾರಣವಾಗಿದೆ. ತಾಂತ್ರೀಕ ಅನುಮೋದನೆ ಅನುದಾನ ಇಟ್ಟೇ ಮಾಡುವುದು, ಮೊನ್ನೆ ಪ್ರೇಸ್‌ಮೀಟ್‌ನಲ್ಲಿ ಅನುದಾನಕ್ಕಾಗಿ ಸಚಿವರಿಗೆ ಮನವಿ ಮಾಡಿದ್ದೇವೆ ಎಂಬುದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ತಿಳಿಸಿದರು.


ಉಮಾನಾಥ್ ಕಳಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಧರ್ಮಸ್ಥಳ, ವಿಠಲ ಕೊಕ್ಕಡ ನಿಕಟಪೂರ್ವ ಟ್ರಸ್ಟಿಗಳು ಸೌತಡ್ಕ ಮಹಾಗಣಪತಿ ದೇವಸ್ಥಾನ ಪೂರಕ ಮಾಹಿತಿ ನೀಡಿದರು. ಪಟ್ಟಣ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಲಲಿತ ಉಪಸ್ಥಿತರಿದ್ದರು.

Related posts

ಮಾಲಾಡಿ: ಕೊಲ್ಪದಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Suddi Udaya

ನ್ಯಾಯವಾದಿಯಾಗಿ 25 ವರ್ಷ ಪೂರೈಸಿದ ಬಿ.ಕೆ. ಧನಂಜಯ ರಾವ್ ರವರಿಗೆ ಶಿಷ್ಯ ವೃಂದದಿಂದ ಸನ್ಮಾನ

Suddi Udaya

ಹೊಸಂಗಡಿ ಬಲ್ಲಂಗೇರಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.2ಲಕ್ಷ ಡಿಡಿ ವಿತರಣೆ

Suddi Udaya

ಅರಸಿನಮಕ್ಕಿ ಪರಿಸರದಲ್ಲಿ ತೋಟಗಳಿಗೆ ಕಾಡಾನೆ ದಾಳಿ: ಕೃಷಿ ಸೋತ್ತುಗಳ ನಾಶ.

Suddi Udaya

ಹತ್ಯಡ್ಕ: ಕಾಂಗ್ರೆಸ್ ಬೂತ್ ಕಾರ್ಯಕರ್ತರ ಸಭೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಆರೋಗ್ಯ ಮಾಹಿತಿ ಹಾಗೂ ತಪಾಸಣೆ

Suddi Udaya
error: Content is protected !!