ವೇಣೂರು: ಕರಿಮಣೇಲು ಬೋಳೂರು ಶ್ರೀ ಮಹಮ್ಮಾಯಿ ದೇವಸ್ಥಾನ ಉತ್ತೂರ್ಲೊಟ್ಟುವಿನಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಸಹಯೋಗದೊಂದಿಗೆ ಭಜನಾ ಮಂಡಳಿ ಉದ್ಘಾಟನೆ, ಭಜನಾ ಮಾಹಿತಿ, ತಾಳ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಭಜನಾ ಗುರುಗಳಾದ ಸಂದೇಶ್ ಮದ್ದಡ್ಕ ರವರು ದೀಪ ಬೆಳಗಿಸಿ ಉದ್ಘಾಟಿಸಿ ಹಳ್ಳಿಗಳಲ್ಲಿ ಭಜನಾ ಕಾರ್ಯಕ್ರಮಗಳು ಇಡೀ ಊರಿನ ಜನರನ್ನು ಒಂದೆಡೆ ಸೇರಿಸುತ್ತವೆ. ಇದು ಗ್ರಾಮಸ್ಥರಲ್ಲಿ ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನ ಭಾವನೆಯನ್ನು ಹೆಚ್ಚಿಸುತ್ತದೆ ಎಂದರು.

ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಭಜನೆಯು ಕೇವಲ ಭಕ್ತಿ ಮಾರ್ಗ ಅಥವಾ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಸಮಾಜದ ದೊಡ್ಡ ಪರಿವರ್ತನೆಗೆ ಶಕ್ತಿಶಾಲಿ ಮಾಧ್ಯಮವಾಗಿದೆ. ಇತಿಹಾಸದಲ್ಲಿ ಪುರಂದರದಾಸರು, ಕನಕದಾಸರು, ಮತ್ತು ಬಸವಣ್ಣನವರಂತಹ ಶರಣರು, ಸಂತರು ಭಜನೆ ಮತ್ತು ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.ಭಜನೆಗಳ ಸಾಹಿತ್ಯದಲ್ಲಿ ಕೇವಲ ದೇವರ ನಾಮ ಇರುವುದಿಲ್ಲ. ಬದಲಿಗೆ ಸತ್ಯ, ಪ್ರಾಮಾಣಿಕತೆ, ದುಶ್ಚಟಗಳಿಂದ ದೂರವಿರುವುದು, ಮತ್ತು ನೈತಿಕ ಮೌಲ್ಯಗಳ ಬಗ್ಗೆ ಸಂದೇಶಗಳಿರುತ್ತವೆ. ಇದು ಜನರ ಆಲೋಚನಾ ಶೈಲಿಯನ್ನು ಉತ್ತಮ ಪಥದತ್ತ ಬದಲಾಯಿಸುತ್ತದೆ. ದುರ್ಗಾಂಬಿಕಾ ಭಜನಾ ಮಂಡಳಿ ಮೂಲಕ ಸಮಾಜದಲ್ಲಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯಲಿ ಎಂದರು.

ವೇದಿಕೆಯಲ್ಲಿ ಮಂಡಳಿಯ ಪ್ರಮುಖರಾದ ಕರ್ಣ, ರಾಘು ನಾಯ್ಕ್, ಪ್ರವೀಣ್ ಪಡ್ಲಾ, ದೋಗು ನಾಯ್ಕ್, ಜಾರಪ್ಪ ಪೂಜಾರಿ, ಭಾಸ್ಕರ ಪೂಜಾರಿ, ಹರಿಶ್ಚಂದ್ರ ನಾಯ್ಕ, ಸುಮ ಅಶೋಕ ನಾಯ್ಕ ಉಪಸ್ಥಿತರಿದ್ದರು. ಕುಮಾರಿ ಸುಪ್ರೀಯ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರು, ಭಜನಾ ಮಂಡಳಿ ಸದಸ್ಯರು, ಪೊಷಕರು ಭಾಗವಹಿಸಿದ್ದರು.












